ಅಪ್ರಾಪ್ತ ಬಾಲಕಿ ಮೇಲಿನ ಅತ್ಯಾಚಾರ ಪ್ರಕರಣದ ವಿಚಾರಣೆ ವೇಳೆ ಡಿಎನ್‌ಎ ವರದಿಯನ್ನು ನಿರ್ಲಕ್ಷಿಸಲಾಗಿದ್ದು, ಬುಡಕಟ್ಟು ಸಮುದಾಯದ ವ್ಯಕ್ತಿಯೊಬ್ಬರನ್ನು ಅಪರಾಧಿ ಎಂದು ಘೋಷಿಸಿ ಜೈಲು ಶಿಕ್ಷೆ ವಿಧಿಸಲಾಗಿದೆ. ನ್ಯಾಯಾಧೀಶರು ಸಾಕ್ಷ್ಯಗಳನ್ನು ಸರಿಯಾಗಿ ಪರಿಶೀಲಿಸಿಲ್ಲ ಎಂಬ ಆರೋಪ ಕೇಳಿಬಂದಿದ್ದು, ನ್ಯಾಯಾಧೀಶರು ಸೇರಿದಂತೆ ಇಬ್ಬರು ನ್ಯಾಯಾಂಗ ಅಧಿಕಾರಿಗಳ ವಿರುದ್ಧ ಮಧ್ಯಪ್ರದೇಶ ಹೈಕೋರ್ಟ್ ವಿಚಾರಣೆ ಆರಂಭಿಸಿದೆ.
ಶಿಕ್ಷೆಗೆ ಗುರಿಯಾಗಿರುವ ಆರೋಪಿಯ ರಕ್ತದ ಮಾದರಿಗಳು ಅಪರಾಧ ನಡೆದ ಸ್ಥಳದಿಂದ ಸಂಗ್ರಹಿಸಲಾದ ಸಾಕ್ಷ್ಯಕ್ಕೆ ಹೊಂದಿಕೆಯಾಗುತ್ತಿಲ್ಲ ಎಂದು ಡಿಎನ್‌ಎ ವರದಿಯಲ್ಲಿ ಹೇಳಲಾಗಿತ್ತು. ಆದರೆ, ಆ ವರದಿಯಲ್ಲಿ ನ್ಯಾಯಾಧೀಶರು ಸರಿಯಾಗಿ ಪರಿಶೀಲಿಸದೆ, ನಿರ್ಲಕ್ಷಿಸಿದ ಪರಿಣಾಮ, ಬುಡಕಟ್ಟು ಸಮಯದಾಯದ ಆರೋಪಿ ಬಾಬು ಲಾಲ್ ಸಿಂಗ್ ಗೊಂಡ್ ಜೈಲು ಪಾಲಾಗಿದ್ದಾರೆ ಎಂದು ವರದಿಯಾಗಿದೆ.
ಈ ಗಂಭೀರ ಆರೋಪದ ಬಗ್ಗೆ ಮಧ್ಯಪ್ರದೇಶ ಹೈಕೋರ್ಟ್‌ನ ನ್ಯಾಯಮೂರ್ತಿ ವಿವೇಕ್ ಅಗರವಾಲ್ ಮತ್ತು ದೇವನಾರಾಯಣ ಮಿಶ್ರಾ ಅವರ ಪೀಠವು ವಿಚಾರಣೆ ನಡೆಸಿದೆ. “ಅತ್ಯಾಚಾರ ಪ್ರಕರಣದ ವಿಚಾರಣೆ ವೇಳೆ ವಿಶೇಷ ಪೋಕ್ಸೊ ನ್ಯಾಯಾಧೀಶ ವಿವೇಕ್ ಸಿಂಗ್ ರಘುವಂಶಿ ಮತ್ತು ಸಹಾಯಕ ಜಿಲ್ಲಾ ಪ್ರಾಸಿಕ್ಯೂಷನ್ ಅಧಿಕಾರಿ ಬಿ.ಕೆ ವರ್ಮಾ ಅವರು ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರಿಸಿದ್ದು, ಬುಡಕಟ್ಟು ವ್ಯಕ್ತಿಗೆ 20 ವರ್ಷ ಜೈಲು ಶಿಕ್ಷೆ ವಿಧಿಸಿದ್ದಾರೆ” ಎಂದು ಅಸಮಾದಾನ ವ್ಯಕ್ತಪಡಿಸಿದೆ.
ಪೀಠವು ತನ್ನ ಆದೇಶದಲ್ಲಿ, “ವರದಿಯನ್ನು ಪ್ರದರ್ಶಿಸುವುದು, ಪರಿಶೀಲಿಸುವುದು ಹಾಗೂ ಆ ಡಿಎನ್‌ಎ ವರದಿಗೆ ಸಂಬಂಧಿಸಿದಂತೆ ಆರೋಪಿಗಳ ಹೇಳಿಕೆಗಳನ್ನು ದಾಖಲಿಸದಿರುವುದು ಮಿನಲ್ ಪ್ರಕ್ರಿಯಾ ಸಂಹಿತೆಯ ಸೆಕ್ಷನ್ 313ಅಡಿಯಲ್ಲಿ ನ್ಯಾಯಾಧೀಶರು ಮತ್ತು ಅಧಿಕಾರಿಗಳ ಕರ್ತವ್ಯವಾಗಿದೆ. ಆದರೆ, ವಿಚಾರಣೆಯನ್ನು ಸರಿಯಾಗಿ ನಡೆಸಲಾಗಿಲ್ಲ. ಡಿಎನ್‌ಎ ವರದಿಯನ್ನು ಪರಿಶೀಲಿಸಲಾಗಿಲ್ಲ. ವರಿದಯನ್ನು ಪ್ರದರ್ಶಿಸದ ಎಡಿಪಿಒ ಬಿ.ಕೆ ವರ್ಮಾ ಅವರ ನಡವಳಿಕೆಯ ವಿರುದ್ಧ ತನಿಖೆ ನಡೆಸಬೇಕು. ನ್ಯಾಯಾಧೀಶ ವಿವೇಕ್ ಸಿಂಗ್ ರಘುವಂಶಿ ಅವರ ನಿರ್ಲಕ್ಷ್ಯ ಮತ್ತು ಕರ್ತವ್ಯಲೋಪಕ್ಕಾಗಿ ಅವರ ವಿರುದ್ಧವೂ ತನಿಖೆಯನ್ನು ನಡೆಯಬೇಕು” ಎಂದು ಹೇಳಿದೆ.
ಈ ವರದಿ ಓದಿದ್ದೀರಾ?: ಕರ್ನಾಟಕ ಹೈಕೋರ್ಟ್ ನ್ಯಾಯಾಧೀಶರಿಂದ ಮತ್ತೊಂದು ಅಸಹ್ಯಕರ ಹೇಳಿಕೆ: ವ್ಯಾಪಕ ಖಂಡನೆ
“ಡಿಎನ್‌ಎ ವರದಿಯನ್ನು ದಾಖಲೆಯಲ್ಲಿ ತೆಗೆದುಕೊಂಡು ನೋಟ್-ಶೀಟ್‌ಗೆ ಸಹಿ ಮಾಡಿದ ನಂತರವೂ, ಸಂಬಂಧಪಟ್ಟ ನ್ಯಾಯಾಧೀಶರು ಆ ವರದಿಯನ್ನು ಗುರುತಿಸದೆ ಮತ್ತು ಸಿಆರ್‌ಪಿಸಿ ಸೆಕ್ಷನ್ 313ರ ಅಡಿಯಲ್ಲಿ ಆರೋಪಿಯ ಹೇಳಿಕೆಗಳನ್ನು ಪಡೆಯದೆ ತೀರ್ಪು ನೀಡಿದ್ದಾರೆ. ಈ ಕಾರಣಕ್ಕಾಗಿ, ವಿಚಾರಣಾ ನ್ಯಾಯಾಲಯ ಮತ್ತು ಎಡಿಪಿಒ ಇಬ್ಬರೂ ನಿರ್ಲಕ್ಷ್ಯ ಮತ್ತು ಕರ್ತವ್ಯಲೋಪ ಎಸಗಿರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ. ಅವರಿಬ್ಬರೂ ಪ್ರಾಥಮಿಕವಾಗಿ ತಪ್ಪಿತಸ್ಥರು ಎಂದು ನಾವು ಅಭಿಪ್ರಾಯಪಟ್ಟಿದ್ದೇವೆ” ಎಂದು ನ್ಯಾಯಾಲಯ ಹೇಳಿದೆ.