ಜುಲೈ 2ರಂದು ಹಾಥರಸ್‌ನಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ 121 ಮಂದಿ ಸಾವನ್ನಪ್ಪಿದ ಪ್ರಕರಣವನ್ನು ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿ ಬ್ರಜೇಶ್ ಕುಮಾರ್ ಶ್ರೀವಾಸ್ತವ ನೇತೃತ್ವದ ಮೂವರು ಸದಸ್ಯರ ನ್ಯಾಯಾಂಗ ಆಯೋಗವು ತನಿಖೆ ನಡೆಸುತ್ತಿದೆ. ಆಯೋಗವು ಹಾಥರಸ್‌ನ ಸಿಕಂದ್ರ ರಾವು ನಿವಾಸಿಗಳೊಂದಿಗೆ ಸಂವಾದ ನಡೆಸಿದ್ದು, ಅಂದು ನಡೆದ ‘ಸತ್ಸಂಗ’ದಲ್ಲಿ ತನ್ನ ಕಾಲಿನ ಅಡಿಯ ಮಣ್ಣನ್ನು (ಪಾದದ ಧೂಳು) ತೆಗೆದುಕೊಳ್ಳಲು ಭೋಲೆ ಬಾಬಾ ಕರೆ ಕೊಟ್ಟಿದ್ದೇ ಕಾಲ್ತುಳಿತಕ್ಕೆ ಕಾರಣವೆಂದು ಹಲವರು ಹೇಳಿದ್ದಾರೆ ಎಂದು ವರದಿಯಾಗಿದೆ.
ಆಯೋಗವು ಸಿಕಂದ್ರ ರಾವುನಲ್ಲಿ ಸುಮಾರು 34 ಹೇಳಿಕೆಗಳನ್ನು ದಾಖಲಿಸಿದೆ. ಭಾನುವಾರ, ಆಯೋಗದ ಎದುರು ತಮ್ಮ ಅಳಲನ್ನು ತೋಡಿಕೊಂಡ ಹೆಚ್ಚಿನ ಸಾಕ್ಷಿಗಳು ಮತ್ತು ನಿವಾಸಿಗಳು, “ಭಕ್ತರು ತಮ್ಮ ಎಲ್ಲ ಕಾಯಿಲೆಗಳಿಂದ ಗುಣಮುಖರಾಗಲು ಮತ್ತು ಎಲ್ಲ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ತಮ್ಮ ಪಾದದ ಕೆಳಗಿನ ಮಣ್ಣನ್ನು ತೆಗೆದುಕೊಳ್ಳಲು ಭೋಲೆ ಬಾಬಾ ಹೇಳಿದ್ದರಿಂದಾಗಿ ಕಾಲ್ತುಳಿತ ಉಂಟಾಗಿದೆ. ಅವರು ಕರೆಯಿಂದಾಗಿ ಹಲವಾರು ಮಹಿಳೆಯರನ್ನೂ ಒಳಗೊಂಡಂತೆ ಜನರು ಅವರ ಕಡೆಗೆ ಧಾವಿಸಿದರು, ನೂಕಾಟ ಸಂಭವಿಸಿ, ಹಲವರು ಕಾಲ್ತುಳಿತದಲ್ಲಿ ಜೀವತೆತ್ತರು” ಎಂದು ಹೇಳಿದ್ದಾರೆ.
ಮೂಲಗಳ ಪ್ರಕಾರ, ಜನಸಂದಣಿಯನ್ನು ನಿಭಾಯಿಸುವಾಗ ಭೋಲೆ ಬಾಬನ ಖಾಸಗಿ ರಕ್ಷಣಾ ತಂಡವು ಜನರೊಂದಿಗೆ ತುಂಬಾ ಒರಟಾಗಿ ನಡೆದುಕೊಂಡಿದ್ದಾರೆ. ಬಾಬಾ ಹೋಗುತ್ತಿದ್ದ ದಾರಿಯಲ್ಲಿ ತೆರವುಗೊಳಿಸಲು ಜನರನ್ನು ಬಿರುಸಾಗಿ ದಬ್ಬುತ್ತಿದ್ದರು ಎಂದು ಹೇಳಲಾಗಿದೆ.
ಲಕ್ಷಾಂತರ ಮಂದಿ ಸೇರಿದ್ದ ಕಾರ್ಯಕ್ರಮದಲ್ಲಿ ಕಾನೂನು-ಸುವ್ಯವಸ್ಥೆ ನಿರ್ವಹಣೆಗೆ ಕೇಲವೇ ಮಂದಿ ಪೊಲೀಸರನ್ನು ನಿಯೋಜಿಸಿದ್ದದ್ದು ದುರಂತಕ್ಕೆ ಮತ್ತೊಂದು ಕಾರಣ ಎಂದು ಹೇಳಲಾಗಿದೆ.
ನಿವೃತ್ತ ನ್ಯಾಯಮೂರ್ತಿ ಶ್ರೀವಾಸ್ತವ, ನಿವೃತ್ತ ಐಎಎಸ್ ಅಧಿಕಾರಿ ಹೇಮಂತ್ ರಾವ್ ಮತ್ತು ನಿವೃತ್ತ ಐಪಿಎಸ್ ಭವೇಶ್ ಕುಮಾರ್ ಅವರಿರುವ ಆಯೋಗವು ಎರಡು ತಿಂಗಳಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಲಿದೆ.
ಏತನ್ಮಧ್ಯೆ, ಅಖಿಲ ಭಾರತೀಯ ಅಖಾರ ಪರಿಷತ್ (ABAP) ಮೂಲಗಳ ಪ್ರಕಾರ, ಮುಂಬರುವ ಮಹಾಕ್ಲುಂಭ-2025ರ ಸಿದ್ಧತೆಗಳ ಕುರಿತು ಚರ್ಚಿಸಲು ಮತ್ತು ನಕಲಿ ಸಂತರ ಪಟ್ಟಿಯನ್ನು ಸಿದ್ದಪಡಿಸಿ, ಆಯೋಗಕ್ಕೆ ನೀಡಲು ಜುಲೈ 18ರಂದು ಪ್ರಯಾಗ್‌ರಾಜ್‌ನಲ್ಲಿ ಕರೆಯಲಾಗಿದೆ.
“ಪ್ರಯಾಗ್‌ರಾಜ್‌ನಲ್ಲಿ 12 ವರ್ಷಗಳಿಗೊಮ್ಮೆ ನಡೆಯುವ ಪೂರ್ಣ ಮಹಾಕುಂಭ ಜಾತ್ರೆಯಲ್ಲಿ ತಮ್ಮ ಶಿಬಿರಗಳನ್ನು ಸ್ಥಾಪಿಸಲು ನಕಲಿ ಮತ್ತು ಸ್ವಯಂ ಘೋಷಿತ ಬಾಬಾಗಳಿಗೆ ಅವಕಾಶ ನೀಡಬಾರದೆಂದು ಕರೆ ನೀಡಲಾಗುವುದು” ಎಂದು ಎಬಿಎಪಿ ಅಧ್ಯಕ್ಷ ಮಹಂತ್ ರವೀಂದ್ರ ಪುರಿ ಹೇಳಿದ್ದಾರೆ.