ಸರ್ಕಾರಿ ಉದ್ಯೋಗಗಳ ನೇಮಕಾತಿಗಾಗಿ ಮಧ್ಯಪ್ರದೇಶದಲ್ಲಿ ನಡೆದ ಪರೀಕ್ಷೆಯಲ್ಲಿ ಅಭ್ಯರ್ಥಿಯೊಬ್ಬ 100 ಅಂಕಗಳಿಗೆ 101.66 ಅಂಕಗಳನ್ನು ಗಳಿಸಿರುವ ವಿಚಿತ್ರ ಘಟನೆ ನಡೆದಿದೆ. ಪರೀಕ್ಷೆಯಲ್ಲಿ ‘ಸಾಮಾನ್ಯೀಕರಣ’ ಪ್ರಕ್ರಿಯೆ ಅಳವಡಿಸಿಕೊಂಡಿರುವುದು ಈ ಯಡವಟ್ಟಿಗೆ ಕಾರಣವೆಂದು ಪರೀಕ್ಷೆ ಬರೆದಿದ್ದ ಅಭ್ಯರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ.
ಇತ್ತೀಚೆಗೆ ಪ್ರಕಟವಾದ, ಅರಣ್ಯ ಮತ್ತು ಕಾರಾಗೃಹ ಇಲಾಖೆಗಳ ಜಂಟಿ ನೇಮಕಾತಿ ಪರೀಕ್ಷೆಯ ಫಲಿತಾಂಶದಲ್ಲಿ ಅಭ್ಯರ್ಥಿಯೊಬ್ಬರು ಒಟ್ಟು 100 ಅಂಕಗಳಿಗೆ 101.66 ಅಂಕಗಳನ್ನು ಪಡೆದಿದ್ದಾರೆ. ಪರೀಕ್ಷೆ ನಡೆದ ಅಂಕಗಳಿಗಿಂತಲೂ ಹೆಚ್ಚು ಅಂಕಗಳನ್ನು ಪಡೆದಿದ್ದು, ಆತನನ್ನು ಅಗ್ರ ಸ್ಥಾನದಲ್ಲಿ ಇರಿಸಲಾಗಿದೆ.
ಫಲಿತಾಂಶದ ಪ್ರಕಟಣೆಯ ನಂತರ, ಪರೀಕ್ಷಾ ಮಂಡಳಿಯು ನಿಯಮಗಳ ಪ್ರಕಾರ ನೇಮಕಾತಿ ಪರೀಕ್ಷೆಯಲ್ಲಿ ‘ಸಾಮಾನ್ಯೀಕರಣ’ದ ಪ್ರಕ್ರಿಯೆಯನ್ನು ಅಳವಡಿಸಿಕೊಂಡಿದೆ ಎಂದು ಸ್ಪಷ್ಟಪಡಿಸಿದೆ.
ಈ ಗೊಂದಲದ ವಿರುದ್ಧ ಉದ್ಯೋಗಾಕಾಂಕ್ಷಿ ಅಭ್ಯರ್ಥಿಗಳು ಇಂಧೋರ್‌ನಲ್ಲಿ ಪ್ರತಿಭಟನೆ ನಡೆಸಿದ್ದಾರೆ. ನೇಮಕಾತಿ ಪರೀಕ್ಷೆಯಲ್ಲಿ ವಂಚನೆ ನಡೆದಿದೆ. ಈ ಬಗ್ಗೆ ನ್ಯಾಯಯುತ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.
“ನೇಮಕಾತಿ ಪರೀಕ್ಷೆಯಲ್ಲಿ ಅಳವಡಿಸಿಕೊಂಡಿರುವ ಸಾಮಾನ್ಯೀಕರಣ ಪ್ರಕ್ರಿಯೆಯಿಂದ ಅಭ್ಯರ್ಥಿಯೊಬ್ಬರು ಒಟ್ಟು ಅಂಕಗಳಿಗಿಂತ ಹೆಚ್ಚಿನ ಅಂಕ ಪಡೆದಿರುವುದು ರಾಜ್ಯದ ಇತಿಹಾಸದಲ್ಲಿ ಇದೇ ಮೊದಲು. ನಾವು ಅನ್ಯಾಯದ ಪ್ರಕ್ರಿಯೆಯ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದೇವೆ” ಎಂದು ಪ್ರತಿಭಟನಾನಿರತ ಗೋಪಾಲ್ ಪ್ರಜಾಪತ್ ತಿಳಿಸಿದ್ದಾರೆ.