ಪತ್ನಿ ಮಾಡಿದ ಅಡುಗೆ, ತೊಟ್ಟ ಬಟ್ಟೆಯ ಬಗ್ಗೆ ಟೀಕೆ ಮಾಡುವುದು ಗಂಭೀರ ಕ್ರೌರ್ಯ ಅಥವಾ ಕಿರುಕುಳವಲ್ಲ ಎಂದು ಬಾಂಬೆ ಹೈಕೋರ್ಟ್ ಹೇಳಿದೆ. ಹಾಗೆಯೇ ವ್ಯಕ್ತಿಯೊಬ್ಬರ ವಿರುದ್ಧ ದಾಖಲಾದ ಕ್ರಿಮಿನಲ್ ಪ್ರಕರಣ ಮತ್ತು ಸಂಬಂಧಿತ ವಿಚಾರಣೆಗಳನ್ನು ರದ್ದುಗೊಳಿಸಿದೆ.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ವಿಭಾ ಕಂಕನ್ವಾಡಿ ಮತ್ತು ಸಂಜಯ್ ಎ ದೇಶ್‌ಮುಖ್ ಅವರನ್ನು ಒಳಗೊಂಡ ಹೈಕೋರ್ಟ್‌ನ ಔರಂಗಾಬಾದ್ ಪೀಠವು, “ಪತ್ನಿ ಸರಿಯಾದ ಬಟ್ಟೆ ಧರಿಸಿಲ್ಲ ಮತ್ತು ಅಡುಗೆಯನ್ನು ಸರಿಯಾಗಿ ಮಾಡಲು ಸಾಧ್ಯವಾಗುತ್ತಿಲ್ಲ ಎಂಬ ಹೇಳಿಕೆಗಳನ್ನು ನೀಡುವುದು ಗಂಭೀರ ಕ್ರೌರ್ಯ ಅಥವಾ ಕಿರುಕುಳದ ಕೃತ್ಯಗಳೆಂದು ಹೇಳಲಾಗದು” ಎಂದು ಹೇಳಿದೆ. ಹಾಗೆಯೇ ಎಫ್‌ಐಆರ್ ಅನ್ನು ರದ್ದುಗೊಳಿಸಿದೆ.
ಇದನ್ನು ಓದಿದ್ದೀರಾ? ಶಿಂದೆ ಟೀಕೆ ಪ್ರಕರಣ | ಎಫ್‌ಐಆರ್ ರದ್ದು ಕೋರಿ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ ಕುನಾಲ್ ಕಾಮ್ರಾ
2022ರ ಮಾರ್ಚ್‌ನಲ್ಲಿ ಈ ಜೋಡಿಯ ವಿವಾಹವಾಗಿದೆ. ಮದುವೆಯಾದ ಒಂದೂವರೆ ತಿಂಗಳ ನಂತರ ಆಕೆಯನ್ನು ಸರಿಯಾಗಿ ನಡೆಸಿಕೊಳ್ಳಲಾಗುತ್ತಿಲ್ಲ ಎಂದು ಪತ್ನಿ ಆರೋಪ ಮಾಡಿದ್ದಾರೆ. ತನ್ನ ಗಂಡನ ಕುಟುಂಬವು ಅವನ ಮಾನಸಿಕ ಮತ್ತು ದೈಹಿಕ ಕಾಯಿಲೆಗಳನ್ನು ತನ್ನಿಂದ ಮರೆಮಾಡಿದೆ ಎಂದು ದೂರಿದ್ದಾರೆ.
ಆದರೆ ಕೋರ್ಟ್ ಸಾಕ್ಷ್ಯಗಳ ಪರಿಶೀಲನೆ ಮಾಡಿದ್ದು, ಪತ್ನಿಯ ಹೇಳಿಕೆ ಸುಳ್ಳೆಂದು ಕಂಡುಬಂದಿದೆ. ವಿವಾಹಕ್ಕೂ ಮುನ್ನ ನಡೆದ ಚಾಟ್‌ಗಳನ್ನು ಪರಿಶೀಲಿಸಿದಾಗ ತಾನು ತೆಗೆದುಕೊಳ್ಳುವ ಮಾತ್ರೆಗಳ ಬಗ್ಗೆ ಆತ ಆಕೆಗೆ ಸ್ಪಷ್ಟವಾಗಿ ತಿಳಿಸಿದ್ದ ಎಂದು ತಿಳಿದುಬಂದಿದೆ. ವೈದ್ಯಕೀಯ ಚಿಕಿತ್ಸೆಯ ಬಗ್ಗೆ ಮದುವೆಗೆ ಮೊದಲೇ ತಿಳಿಸಲಾಗಿತ್ತು ಎಂದು ನ್ಯಾಯಾಲಯ ತೀರ್ಮಾನಿಸಿದೆ.
