ಎಂಟು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿರುವ ಘಟನೆ ರಾಜಸ್ಥಾನದ ಉದಯಪುರ ಜಿಲ್ಲೆಯಲ್ಲಿ ನಡೆದಿದ್ದು, ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆರೋಪಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಜಮಾಯಿಸಿದ ಗ್ರಾಮಸ್ಥರು ಬಸ್‌ಗಳು ಮತ್ತು ಪೊಲೀಸ್ ಮತ್ತು ಜಿಲ್ಲಾಡಳಿತದ ಹಲವು ವಾಹನಗಳನ್ನು ಧ್ವಂಸಗೊಳಿಸಿದ್ದಾರೆ ಎಂದು ವರದಿಯಾಗಿದೆ.
ಪ್ರದೇಶದಲ್ಲಿ ಪರಿಸ್ಥಿತಿ ಉದ್ವಿಗ್ನವಾಗುತ್ತಿದ್ದಂತೆ, ಮೂರು ಪೊಲೀಸ್ ಠಾಣೆಗಳ ಸಿಬ್ಬಂದಿಯನ್ನು ಅಲ್ಲಿಗೆ ಕರೆಸಿ ಪರಿಸ್ಥಿತಿ ನಿಯಂತ್ರಿಸಲಾಗಿದೆ ಎಂದು ಹೇಳಲಾಗಿದೆ.
ಇದನ್ನು ಓದಿದ್ದೀರಾ? ಗರ್ಭಿಣಿ ಮೇಲೆ ಅತ್ಯಾಚಾರ – ಹತ್ಯೆ; ಉದ್ವಿಗ್ನಗೊಂಡ ಗ್ರಾಮ ತೊರೆದ ಪುರುಷರು
ಈ ಬಗ್ಗೆ ಮಾಧ್ಯಮವೊಂದಕ್ಕೆ ಮಾಹಿತಿ ನೀಡಿದ ಪೊಲೀಸ್ ಅಧಿಕಾರಿ, “ಭಾನುವಾರ ಸಂಜೆ ಸುಮಾರು 7.30ರ ಸುಮಾರಿಗೆ ಬಾಲಕಿ ಹೊಲಕ್ಕೆ ಹೋಗಿದ್ದಳು. ನಂತರ ಆರೋಪಿ ಬಾಲಕಿಯನ್ನು ಬಲವಂತವಾಗಿ ಹತ್ತಿರದ ಪೊದೆಗೆ ಕರೆದೊಯ್ದು ಅಲ್ಲಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಯಾರಿಗೂ ಹೇಳದಂತೆ ಬೆದರಿಕೆ ಹಾಕಿದ್ದಾನೆ” ಎಂದು ತಿಳಿಸಿದ್ದಾರೆ.
“ಬಾಲಕಿ ಮನೆಗೆ ಹಿಂತಿರುಗಿ ತನ್ನ ಪೋಷಕರಿಗೆ ತಿಳಿಸಿದ್ದಾಳೆ. ನಂತರ ಕುಟುಂಬಸ್ಥರು ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ. ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ” ಎಂದು ಮಾಹಿತಿ ನೀಡಿದ್ದಾರೆ.
ಆರೋಪಿಯನ್ನು ರಾಮ್‌ಲಾಲ್ ಎಂದು ಗುರುತಿಸಲಾಗಿದ್ದು, ಆರಂಭದಲ್ಲಿ ಪರಾರಿಯಾಗಿದ್ದನು. ಬಳಿಕ ಪೊಲೀಸರು ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿ ಆತನನ್ನು ಸೋಮವಾರ ಬಂಧಿಸಿದ್ದಾರೆ. ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
ಈ ಅತ್ಯಾಚಾರ ಘಟನೆ ವಿರುದ್ಧ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸೋಮವಾರ ಬೆಳಿಗ್ಗೆ 10 ಗಂಟೆ ಸುಮಾರಿಗೆ ಸ್ಥಳೀಯ ಪೊಲೀಸ್ ಠಾಣೆಗೆ ತೆರಳಿದ್ದು, ಆರೋಪಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ. ನೆರೆದಿದ್ದ ಗ್ರಾಮಸ್ಥರೊಂದಿಗೆ ಶಾಂತಿಯುತ ಚರ್ಚೆ ನಡೆಯುತ್ತಿದ್ದಾಗ, ಚಿಕಿತ್ಸೆ ವೇಳೆ ಬಾಲಕಿ ಮೃತಪಟ್ಟಿದ್ದಾಳೆ ಎಂಬ ವದಂತಿ ಹರಡಿದೆ. ಈ ವೇಳೆ ಆಕ್ರೋಶಗೊಂಡ ಗ್ರಾಮಸ್ಥರು ಪೊಲೀಸ್ ಸಿಬ್ಬಂದಿಯ ಮೇಲೆ ಕಲ್ಲು ತೂರಾಟ ನಡೆಸಿದರು. ಸುಮಾರು 10 ಪೊಲೀಸ್ ವಾಹನಗಳಿಗೆ ಬೆಂಕಿ ಹಚ್ಚಿದರು. ಬಸ್‌ಗಳನ್ನು ಧ್ವಂಸಗೊಳಿಸಲು ಪ್ರಾರಂಭಿಸಿತು. ರಸ್ತೆ ತಡೆ ನಡೆಸಿದರು ಎಂದು ವರದಿಯಾಗಿದೆ.
ಸಮೀಪದ ಇತರ ಪೊಲೀಸ್ ಠಾಣೆಗಳಿಂದ ಹೆಚ್ಚುವರಿ ಪೊಲೀಸ್ ಪಡೆಗಳನ್ನು ಪ್ರದೇಶದಲ್ಲಿ ನಿಯೋಜಿಸಲಾಗಿದೆ. ಈ ಘಟನೆ ಸಂಬಂಧ ಪೊಲೀಸರು 38 ಮಂದಿಯನ್ನು ಬಂಧಿಸಿದ್ದಾರೆ. ಪರಿಸ್ಥಿತಿ ಈಗ ನಿಯಂತ್ರಣದಲ್ಲಿದೆ. ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
