ತೀವ್ರ ಹೊಟ್ಟೆ ನೋವಿನಿಂದ ಆಸ್ಪತ್ರೆಗೆ ಬಂದಿದ್ದ 70 ವರ್ಷದ ವೃದ್ಧರೊಬ್ಬರಿಗೆ ಶಸ್ತ್ರಚಿಕಿತ್ಸೆ ನಡೆಸಿ, ಪಿತ್ತಕೋಶದಿಂದ ಬರೋಬ್ಬರಿ 8,000ಕ್ಕೂ ಹೆಚ್ಚು ಕಲ್ಲುಗಳನ್ನು ವೈದ್ಯರು ಹೊರತೆಗೆದಿದ್ದಾರೆ. ಈ ಅಪರೂಪದ ಪ್ರಕರಣವು ದೆಹಲಿಯ ಗುರುಗ್ರಾಮದ ಪೋರ್ಟಿಸ್ ಸ್ಮಾರಕ ಸಂಶೋಧನಾ ಸಂಸ್ಥೆಯಲ್ಲಿ ಘಟಿಸಿದೆ.
ರೋಗಿಯು ಸುಮಾರು 5 ವರ್ಷಗಳಿಂದ ಹೊಟ್ಟೆನೋವಿನಿಂದ ಬಳಲುತ್ತಿದ್ದರು. ನೋಟು ತಾಳಲಾರದೆ ಗುರುಗ್ರಾಮದ ಆಸ್ಪತ್ರೆಗೆ ಬಂದಿದ್ದರು. ಅವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ, ಅವರ ಹೊಟ್ಟೆಯಲ್ಲಿ ಕಲ್ಲುಗಳು ಇರುವುದು ಪತ್ತೆಯಾಗಿತ್ತು. ಅವರಿಗೆ ಆಂಕೊಲಾಜಿ ವಿಭಾಗದ ಹಿರಿಯ ನಿರ್ದೇಶಕ ಡಾ. ಅಮಿತ್ ಜಾವೇದ್ ಮತ್ತು ಬೇರಿಯಾಟ್ರಿಕ್ ವಿಭಾಗದ ಪ್ರಧಾನ ಸಲಹೆಗಾರ ಡಾ. ನರೋಲಾ ಯಾಂಗರ್ ನೇತೃತ್ವದಲ್ಲಿ ವೈದ್ಯರ ತಂಡವು 1 ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿದೆ. ಅವರ ಪಿತ್ತಕೋಶದ ಬಳಿಯಿದ್ದ 8,125 ಕಲ್ಲುಗಳನ್ನು ಹೊರತೆಗೆದಿದೆ.
“ರೋಗಿಯ ಪಿತ್ತಕೋಶವು ಊದಿಕೊಂಡಿತ್ತು. ಅದರಲ್ಲಿ ಕಲ್ಲುಗಳು ತುಂಬಿಕೊಂಡಿದ್ದವು. ಚಿತ್ತಕೋಶವು ಹೊಡೆದು ಛಿದ್ರವಾಗುವ ಹಂತಕ್ಕೆ ಬಂದಿತ್ತು. ನಾವು ಎಚ್ಚರಿಕೆಯಿಂದ ಶಸ್ತ್ರಚಿಕಿತ್ಸೆ ನಡೆಸಿದ್ದೇವೆ. ಕಲ್ಲುಗಳನ್ನು ಹೊರತೆಗೆದಿದ್ದೇವೆ. ರೋಗಿಯ ಆರೋಗ್ಯ ಸುಧಾರಿಸುತ್ತಿದೆ” ಎಂದು ಡಾ. ಜಾವೇದ್ ಮತ್ತು ಡಾ. ಯಾಂಗರ್ ಹೇಳಿದ್ದಾರೆ.
“ಅವರನ್ನು ಆಸ್ಪತ್ರೆಗೆ ದಾಖಲಿಸಿಕೊಂಡ ಬಳಿಕ, ಹೊಟ್ಟೆಯ ಅಲ್ಟ್ರಾಸೌಂಡ್ ಪರೀಕ್ಷೆಗೆ ಒಳಪಡಿಸಲಾಯಿತು. ಪರೀಕ್ಷೆಯಲ್ಲಿ ಪಿತ್ತಕೋಶವು ಊದಿಕೊಂಡಿರುವುದು ಗೊತ್ತಾಯಿತು. ತಕ್ಷಣವೇ ಶಸ್ತ್ರಚಕಿತ್ಸೆ ನಡೆಸಿದ್ದೇವೆ” ಎಂದು ಡಾ. ಜಾವೇದ್ ಹೇಳಿದ್ದಾರೆ.
“ಈ ಪ್ರಕರಣ ಅಪರೂಪದ್ದಾಗಿದೆ. ಚಿಕಿತ್ಸೆ ಪಡೆಯುವುದನ್ನು ವರ್ಷಗಟ್ಟಲೆ ನಿರ್ಲಕ್ಷ್ಯಿಸಿರುವ ಕಾರಣ, ಕಲ್ಲುಗಳ ಸಂಖ್ಯೆ ಹೆಚ್ಚಾಗಿದೆ. ಶಸ್ತ್ರಚಿಕಿತ್ಸೆಯನ್ನು ಇನ್ನಷ್ಟು ವಿಳಂಬ ಮಾಡಿದ್ದರೆ, ಪಿತ್ತಕೋಶದ ಸೋಂಕು, ಹೊಟ್ಟೆ ನೋವು ಸೇರಿದಂತೆ ಗಂಭೀರ ಸಮಸ್ಯೆಗಳು ಎದುರಾಗುತ್ತಿದ್ದವು” ಎಂದು ತಿಳಿಸಿದ್ದಾರೆ.