ರಾತ್ರಿ ವೇಳೆ ಡ್ರೋನ್ ಪತ್ತೆಯಾದ ಬಳಿಕ ಮತ್ತು ಬ್ಲ್ಯಾಕೌಟ್‌ಗಳ ನಂತರ, ಶನಿವಾರ ಬೆಳಿಗ್ಗೆ ರಾಜಸ್ಥಾನದ ಗಡಿ ಜಿಲ್ಲೆ ಬಾರ್ಮರ್‌ನಲ್ಲಿ ಮತ್ತೆ ಸೈರನ್‌ಗಳು ಕೇಳಿಬಂದಿದೆ. ರೆಡ್ ಅಲರ್ಟ್ ಘೋಷಿಸಲಾಗಿದೆ. ಗಂಗಾನಗರ ಜಿಲ್ಲೆಯಲ್ಲಿಯೂ ರೆಡ್ ಅಲರ್ಟ್ ನೀಡಲಾಗಿದೆ.
ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆ ಬುಧವಾರ ಮುಂಜಾನೆ ಪಾಕಿಸ್ತಾನ ಮತ್ತು ಪಿಒಕೆಯಲ್ಲಿನ ಒಂಬತ್ತು ಭಯೋತ್ಪಾದಕ ನೆಲೆಗಳ ಮೇಲೆ ಕ್ಷಿಪಣಿ ದಾಳಿ ನಡೆಸಿದೆ. ಇದಾದ ಬಳಿಕ ಭಾರತ ಪಾಕಿಸ್ತಾನದ ನಡುವಿನ ಉದ್ವಿಗ್ನತೆ ಹೆಚ್ಚಾಗಿದೆ. ಪರಸ್ಪರ ದಾಳಿಗಳು ನಡೆಯುತ್ತಿವೆ. ಗಡಿ ರಾಜ್ಯಗಳಲ್ಲಿ ಎಚ್ಚರಿಕೆ ನೀಡಲಾಗಿದೆ.
ಇದನ್ನು ಓದಿದ್ದೀರಾ? ಆಪರೇಷನ್ ಸಿಂಧೂರ | ಕಾರ್ಯಾಚರಣೆ ಮಾಹಿತಿ ವಿವರಿಸಿದ ಸೋಫಿಯಾ ಖುರೇಶಿ ಬೆಳಗಾವಿಯ ಸೊಸೆ
ರಾಜಸ್ಥಾನದ ಕೆಲವೆಡೆ ರೆಡ್ ಅಲರ್ಟ್ ಘೋಷಿಸಿರುವ ಬಗ್ಗೆ ಪ್ರಕಟಣೆ ಮೂಲಕ ಮಾಹಿತಿ ನೀಡಿದ ಬಾರ್ಮರ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಟೀನಾ ದಾಬಿ, “ಹೈ ರೆಡ್ ಅಲರ್ಟ್. ಪ್ರತಿಯೊಬ್ಬರೂ ತಕ್ಷಣ ತಮ್ಮ ಮನೆಗಳಿಗೆ ಹೋಗಬೇಕೆಂದು ಆದೇಶಿಸಲಾಗಿದೆ. ಮಾರುಕಟ್ಟೆಗಳನ್ನು ಮುಚ್ಚಬೇಕು ಮತ್ತು ಎಲ್ಲಾ ಚಲನೆಯನ್ನು ನಿಲ್ಲಿಸಬೇಕು. ತುರ್ತು, ತಕ್ಷಣ ಜಾರಿಗೊಳಿಸಬೇಕು” ಎಂದು ತಿಳಿಸಿದ್ದಾರೆ. ಧ್ವನಿ ಸಂದೇಶವನ್ನು ಸಹ ಬಿಡುಗಡೆ ಮಾಡಿದ್ದಾರೆ.
ಬಾರ್ಮರ್ ನಗರದ ಮಾರುಕಟ್ಟೆಯಲ್ಲಿ ಬೆಳಿಗ್ಗೆ ಅಂಗಡಿಗಳು ತೆರೆದಿದ್ದರೂ, ಪೊಲೀಸರು ಅಂಗಡಿಯಿಂದ ಅಂಗಡಿಗೆ ಹೋಗಿ ಅವುಗಳನ್ನು ಮುಚ್ಚುವಂತೆ ಹೇಳಿದ್ದಾರೆ. ಸೈರನ್‌ಗಳು ಮೊಳಗುತ್ತಿದ್ದಂತೆ ಮಾರುಕಟ್ಟೆಗಳಿಂದ ಜನರು ಮನೆಗೆ ಧಾವಿಸಿದ್ದಾರೆ ಎಂದು ವರದಿಯಾಗಿದೆ.
ಡ್ರೋನ್ ಪತ್ತೆಯಾಗಿರುವುದರಿಂದ ಪಾಕಿಸ್ತಾನ ರಾತ್ರಿ ದಾಳಿ ನಡೆಸಲು ಯತ್ನಿಸಿದೆ ಎಂದು ಶಂಕಿಸಲಾಗಿದೆ. ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ ಜೈಸಲ್ಮೇರ್‌ನ ಶಂಕರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ರಾನ್ ಸಿಂಗ್, “ದಾಳಿ ನಡೆಸಲು ಯತ್ನಿಸಿದ ಸುಳಿವು ಕಂಡುಬಂದಿದೆ. ಹತ್ತಿರದ ಹಳ್ಳಿಗಳಿಂದ ಜನರನ್ನು ಸ್ಥಳಾಂತರಿಸಲಾಗಿದೆ” ಎಂದು ಹೇಳಿದ್ದಾರೆ.
