‘ಫುಲೆ’ ಸಿನಿಮಾದಲ್ಲಿ ಬ್ರಾಹ್ಮಣರ ಬಗ್ಗೆ ಕೆಲವು ದೃಶ್ಯಗಳ ಬಗ್ಗೆ ವಿವಾದ ಉಂಟಾದ ಬಳಿಕ ಆ ದೃಶ್ಯಗಳಿಗೆ ಕತ್ತರಿ ಹಾಕಲು ಸೂಚಿಸಲಾಗಿದೆ. ಈ ನಡುವೆ ಯಾವುದೇ ದೃಶ್ಯಕ್ಕೆ ಕತ್ತರಿ ಹಾಕದೆ ಸಿನಿಮಾವನ್ನು ಬಿಡುಗಡೆ ಮಾಡುವಂತೆ ಎಎಪಿ ನಾಯಕ ಸಂಜಯ್ ಸಿಂಗ್ ಮಂಗಳವಾರ ಒತ್ತಾಯಿಸಿದ್ದಾರೆ.
ಸಿನಿಮಾ ಬಿಡುಗಡೆಗೆ ವಿರೋಧ ಮಾಡುವುದು ದಲಿತರು ಮತ್ತು ಫುಲೆ ಅವರನ್ನು ತಮ್ಮ ಮಾದರಿ ಎಂದು ಪರಿಗಣಿಸುವ ಜನರನ್ನು ಅವಮಾನಿಸಿದಂತೆ ಎಂದು ಸಂಜಯ್ ಸಿಂಗ್ ಆರೋಪಿಸಿದ್ದಾರೆ.
ಇದನ್ನು ಓದಿದ್ದೀರಾ? ‘ಫುಲೆ’ ವಿವಾದ | ಬಿಜೆಪಿ-ಆರ್‌ಎಸ್‌ಎಸ್ ದಲಿತ-ಬಹುಜನ ಇತಿಹಾಸವನ್ನು ಅಳಿಸಿಹಾಕಲು ಬಯಸಿದೆ: ರಾಹುಲ್ ಗಾಂಧಿ
ಏಪ್ರಿಲ್ 10ರಂದು ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದೆ. ಅದಾದ ಬಳಿಕ ಕೆಲವು ಬ್ರಾಹ್ಮಣ ಗುಂಪುಗಳು ಸಿನಿಮಾದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದೆ. ಬ್ರಾಹ್ಮಣ ಸಮುದಾಯವನ್ನು ಈ ಸಿನಿಮಾದಲ್ಲಿ ಕೆಟ್ಟದಾಗಿ ಚಿತ್ರಿಸಲಾಗಿದೆ ಎಂದು ಗುಂಪು ದೂರಿದೆ.
ಈ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿರುವ ಎಎಪಿ ನಾಯಕ ಸಂಜಯ್ ಸಿಂಗ್, “ದೇಶಾದ್ಯಂತ ಜನರು ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಜನ್ಮ ದಿನಾಚರಣೆಯನ್ನು ಆಚರಿಸುತ್ತಿರುವಾಗ, ಜ್ಯೋತಿಬಾ ಫುಲೆ ಮತ್ತು ಅವರ ಪತ್ನಿ ಸಾವಿತ್ರಿಬಾಯಿ ಅವರ ಜೀವನ ಮತ್ತು ಕೃತಿಗಳನ್ನು ಆಧರಿಸಿದ ‘ಫುಲೆ’ ಚಲನಚಿತ್ರ ಬಿಡುಗಡೆಗೆ ವಿರೋಧ ವ್ಯಕ್ತಪಡಿಸುತ್ತಿರುವುದು ನಮಗೆಲ್ಲರಿವಗೂ ನಿರಾಶೆ ಮೂಡಿಸಿದೆ. ಇದು ದಲಿತರು, ಫುಲೆ ದಂಪತಿಗಳಿಂದ ಸ್ಫೂರ್ತಿ ಪಡೆದ ಎಲ್ಲರಿಗೂ ಮಾಡಿದ ಅವಮಾನ” ಎಂದು ಹೇಳಿದ್ದಾರೆ.
“ಬ್ರಾಹ್ಮಣರು ಎರಡು ನಿಮಿಷಗಳ ಟ್ರೇಲರ್‌ನಿಂದ ಇಡೀ ಸಿನಿಮಾದ ಬಗ್ಗೆ ತಮ್ಮದೇ ಆದ ಪೂರ್ವಗ್ರಹಕ್ಕೆ ಬಂದಿದ್ದಾರೆ. ಆದರೆ ಚಿತ್ರದಲ್ಲಿ ಆಕ್ಷೇಪಾರ್ಹ ಏನೂ ಇಲ್ಲ” ಎಂದು ಚಲನಚಿತ್ರ ನಿರ್ದೇಶಕ ಅನಂತ್ ಮಹಾದೇವನ್ ಹೇಳಿಕೊಂಡಿದ್ದಾರೆ.
ಕಳೆದ ವಾರ ಬಿಡುಗಡೆಯಾಗಲಿದ್ದ ಸಿನಿಮಾ ಏಪ್ರಿಲ್ 25 ರಂದು ತೆರೆಗೆ ಬರಲಿದೆ.
