“ಅನೇಕರು ತಮ್ಮ ಧರ್ಮ ಮತ್ತು ನಂಬಿಕೆಗಳೇ ಸರ್ವೋಚ್ಚ ಎಂದು ಭಾವಿಸುವುದರಿಂದ, ಪ್ರಪಂಚದಾದ್ಯಂತ ಸಂಘರ್ಷಗಳಿಗೆ ಧರ್ಮವೇ ಕಾರಣ. ಏಕತೆಗೆ ಕರೆ ನೀಡುವ ಸನಾತನ ಧರ್ಮವನ್ನು ಅನುಸರಿಸುವುದರಿಂದ ಹಿಂದು ಧರ್ಮವು ವಿಭಿನ್ನವಾಗಿ ಕಾಣುತ್ತದೆ” ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.
ಕೇರಳದ ಪತ್ತನಂತಿಟ್ಟ ಜಿಲ್ಲೆಯ ಪಂಪಾ ನದಿಯ ದಡದಲ್ಲಿ ನಡೆದ ‘ಹಿಂದು ಏಕತಾ ಸಮ್ಮೇಳನ’ದಲ್ಲಿ ಮಾತನಾಡಿದ ಭಾಗವತ್, “ಧರ್ಮವನ್ನು ನಿಯಮಗಳಿಗೆ ಬದ್ಧವಾಗಿ ಆಚರಿಸಬೇಕು. ಯಾವುದೇ ಆಚರಣೆಗಳು ನಿಯಮಗಳ ವ್ಯಾಪ್ತಿಯಿಂದ ಹೊರಗಿದ್ದರೆ, ಅವುಗಳನ್ನು ರದ್ದುಗೊಳಿಸಬೇಕು. ನಾರಾಯಣ ಗುರು ಹೇಳುವಂತೆ, ಜಾತಿವಾದ ಮತ್ತು ಅಸ್ಪೃಶ್ಯತೆಯು ಧರ್ಮವಲ್ಲ. ಅವುಗಳನ್ನು ರದ್ದುಗೊಳಿಸಬೇಕು” ಎಂದು ಭಾಗವತ್ ಹೇಳಿದ್ದಾರೆ.
“ಹಿಂದುಗಳು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವಾಗ ಸಾಂಪ್ರದಾಯಿಕ ಉಡುಗೆ ತೊಡಬೇಕು. ಯಾವಾಗಲೂ ಸ್ಥಳೀಯ ಆಹಾರಗಳನ್ನೇ ತಿನ್ನಬೇಕು. ಇಂಗ್ಲಿಷ್ ಭಾಷೆಯಲ್ಲಿ ಮಾತನಾಡಬಾರದು” ಎಂದು ಭಾಗವತ್ ಹೇಳಿದ್ದಾರೆ.
”ಹಿಂದು ಧರ್ಮದ ಆತ್ಮವೇ ‘ಧರ್ಮ’. ಪ್ರತಿಯೊಬ್ಬರೂ ಧರ್ಮವನ್ನು ಪಾಲಿಸಬೇಕು. ತಮ್ಮ ಜೀವನಶೈಲಿ ಹಿಂದು ಸಂಪ್ರದಾಯಕ್ಕೆ ಅನುಗುಣವಾಗಿ ಇದೆಯೇ ಎಂಬುದನ್ನು ಪ್ರತಿ ಕುಟುಂಬವೂ ನೋಡಬೇಕು. ಪ್ರಾರ್ಥಿಸಲು ಅಥವಾ ಚರ್ಚಿಸಲು ವಾರಕ್ಕೊಮ್ಮೆಯಾದರೂ ಎಲ್ಲರೂ ಒಟ್ಟುಗೂಡಬೇಕು” ಎಂದು ಹೇಳಿದ್ದಾರೆ.
ಈ ವರದಿ ಓದಿದ್ದೀರಾ?; ಬಜೆಟ್ ವಿಶ್ಲೇಷಣೆ | ಬೇಟಿ ಬಚಾವೊ-ಬೇಟಿ ಪಢಾವೊ; ಹೇಳಿದ್ದೊಂದು ಮಾಡಿದ್ದೊಂದು
”ನಾವು ಮಾತನಾಡುವ ಭಾಷೆ, ನಾವು ಪ್ರಯಾಣಿಸುವ ಸ್ಥಳಗಳು ಮತ್ತು ನಮ್ಮ ಬಟ್ಟೆಗಳು ಸಂಪ್ರದಾಯಕ್ಕೆ ಹೊಂದಿಕೆಯಾಗುತ್ತವೆಯೇ ಎಂದು ನಾವು ಯೋಚಿಸಬೇಕು. ಸಹಾಯದ ಅಗತ್ಯವಿರುವ ನಮ್ಮ ಸ್ವಂತ ಸಹೋದರರನ್ನು ಭೇಟಿ ಮಾಡಬೇಕು. ನಾವು ಇಂಗ್ಲಿಷ್ ಮಾತನಾಡಬಾರದು ಮತ್ತು ನಮ್ಮ ಸ್ಥಳೀಯ ಆಹಾರ ಪದ್ದತಿಯನ್ನು ಅನುಸರಿಸಬೇಕು” ಎಂದಿದ್ದಾರೆ.
“ಹಿಂದು ಸಮಾಜವು ತನ್ನ ಉಳಿವಿಗಾಗಿ ಒಂದಾಗಬೇಕು. ಸಮುದಾಯವಾಗಿ ತನ್ನನ್ನು ತಾನು ಬಲಪಡಿಸಿಕೊಳ್ಳಬೇಕು. ಆದರೆ, ಬಲಪಡಿಸುವಿಕೆಯು ತನ್ನದೇ ಆದ ಭಯವನ್ನು ಹೊಂದಿದೆ. ಶಕ್ತಿಯನ್ನು ಹೇಗೆ ಬಳಸಬೇಕು ಎಂಬುದು ಮುಖ್ಯ. ಶಕ್ತಿಯ ಬಳಕೆಯು ಬೇರೆಯವರಿಗೆ ಹಾನಿ ಮಾಡಬಾರದು” ಎಂದು ಹೇಳಿದ್ದಾರೆ.