ಜೀತ ಕಾರ್ಮಿಕರ ರಕ್ಷಣೆ, ಪುನರ್ವಸತಿ: ಮೋದಿ ಸರ್ಕಾರದ ಗುರಿ 13 ಲಕ್ಷ – ಸಾಧಿಸಿದ್ದು 468 ಮಾತ್ರ

Date:

Advertisements
ಜೀತ ಕಾರ್ಮಿಕ ಪದ್ದತಿಯನ್ನು ನಿರ್ಮೂಲನೆಗೊಳಿಸುವಲ್ಲಿ, ಜೀತ ಕಾರ್ಮಿಕರನ್ನು ರಕ್ಷಿಸಿ, ಪುರರ್ವಸತಿ ಒದಗಿಸುವಲ್ಲಿ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಸಂಪೂರ್ಣವಾಗಿ ವಿಫಲವಾಗಿದೆ. ತನ್ನ ವೈಫಲ್ಯಗಳಿಗೆ ರಾಜ್ಯ ಸರ್ಕಾರಗಳನ್ನು ಹೊಣೆ ಮಾಡಲು ಯತ್ನಿಸುತ್ತಿದೆ.

ಭಾರತವು ಡಿಜಿಟಲ್ ಯುಗಕ್ಕೆ ತೆರೆದುಕೊಳ್ಳುತ್ತಿದೆ. ಮೇಕ್‌ ಇನ್ ಇಂಡಿಯಾ ಎಂದು ಅಬ್ಬರಿಸುತ್ತಿದೆ. ವಿಶ್ವಗುರು ಎಂದು ಹೇಳಿಕೊಳ್ಳುತ್ತಿದೆ. ಆರ್ಥಿಕತೆ 5 ಟ್ರಿಲಿಯನ್ ಡಾಲರ್‌ಗೆ ಆಗುತ್ತಿದೆ ಎನ್ನುತ್ತಿದೆ. ಇಷ್ಟೆಲ್ಲ ಇದ್ದರೂ, ಇಂದಿಗೂ ಭಾರತದಲ್ಲಿ ಲಕ್ಷಾಂತರ ಮಂದಿ ಜನರು ಜೀತದಾಳುಗಳಾಗಿ ದುಡಿಯುತ್ತಿದ್ದಾರೆ. ಬದುಕು ಸಾಗಿಸಲು, ಜೀತದಿಂದ ಮುಕ್ತರಾಗಲು ಹೆಣಗಾಡುತ್ತಿದ್ದಾರೆ.

ಭೂಮಾಲೀಕರು, ಗಣಿಗಾರಿಕೆ, ಇಟ್ಟಿಗೆಗೂಡಿನಂತಹ ವ್ಯವಹಾರ ನಡೆಸುವವರು ಕಾರ್ಮಿಕರ ಕುಟುಂಬಗಳಿಗೆ ಒಂದಷ್ಟು ಹಣಕೊಟ್ಟು, ಕಾರ್ಮಿಕರನ್ನು ಕರೆದೊಯ್ದು ಜೀತದಾಳುಗಳಾಗಿ ಇರಿಸಿಕೊಂಡು ದುಡಿಸಿಕೊಳ್ಳುತ್ತಿದ್ದಾರೆ. ಯಾವುದೇ ಸಮಯದ ಕಟ್ಟುಪಾಡುಗಳಿಲ್ಲದೆ ನಿರಂತರವಾಗಿ ದುಡಿಸಿಕೊಂಡು ಶೋಷಣೆ ಮಾಡುತ್ತಿದ್ದಾರೆ. ಚಿತ್ರಹಿಂಸೆಯನ್ನೂ ಎಸಗುತ್ತಿದ್ದಾರೆ.

ಉಳ್ಳವರ ದೌರ್ಜನ್ಯಕ್ಕೆ ಸಿಲುಕಿ ನಲುಗುತ್ತಿರುವ ಜೀತದಾಳುಗಳನ್ನು ರಕ್ಷಿಸಿ, ಅವರನ್ನು ಜೀತಮುಕ್ತರನ್ನಾಗಿ, ಪುನರ್ವಸತಿ ಒದಸಿಲು ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಗುರಿ ಹಾಕಿಕೊಂಡಿತ್ತು. 2016ರಲ್ಲಿ ಅದಕ್ಕಾಗಿ ‘ಜೀತ ಕಾರ್ಮಿಕರ ಪುನರ್ವಸತಿ ಕಾರ್ಯಕ್ರಮ‘ವನ್ನೂ ರೂಪಿಸಿತ್ತು. 2030ರ ವೇಳಗೆ, 1.84 ಕೋಟಿ ಜೀತದಾಳುಗಳನ್ನು ಜೀತ ಮುಕ್ತರನ್ನಾಗಿ ಮಾಡುವುದು ಯೋಜನೆಯ ಗುರಿಯಾಗಿತ್ತು. ಅಂದರೆ, ವರ್ಷಕ್ಕೆ ಸರಾಸರಿ 13 ಲಕ್ಷ ಮಂದಿಯನ್ನು ಜೀತ ಮುಕ್ತರನ್ನಾಗಿಸುವುದು ಸರ್ಕಾರದ ಉದ್ದೇಶವಾಗಿತ್ತು. ಆದರೆ, ವಾರ್ಷಿಕ 13 ಲಕ್ಷ ಮಂದಿಯನ್ನು ಜೀತದಿಂದ ರಕ್ಷಿಸಬೇಕಿದ್ದ ಸರ್ಕಾರವು ಕೇವಲ ಸರಾಸರಿ 468 ಮಂದಿಯನ್ನು ಮಾತ್ರವೇ ರಕ್ಷಿಸುವಲ್ಲಿ ಸಫಲವಾಗಿದೆ. ಇದು ಜೀತ ಮುಕ್ತಗೊಳಿಸುವ ಉದ್ದೇಶ ಸಫಲಗೊಂಡಿಲ್ಲ. ಯೋಜನೆಯಾಗಿ ಪೇಪರ್‌ಗಳ ಮೇಲೆ ಉಳಿದುಹೋಗಿದೆ ಎಂಬುದನ್ನು ಎತ್ತಿತೋರುತ್ತಿದೆ.

Advertisements

ಗಮನಾರ್ಹವೆಂದರೆ, ಜೀತ ಪದ್ದತಿಯನ್ನು ನಿರ್ಮೂಲನೆ ಮಾಡುವ ಕುರಿತು ಭಾರತ ಸರ್ಕಾರದ ದೃಢಸಂಕಲ್ಪವು ಇತ್ತೀಚಿನ ಬೆಳವಣಿಗೆಯಲ್ಲ. 1976ರಲ್ಲಿ, ಇಂದಿರಾ ಗಾಂಧಿ ಅವರು ಪ್ರಧಾನಿಯಾಗಿದ್ದಾಗ, ಅವರ ಸರ್ಕಾರವು ‘ಜೀತದಾಳು ವ್ಯವಸ್ಥೆ (ನಿರಾಕರಣೆ) ಕಾಯ್ದೆ’ಯನ್ನು ಜಾರಿಗೆ ತಂದಿತು. ಜೀತ ಪದ್ದತಿಯು ಕಾನೂನುಬಾಹಿರ ಅಪರಾಧವೆಂದು ಕಾಯ್ದೆಯು ಹೇಳಿತ್ತು. ಕಾಯ್ದೆ ಜಾರಿಯಾಗಿ 50 ವರ್ಷಗಳು ಕಳೆದಿವೆ. ಆದರೆ, ಜೀತ ಪದ್ದತಿ ಮಾತ್ರ ಇಂದಿಗೂ ಸಮಾಜವನ್ನು ಕಾಡುತ್ತಿದೆ. ತಾಂಡವವಾಡುತ್ತಿದೆ.

ಉತ್ತರ ಪ್ರದೇಶ, ಹರಿಯಾಣ ಸೇರಿದಂತೆ ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಜೀತದಾಳುಗಳಾಗಿ ಇರಿಸಿಕೊಂಡು, ದುಡಿಸಿಕೊಳ್ಳುವ ಕೃತ್ಯಗಳು ಹೆಚ್ಚಿನ ಪ್ರಮಾಣದಲ್ಲಿ ನಡೆಯುತ್ತಿವೆ. ಹಾಗಂತ, ದಕ್ಷಿಣ ಭಾರತದಲ್ಲಿ ಜೀತಕ್ಕೆ ದುಡಿಸಿಕೊಳ್ಳುವುದು ಇಲ್ಲವೇ ಇಲ್ಲವೆಂದೇನೂ ಇಲ್ಲ. ಕರ್ನಾಟಕದಲ್ಲಿಯೂ ಕಾರ್ಮಿಕರನ್ನು ಜೀತದಾಳುಗಳಾಗಿ ಇರಿಸಿಕೊಂಡಿದ್ದ ಹಲವು ಪ್ರಕರಣಗಳು ಬೆಳಕಿಗೆ ಬಂದಿವೆ. ಇತ್ತೀಚೆಗೆ,  ಮಂಡ್ಯದ ಕಲ್ಲು ಕ್ವಾರಿಗಳಲ್ಲಿ ಜೀತದಾಳುಗಳಾಗಿ ದುಡಿಯುತ್ತಿದ್ದ ಕಾರ್ಮಿಕರನ್ನು ರಕ್ಷಿಸಲಾಗಿತ್ತು.

ಕೇಂದ್ರ ಸರ್ಕಾರದ ಕಾಯ್ದೆಯು, ‘ಹೊಸ ರೀತಿಯ ಬಂಧನ/ಜೀತವನ್ನು ತಡೆಗಟ್ಟಬೇಕು. ಕಾರ್ಮಿಕರನ್ನು ಜೀತಕ್ಕೆ ಇರಿಸಿಕೊಳ್ಳುವ ಎಲ್ಲ ಅಪರಾಧಿಗಳನ್ನು ಹೊಣೆಗಾರರನ್ನಾಗಿ ಮಾಡಿ, ಶಿಕ್ಷೆ ವಿಧಿಸಬೇಕು. ಅದಕ್ಕಾಗಿ, ಶಿಕ್ಷೆಯ ಪ್ರಕ್ರಿಯೆಯನ್ನು ಬಲಪಡಿಸಬೇಕು’ ಎಂದು ಹೇಳುತ್ತದೆ.

ಆದರೂ, ಜೀತ ಮುಕ್ತಗೊಳಿಸುವ ಪ್ರಯತ್ನಗಳು ಹೆಚ್ಚಾಗಿ ನಡೆಯುತ್ತಿಲ್ಲ. ಎಲ್ಲೋ ಆಗ್ಗಾಗ್ಗೆ ತಾವಾಗಿಯೇ ಬೆಳಿಕಿಗೆ ಬರುವ ಪ್ರಕರಣಗಳಲ್ಲಿ ಮಾತ್ರವೇ ಜೀತದಾಳುಗಳನ್ನು ರಕ್ಷಿಸಲಾಗುತ್ತಿದೆ. ಸಂತ್ರಸ್ತರ ಹೇಳಿಕೆಗಳನ್ನು ದಾಖಲಿಸುವಲ್ಲಿಯೂ ಆಡಳಿತ ವ್ಯವಸ್ಥೆ ವಿಫಲವಾಗಿದೆ. ಸಂತ್ರಸ್ತರನ್ನು ಬಂಧಿತ ಕಾರ್ಮಿಕರೆಂದು ಗುರುತಿಸುವುದು ಮತ್ತು ಜೀತದಿಂದ ಬಿಡುಗಡೆ ಪ್ರಮಾಣಪತ್ರಗಳನ್ನು ನೀಡುವಲ್ಲಿಯೂ ವಿಫಲತೆ ಎದ್ದುಕಾಡುತ್ತಿದೆ. ಇದೆಲ್ಲವೂ, ಸಂತ್ರಸ್ತರು ಪುನರ್ವಸತಿ ಪಡೆಯುವುದಕ್ಕೆ ಅಡ್ಡಿಯಾಗುತ್ತಿವೆ.

ಪ್ರಮಾಣಪತ್ರ ನೀಡುವಲ್ಲಿ ಜಿಲ್ಲಾಡಳಿತದ ವೈಫಲ್ಯ

ಕೇಂದ್ರ ಸರ್ಕಾರವು ‘ಜೀತ ಕಾರ್ಮಿಕರ ಪುನರ್ವಸತಿ ಕಾರ್ಯಕ್ರಮ’ವನ್ನು 2016ರಲ್ಲಿ ಆರಂಭಿಸಿತು. ಇದರಡಿಯಲ್ಲಿ, ರಕ್ಷಿಸಲ್ಪಟ್ಟ ಸಂತ್ರಸ್ತರಿಗೆ 30,000 ರೂ. ತಕ್ಷಣದ ಆರ್ಥಿಕ ಸಹಾಯ ನೀಡಲಾಗುತ್ತದೆ. ಬಳಿಕ ಅವರು ಜೀತ ಕಾರ್ಮಿಕರಾಗಿ ದೌರ್ಜನ್ಯ ಅನುಭವಿಸಿದ್ದಾರೆ ಎಂಬುದು ದೃಢವಾದ ನಂತರ, ಅವರು ದುಡಿಯುತ್ತಿದ್ದ ವರ್ಗ ಮತ್ತು ಶೋಷಣೆಯ ವ್ಯಾಪ್ತಿಯ ಆಧಾರದಲ್ಲಿ 1ರಿಂದ 3 ಲಕ್ಷ ರೂ.ವರೆಗೆ ಹೆಚ್ಚುವರಿ ಪುನರ್ವಸತಿ ನೆರವು ನೀಡಲಾಗುತ್ತದೆ.

ಆದಾಗ್ಯೂ, ಈ ಕಾರ್ಯಕ್ರಮದಡಿ ನೆರವು ಸಿಗಬೇಕೆಂದರೆ, ಆಯಾ ಜಿಲ್ಲೆಗಳ ಜಿಲ್ಲಾ ಮ್ಯಾಜಿಸ್ಟ್ರೇಟ್ ಅಥವಾ ಉಪ-ವಿಭಾಗೀಯ ಮ್ಯಾಜಿಸ್ಟ್ರೇಟ್ ಜೀತ ಕಾರ್ಮಿಕರನ್ನು ಗುರುತಿಸಿ, ಜೀತ ಮುಕ್ತ ಪ್ರಮಾಣಪತ್ರವನ್ನು ನೀಡಬೇಕು. ಆ ಪ್ರಮಾಣಪತ್ರ ಇದ್ದರೆ ಮಾತ್ರವೇ ಕಾರ್ಯಕ್ರಮದ ಫಲಾನುಭವಿಗಳಾಗಲು ಸಾಧ್ಯ.

ಆದರೆ, “ಜೀತ ಕಾರ್ಮಿಕರ ಗುರುತಿಸುವಿಕೆ ಸರ್ಕಾರಿ ಅಧಿಕಾರಿಗಳಿಗೆ ಆದ್ಯತೆಯಾಗಿಲ್ಲ. ಜಿಲ್ಲಾಡಳಿತವು ಆಗಾಗ್ಗೆ ಜೀತ ಮುಕ್ತ ಪ್ರಮಾಣಪತ್ರಗಳನ್ನು ನೀಡಲು ವಿಫಲವಾಗುತ್ತಿದೆ” ಎಂದು ಜೀತ ಕಾರ್ಮಿಕರ ಗುರುತಿಸುವಿಕೆ, ರಕ್ಷಣೆ ಮತ್ತು ಪುನರ್ವಸತಿಗಾಗಿ ದುಡಿಯುತ್ತಿರುವ ‘ಜೀತ ಕಾರ್ಮಿಕರ ನಿರ್ಮೂಲನೆಗಾಗಿ ರಾಷ್ಟ್ರೀಯ ಅಭಿಯಾನ ಸಮಿತಿ’ ಸಂಘಟನೆಯ ಸಂಚಾಲಕ ನಿರ್ಮಲ್ ಗೋರಾನಾ ಹೇಳಿದ್ದಾರೆ.

ಕಾರ್ಯಕ್ರಮ ಅನುಷ್ಠಾನದಲ್ಲಿ ಮೋದಿ ಸರ್ಕಾರ ವಿಫಲ

ಇತ್ತೀಚೆಗೆ ನಡೆದ ಸಂಸತ್‌ ಅಧಿವೇಶನದಲ್ಲಿ ಸರ್ಕಾರವು ಸಂಸತ್ತಿಗೆ ಜೀತ ಕಾರ್ಮಿಕ ಪುನರ್ವಸತಿ ಕಾರ್ಯಕ್ರಮ ಕುರಿತ ಮಾಹಿತಿಯನ್ನು ನೀಡಿದೆ. ಅದರ ಅಂಕಿಅಂಶಗಳು, 2023-24ರ ಆರ್ಥಿಕ ವರ್ಷದಲ್ಲಿ 500ಕ್ಕಿಂತ ಕಡಿಮೆ ಜೀತ ಕಾರ್ಮಿಕರಿಗೆ ಪುನರ್ವಸತಿ ಕಲ್ಪಿಸಲಾಗಿದೆ ಎಂದು ಹೇಳಲಾಗಿದೆ. ಈ ಅಂಕಿಅಂಶವು 2030ರ ವೇಳೆಗೆ 1.84 ಕೋಟಿ ಜೀತ ಕಾರ್ಮಿಕರನ್ನು ಜೀತ ಮುಕ್ತರನ್ನಾಗಿಸಿ, ಪುನರ್ವಸತಿ ನೀಡುವ ಗುರಿಗೆ ವ್ಯತಿರಿಕ್ತವಾಗಿದೆ.

ತನ್ನ ಗುರಿಯನ್ನು ಸಾಧಿಸಲು ಸರ್ಕಾರವು ವಾರ್ಷಿಕ ಸುಮಾರು 13.14 ಲಕ್ಷ ಜೀತ ಕಾರ್ಮಿಕರಿಗೆ ಪುನರ್ವಸತಿ ಒದಗಿಸಬೇಕು. ಆದರೆ, ಸರ್ಕಾರ ವಾರ್ಷಿಕ ಸಾಧಿಸುತ್ತಿರುವುದು 500ಕ್ಕಿಂತ ಕಡಿಮೆ.

ಜೊತೆಗೆ, 2024ರ ಆಗಸ್ಟ್‌ನಲ್ಲಿ ಆರ್‌ಟಿಐ ಒಂದಕ್ಕೆ ಉತ್ತರಿಸಿದ್ದ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು, “ಕಳೆದ ಮೂರು ವರ್ಷಗಳಲ್ಲಿ ಜೀತ ಕಾರ್ಮಿಕರ ಪುನರ್ವಸತಿ ದರವು ಸುಮಾರು 80% ರಷ್ಟು ಕಡಿಮೆಯಾಗಿದೆ. 2023ಕ್ಕೂ ಹಿಂದಿನ ವರ್ಷಗಳಲ್ಲಿ ವಾರ್ಷಿಕವಾಗಿ ಸರಾಸರಿ 900 ಕಾರ್ಮಿಕರಿಗೆ ಪುನರ್ವಸತಿ ಒದಗಿಸಲಾಗುತ್ತಿತ್ತು. ಆದರೆ, 2023-24ರ ಅವಧಿಯಲ್ಲಿ ಕೇವಲ 468 ಕಾರ್ಮಿಕರಿಗೆ ಮಾತ್ರವೇ ಕಾರ್ಯಕ್ರಮದಲ್ಲಿ ಸೌಲಭ್ಯ ಒದಗಿಸಲಾಗಿದೆ” ಎಂದು ಹೇಳಿಕೊಂಡಿದೆ.

ಮತ್ತೊಂದು ಪ್ರಮುಖ ವಿಚಾರವೆಂದರೆ, 2016ರಲ್ಲಿ ಕಾರ್ಯಕ್ರಮ ರೂಪಿಸಿದ ಕೇಂದ್ರ ಸರ್ಕಾರ, ಅಂದಿನಿಂದ 7 ವರ್ಷಗಳಲ್ಲಿ ಅಂದರೆ, 2023ರ ವೇಳೆಗೆ ಜೀತ ಕಾರ್ಮಿಕರ ಸಂಖ್ಯೆಯನ್ನು ಅರ್ಧಕ್ಕಿಂತ ಕಡಿಮೆ ಮಾಡುವ ಗುರಿ ಹೊಂದಿತ್ತು. ಆದರೆ, ಆ ಗುರಿ ಇರಲಿ, ಒಂದು ವರ್ಷದ ವಾರ್ಷಿಕ ಗುರಿಯನ್ನೂ (13 ಲಕ್ಷ) 7 ವರ್ಷಗಳಲ್ಲಿ ಸಾಧಿಸಲು ಕೇಂದ್ರ ಸರ್ಕಾರ ವಿಫಲವಾಗಿದೆ.

ಈ ವರದಿ ಓದಿದ್ದೀರಾ?: ನಿಜಕ್ಕೂ ಜಾತಿಗಣತಿ ನಡೆಸುತ್ತದಾ ಬಿಜೆಪಿ; ಸಿದ್ಧವಿರುವ ವರದಿ ಜಾರಿ ಮಾಡದೆ ವಿಳಂಬ ಮಾಡುತ್ತಿರುವುದೇಕೆ ಕಾಂಗ್ರೆಸ್‌?

2024ರ ಇಂಡಿಯಾಸ್ಪೆಂಡ್ ವರದಿಯ ಪ್ರಕಾರ, ಕೇಂದ್ರ ಸರ್ಕಾರವು ತನ್ನ ಪ್ರಸ್ತುತ ವೇಗದಲ್ಲಿ ಮುಂದುವರಿದರೆ, 2030ರ ವೇಳೆಗೆ ತನ್ನ ಗುರಿಯಲ್ಲಿ (1.84 ಕೋಟಿ) ಕೇವಲ 2%ಅನ್ನು ಮಾತ್ರವೇ ಸಾಧಿಸುತ್ತದೆ.

ರಾಜ್ಯಗಳಿಗೆ ಹೊಣೆಗಾರಿಕೆ ವರ್ಗಾಯಿಸುತ್ತಿದೆ ಕೇಂದ್ರ

ಕೇಂದ್ರ ಸರ್ಕಾರವು ತನ್ನ ಗುರಿಗಳನ್ನು ತಲುಪಿಲ್ಲವಾದರೂ, 1976ರ ಜೀತ ಕಾರ್ಮಿಕ ವ್ಯವಸ್ಥೆ (ನಿರ್ಮೂಲನೆ) ಕಾಯ್ದೆಯ ಸೆಕ್ಷನ್ 13ರ ಅಡಿಯಲ್ಲಿ ಕೇಂದ್ರವು ತನ್ನ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳುತ್ತಿದೆ. ಹೊಣೆಗಾರಿಕೆಯನ್ನು ರಾಜ್ಯಗಳ ಮೇಲೆ ಹಾಕುತ್ತಿದೆ.

ಜೀತ ನಿರ್ಮೂಲನೆಗಾಗಿ ರಾಜ್ಯ ಸರ್ಕಾರವು ಪ್ರತಿ ಜಿಲ್ಲೆ ಮತ್ತು ಅದರ ಉಪವಿಭಾಗಗಳಲ್ಲಿ ಅಗತ್ಯವೆಂದು ಪರಿಗಣಿಸಲಾದ ಜಾಗೃತ ಸಮಿತಿಯನ್ನು ಸ್ಥಾಪಿಸಬೇಕು ಎಂದು ಕೇಂದ್ರ ಸರ್ಕಾರ ಹೇಳುತ್ತಿದೆ.  ಆ ಸಮಿತಿಯು ಜೀತ ನಿರ್ಮೂಲನೆಗಾಗಿ ಏನೆಲ್ಲ ಮಾಡಬೇಕು ಎಂಬ ಕುರಿತು ಜಿಲ್ಲಾ ಮ್ಯಾಜಿಸ್ಟ್ರೇಟ್ ಅಥವಾ ಅಧಿಕೃತ ಅಧಿಕಾರಿಗಳಿಗೆ ಸಲಹೆ ನೀಡುವ ಕೆಲಸ ಮಾಡುತ್ತದೆ.

ಇದಲ್ಲದೆ, ಜೀತದಿಂದ ಮುಕ್ತರಾದ ಜೀತ ಕಾರ್ಮಿಕರ ಆರ್ಥಿಕ ಮತ್ತು ಸಾಮಾಜಿಕ ಪುನರ್ವಸತಿಯನ್ನು ಸುಗಮಗೊಳಿಸುವ ಜವಾಬ್ದಾರಿಯೂ ಸಮಿತಿಯದ್ದೇ ಆಗಿರುತ್ತದೆ. ಪುನರ್ವಸತಿ ಪ್ರಕ್ರಿಯೆಯಲ್ಲಿ ರಾಜ್ಯ ಸರ್ಕಾರಗಳಿಗೆ ನೆರವು ನೀಡುವ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಮೂಲಕ ಮಾತ್ರ ಕೇಂದ್ರ ಸರ್ಕಾರವು ಪುನರ್ವಸತಿ ಕಾರ್ಯಕ್ರಮವನ್ನು ನಿರ್ವಹಿಸುತ್ತದೆ ಎಂದು ಹೇಳಿಕೊಳ್ಳುತ್ತಿದೆ. ವೈಫಲ್ಯದ ಹೊಣೆಗಾರಿಕೆಯಿಂದ ನುಣುಚಿಕೊಳ್ಳುವ ಪ್ರಯತ್ನ ಮಾಡುತ್ತಿದೆ.

ಜೀತದಾಳುಗಳಾಗಿ ದುಡಿಯುತ್ತಿರುವವರು ಯಾರು?

ಜೀತ ಕಾರ್ಮಿಕ ವ್ಯವಸ್ಥೆ (ನಿರ್ಮೂಲನೆ) ಕಾಯ್ದೆಯಡಿ ಪುನರ್ವಸತಿ ಪಡೆದಿರುವ ಫಲಾನುಭವಿಗಳಲ್ಲಿ 83% ಮಂದಿ ಎಸ್‌ಸಿ/ಎಸ್‌ಟಿ ಸಮುದಾಯಗಳಿಗೆ ಸೇರಿದವರಾಗಿದ್ದಾರೆ.  ಹೆಚ್ಚಿನ ಜೀತದಾಳುಗಳು ದಲಿತರು, ಬುಡಕಟ್ಟು ಜನಾಂಗದವರು ಹಾಗೂ ಹಿಂದುಳಿದ ವರ್ಗ ಸಮುದಾಯದವರೇ ಆಗಿದ್ದಾರೆ. ಅವರನ್ನು ಪ್ರಬಲ ಜಾತಿಯವರು ಜೀತದಾಳುಗಳಾಗಿ ಇರಿಸಿಕೊಂಡು ದುಡಿಸಿಕೊಳ್ಳುತ್ತಿದ್ದಾರೆ ಎಂದು ರಕ್ಷಿಸಲ್ಪಟ್ಟವರು ಹೇಳುತ್ತಾರೆ.

 ಪ್ರಾಥಮಿಕವಾಗಿ ದಲಿತರು, ಬುಡಕಟ್ಟು ಜನಾಂಗದವರು ಮತ್ತು ಹಿಂದುಳಿದ ವರ್ಗಗಳಲ್ಲಿ ಶಿಕ್ಷಣ ಮತ್ತು ಸಂಪನ್ಮೂಲಗಳ ಕೊರತೆಯೇ ಜೀತ ವ್ಯವಸ್ಥೆಗೆ ಪ್ರಮುಖ ಕಾರಣ. ಜೀತಪದ್ಧತಿಯು ಆರ್ಥಿಕ ಶೋಷಣೆಯ ಸ್ಪಷ್ಟ ಸೂಚಕವಾಗಿದೆ. ಬಡತನ, ಜಾತಿ ಮತ್ತು ಅಸಮಾನತೆಯು ಶೋಷಣೆಯನ್ನು ಪೋಷಿಸುವ ಸಾಮಾಜಿಕ ವ್ಯವಸ್ಥೆಯ ಪ್ರತಿಬಿಂಬವೂ ಜೀವ ಪದ್ದತಿಯೇ ಆಗಿದೆ.

ಮಾಹಿತಿ ಮೂಲ: ದಿ ವೈರ್

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಆನ್‌ಲೈನ್‌ ಜೂಜಾಟ ತಡೆಗೆ ಕಠಿಣ ಕಾನೂನು; ಸಂಸತ್ತಿನಲ್ಲಿ ಆನ್‌ಲೈನ್ ಗೇಮಿಂಗ್‌ ಪ್ರಚಾರ ಮತ್ತು ನಿಯಂತ್ರಣ ಮಸೂದೆ, 2025 ಮಂಡನೆ

ಭಾರತದ ಡಿಜಿಟಲ್ ಮನರಂಜನಾ ಕ್ಷೇತ್ರದಲ್ಲಿ ಭಾರೀ ಬದಲಾವಣೆಯನ್ನು ತರಲು ಸಿದ್ಧವಾಗಿರುವ ಆನ್‌ಲೈನ್...

ಕ್ರಿಮಿನಲ್ ಪ್ರಕರಣಗಳಲ್ಲಿ ಪ್ರಧಾನಿ, ಸಿಎಂ ಪದಚ್ಯುತಿಗೆ ಅನುವು ಮಾಡಿಕೊಡುವ ಮಸೂದೆ ಸಂಸತ್ತಿನಲ್ಲಿ ಮಂಡನೆ

ಗಂಭೀರ ಕ್ರಿಮಿನಲ್ ಪ್ರಕರಣಗಳಲ್ಲಿ ಬಂಧಿಸಲ್ಪಟ್ಟ ಅಥವಾ ಬಂಧನದಲ್ಲಿರುವ ಚುನಾಯಿತ ಪ್ರತಿನಿಧಿಗಳನ್ನು ಅಧಿಕಾರದಿಂದ...

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

ಗದಗ | ಮುಶಿಗೇರಿ ವಸತಿ ನಿಲಯಕ್ಕೆ ಮೂಲ ಸೌಕರ್ಯಗಳ ಕೊರತೆ; ವಿದ್ಯಾರ್ಥಿಗಳ ಗೋಳು ಕೇಳೋರ್ಯಾರು?

ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹಾಗೂ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ವಸತಿ...

Download Eedina App Android / iOS

X