ಬಾಲಿವುಡ್ ನಟ ಟೈಗರ್ ಶ್ರಾಫ್ ಅವರ ಕಾರಿನ ಮೇಲೆ ನಡೆದ ಗುಂಡಿನ ದಾಳಿ ಪ್ರಕರಣ ಭೂಗತ ಪಾತಿಕಗಳ ಕೃತ್ಯ ಮರುಕಳಿಸಿದೆಯೇ ಎಂಬ ಆಂತಕಕ್ಕೆ ಕಾರಣವಾಗಿದೆ. ಈ ದಾಳಿ ಕುರಿತು ವಿವಾದಗಳು ಮತ್ತು ರಾಜಕೀಯ ವಾಗ್ವಾದಗಳು ನಡೆಯುತ್ತಿವೆ. ಈ ನಡುವೆ, ದೆಹಲಿ ಪೊಲೀಸರ ಪತ್ರಿಕಾಗೋಷ್ಠಿಯೊಂದರಲ್ಲಿ ಕುಖ್ಯಾತ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್‌ನನ್ನು ‘ಲಾರೆನ್ಸ್ ಬಿಷ್ಣೋಯ್ ಸಾಬ್’ ಎಂದು ಪೊಲೀಸರು ಸಂಬೋಧಿಸಿದ್ದಾರೆ. ಗ್ಯಾಂಗ್‌ಸ್ಟರ್‌ಗೆ ದೆಹಲಿ ಪೊಲೀಸರು ನೀಡಿರುವ ಈ ಗೌರವನ್ನು ‘ಕಾಕ್ರೋಚ್ ಜನತಾ ಪಾರ್ಟಿ’ಯ (CJP) ಸಂಸ್ಥಾಪಕ ಅಭಿಜೀತ್ ದೀಪ್ಕೆ ಖಂಡಿಸಿದ್ದಾರೆ.
ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪತ್ರಿಕಾಗೋಷ್ಠಿಯ ವೀಡಿಯೊವನ್ನು ಹಂಚಿಕೊಂಡಿರುವ ದೀಪ್ಕೆ, “ಪೊಲೀಸರಿಗೆ ಗ್ಯಾಂಗ್‌ಸ್ಟರ್‌ಗಳ ಬಗ್ಗೆ ಅಪಾರ ಗೌರವವಿದೆ. ಆದರೆ, ಶಾಂತಿಯುತವಾಗಿ ಪ್ರತಿಭಟನೆ ನಡೆಸುವ ವಿದ್ಯಾರ್ಥಿಗಳು ಮತ್ತು ಕಾರ್ಯಕರ್ತರಿಗೆ ಕನಿಷ್ಠ 10% ಸೌಜನ್ಯವನ್ನೂ ಅವರು ತೋರುವುದಿಲ್ಲ. ಸರ್ಕಾರ ಮತ್ತು ಪೊಲೀಸರ ಆದ್ಯತೆಗಳು ಸಂಪೂರ್ಣವಾಗಿ ತಪ್ಪಾಗಿರುವುದರಿಂದಲೇ ನೈಜ ಅಪರಾಧಿಗಳನ್ನು ಬಿಟ್ಟು ವಿದ್ಯಾರ್ಥಿಗಳು ಮತ್ತು ಕಾರ್ಯಕರ್ತರ ಮೇಲೆ ದಬ್ಬಾಳಿಕೆ ನಡೆಸಲಾಗುತ್ತಿದೆ” ಎಂದು ವಾಗ್ದಾಳಿ ನಡೆಸಿದ್ದಾರೆ.
“Lawrence Bishnoi Sahab” The respect Delhi Police has for gangsters… Wish they showed even 10% of this courtesy to students and activists who are doing nothing but protest. https://t.co/znv66dxoNI
— Abhijeet Dipke (@abhijeet_dipke) October 19, 2026
ಮುಂಬೈನಲ್ಲಿ ಜುಹು ಪ್ರದೇಶದಲ್ಲಿ ತೆರಳುತ್ತಿದ್ದ ನಟ ಟೈಗರ್ ಶ್ರಾಫ್ ಅವರ ಕಾರಿನ ಮೇಲೆ ದುಷ್ಕರ್ಮಿಗಳ ಗುಂಪು ಗುಂಡಿನ ದಾಳಿ ನಡೆಸಿದೆ. ಅದೃಷ್ಟವಶಾತ್ ನಟ ಪ್ರಾಣಾಪಾಯದಿಂದ ಪಾರಾಗಿದ್ದು ಸುರಕ್ಷಿತವಾಗಿದ್ದಾರೆ. ಆದರೆ, ಈ ದಾಳಿಯಲ್ಲಿ ನಟನ ಚಾಲಕ ಫಿರ್ದೌಸ್ ಅವರ ಎಡಗೈಗೆ ಗುಂಡು ತಗುಲಿದ್ದು, ಮತ್ತೊಬ್ಬರಿಗೂ ಗಾಯಗಳಾಗಿವೆ. ಈ ಘಟನೆಗೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ಮೂವರು ಅಪರಿಚಿತ ವ್ಯಕ್ತಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 109(1), 3(5) ಹಾಗೂ ಶಸ್ತ್ರಾಸ್ತ್ರ ಕಾಯ್ದೆಯ ಸೆಕ್ಷನ್ 3 ಮತ್ತು 25ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ. ಇದೀಗ, ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.




