ಖ್ಯಾತ ಉದ್ಯಮಿ ರತನ್ ಟಾಟಾ ಅವರು ಅನಾರೋಗ್ಯದಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. 86 ವರ್ಷದ ಅವರ ಆರೋಗ್ಯದಲ್ಲಿ ಏರುಪೇರು ಉಂಟಾಗಿರುವುದರಿಂದ ಅವರನ್ನು ಮುಂಬೈ ಬೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸದ್ಯಕ್ಕೆ ಅವರನ್ನು ಒಳರೋಗಿಯಾಗಿ ದಾಖಲಿಸಿಕೊಂಡಿರುವ ಆಸ್ಪತ್ರೆಯ ಸಿಬ್ಬಂದಿ, ಅವರನ್ನು ಕೂಲಂಕಷವಾಗಿ ಪರೀಕ್ಷಿಸುತ್ತಿದ್ದಾರೆ. ಸದ್ಯಕ್ಕೆ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು, ಯಾವುದೇ ತೊಂದರೆಯಿಲ್ಲ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.
ತಮ್ಮ ಆಸ್ಪತ್ರೆ ದಾಖಲಾತಿ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿರುವ ಟಾಟಾ, “ನನ್ನ ಆರೋಗ್ಯದಲ್ಲಿ ಯಾವುದೇ ಗಂಭೀರ ಏರುಪೇರು ಆಗಿಲ್ಲ. ವಯೋಸಹಜವಾಗಿ ಕಾಣಿಸಿಕೊಳ್ಳುವ ಸಣ್ಣಪುಟ್ಟ ಸಮಸ್ಯೆಗಳಿದ್ದು ಅದಕ್ಕಾಗಿ ಆಸ್ಪತ್ರೆಗೆ ಬಂದಿದ್ದೇನೆ. ಸಂಪೂರ್ಣ ದೇಹ ತಪಾಸಣೆಗೆ ವೈದ್ಯರು ಶಿಫಾರಸು ಮಾಡಿರುವುದರಿಂದ ತಪಾಸಣೆಗೆ ಒಳಗಾಗಿದ್ದೇನೆ. ಅದಕ್ಕಾಗಿ ಆಸ್ಪತ್ರೆಯಲ್ಲೇ ಇವತ್ತು ಇರಬೇಕಾಗಿದೆಯಷ್ಟೇ. ಯಾರೂ ನನ್ನ ಬಗ್ಗೆ ಹರಡುವ ವದಂತಿಗಳ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ. ಹಾಗೆಯೇ ನನ್ನ ಆರೋಗ್ಯದ ಬಗ್ಗೆ ಮಾಧ್ಯಮಗಳು ಸುಳ್ಳು ಸುದ್ದಿ ಹರಡಬಾರದೆಂದು” ಅವರು ಮನವಿ ಮಾಡಿದ್ದಾರೆ.
