- ಪಶ್ಚಿಮ ಬಂಗಾಳ 19 ಜಿಲ್ಲೆಗಳ 696 ಮತಗಟ್ಟೆಗಳಲ್ಲಿ ಮರು ಮತದಾನ
- ಡಾರ್ಜಿಲಿಂಗ್, ಜಾರ್ಗ್ರಾಮ್, ಕಾಲಿಂಪಾಂಗ್‌ನಲ್ಲಿ ಮರು ಮತದಾನ ಇಲ್ಲ
ಪಶ್ಚಿಮ ಬಂಗಾಳದಲ್ಲಿ ಮತಯಂತ್ರಗಳನ್ನು ವಿರೂಪಗೊಳಿಸಿ ಹಿಂಸಾಚಾರ ವರದಿಯಾದ ನಂತರ ಸೋಮವಾರ (ಜುಲೈ 10) ಪಂಚಾಯತ್ ಚುನಾವಣೆಯ ಮರು ಮತದಾನಕ್ಕೆ ರಾಜ್ಯ ಚುನಾವಣಾ ಆಯೋಗ ಮುಂದಾಗಿದೆ. ಈ ಹಿನ್ನೆಲೆ 19 ಜಿಲ್ಲೆಗಳ 696 ಮತಗಟ್ಟೆಗಳಲ್ಲಿ ಮರು ಮತದಾನ ಆರಂಭಗೊಂಡಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಚುನಾವಣೆ ವೇಳೆ ಮತಯಂತ್ರಗಳಿಗೆ ಬೆಂಕಿ ಹಾಕಿ, ಧ್ವಂಸಗೊಳಿಸಲಾಗಿತ್ತು. ಇದರಿಂದ ಮತದಾನ ಅಪೂರ್ಣವಾಗಿತ್ತು.
“ಇಂದು ಬೆಳಿಗ್ಗೆ 7 ಗಂಟೆಯಿಂದ ಮರು ಮತದಾನ ಆರಂಭಗೊಂಡಿದ್ದು, ಎಲ್ಲ ಮತಗಟ್ಟೆಗಳಲ್ಲಿ ಪಶ್ಚಿಮ ಬಂಗಾಳ ಪೊಲೀಸರ ಬಿಗಿ ಭದ್ರತೆ ಒದಗಿಸಲಾಗಿದ್ದು ಯಾವುದೇ ಅಹಿತಕರ ಘಟನೆಗಳು ವರದಿಯಾಗಿಲ್ಲ. ಸಂಜೆ ಐದು ಗಂಟೆಯವರೆಗೆ ಮರು ಮತದಾನ ನಡೆಯಲಿದೆ” ಎಂದು ಅಧಿಕಾರಿಗಳು ಹೇಳಿದ್ದಾರೆ.
“ಮರು ಮತದಾನ ನಡೆಯುತ್ತಿರುವ 696 ಮತಗಟ್ಟೆಗಳಲ್ಲಿ ಮತಯಂತ್ರಗಳನ್ನು ವಿರೂಪಗೊಳಿಸಿದ ಆರೋಪ ಕೇಳಿಬಂದಿತ್ತು. ಈ ಬಗ್ಗೆ ಪರಿಶೀಲನೆ ನಡೆಸಿದ ರಾಜ್ಯ ಚುನಾವಣಾ ಆಯೋಗ, ಸೋಮವಾರ ಮರು ಮತದಾನ ಮಾಡುವುದಾಗಿ ಪ್ರಕಟಣೆ ಹೊರಡಿಸಿತ್ತು” ಎಂದು ಅಧಿಕಾರಿಗಳು ತಿಳಿಸಿದ್ದಾರೆ.
“ಪಶ್ಚಿಮ ಬಂಗಾಳದಲ್ಲಿ ಮರು ಮತದಾನ ನಡೆಯುತ್ತಿರುವ ಜಿಲ್ಲೆಗಳ ಪೈಕಿ ಹಿಂಸಾಚಾರ ಪೀಡಿತ ಮುರ್ಷಿದಾಬಾದ್‌ನಲ್ಲಿ ಅತಿ ಹೆಚ್ಚು ಅಂದರೆ 175 ಮತಗಟ್ಟೆಗಳಿವೆ. ಮಾಲ್ಟಾ ಜಿಲ್ಲೆ 109 ಮತಗಟ್ಟೆಗಳನ್ನು ಹೊಂದಿದೆ.
ಉಳಿದಂತೆ ನಾಡಿಯಾದಲ್ಲಿ 89 ಮತಗಟ್ಟೆಗಳು, ಕೂಚ್ ಬೆಹಾರ್ 53, ಉತ್ತರ 24 ಪರಗಣಗಳು 46, ಉತ್ತರ ದಿನಜ್ಪುರ 42, ದಕ್ಷಿಣ 24 ಪರಗಣಗಳು 36, ಪುರ್ಬಾ ಮೇದಿನಿಪುರ 31 ಮತ್ತು ಹೂಗ್ಲಿ 29 ಮತಗಟ್ಟೆಗಳನ್ನು ಹೊಂದಿವೆ” ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಶನಿವಾರ ರಾಜ್ಯದ 61 ಸಾವಿರ ಮತಗಟ್ಟೆಗಳಲ್ಲಿ ಪಂಚಾಯತ್ ಚುನಾವಣೆಯ ಮತದಾನ ನಡೆದಿತ್ತು. ಈ ವೇಳೆ ಹಲವು ಮತಗಟ್ಟೆಗಳಲ್ಲಿ ಹಿಂಸಾಚಾರ ನಡೆದಿದ್ದವು. ಇಲ್ಲಿಯವರೆಗೆ 15 ಜನರು ಮೃತಪಟ್ಟಿದ್ದಾರೆ. ಮತಯಂತ್ರಗಳನ್ನು ವಿರೂಪಗೊಳಿಸಿ, ಬೆಂಕಿ ಹಚ್ಚಿ ಕೆರೆಗಳಿಗೆ ಎಸೆದ ಪ್ರಕರಣಗಳು ವರದಿಯಾಗಿದ್ದವು.
ಈ ಸುದ್ದಿ ಓದಿದ್ದೀರಾ? ಭ್ರಷ್ಟಾಚಾರ ಎಸಗಿರುವ ಎನ್‌ಸಿಪಿ ನಾಯಕರನ್ನು ಪ್ರಧಾನಿ ಮೋದಿ ಶಿಕ್ಷಿಸಬೇಕು: ಶರದ್ ಪವಾರ್
ಪಶ್ಚಿಮ ಬಂಗಾಳದ ಡಾರ್ಜಿಲಿಂಗ್, ಜಾರ್ಗ್ರಾಮ್ ಮತ್ತು ಕಾಲಿಂಪಾಂಗ್ ಜಿಲ್ಲೆಗಳಲ್ಲಿ ಮರು ಮತದಾನಕ್ಕೆ ಆದೇಶ ನೀಡಲಾಗಿಲ್ಲ. ಸಂಜೆ 5 ಗಂಟೆವರೆಗೆ ಮತದಾನ ನಡೆಯಲಿದೆ.
73,887 ಕ್ಷೇತ್ರಗಳಿಗೆ ಪಂಚಾಯತ್ ಚುನಾವಣೆ ನಡೆದಿದ್ದು 2.06 ಲಕ್ಷ ಅಭ್ಯರ್ಥಿಗಳು ಕಣದಲ್ಲಿದ್ದಾರೆ.