ನೀಟ್ – ಯುಜಿ 2024 ಪರೀಕ್ಷೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಅಕ್ರಮ ನಡೆದು ವೈದ್ಯಕೀಯ ಪ್ರವೇಶ ಪರೀಕ್ಷೆಯ ಪಾವಿತ್ರ್ಯತೆಗೆ ಧಕ್ಕೆಯಾಗಿದ್ದರೆ ಮಾತ್ರ ಮರುಪರೀಕ್ಷೆ ನಡೆಸಬಹುದು ಎಂದು ಸುಪ್ರೀಂ ಕೋರ್ಟ್ ಇಂದು ತಿಳಿಸಿದೆ.
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್ ನೇತೃತ್ವದ ಪೀಠ ನೀಟ್ ಯುಜಿ ಪರೀಕ್ಷೆಯಲ್ಲಿ ಅಕ್ರಮ ಹಾಗೂ ಉತ್ತರ ಪತ್ರಿಕೆ ಸೋರಿಕೆಗೆ ಸಂಬಂಧಿಸಿದಂತೆ 40 ಅರ್ಜಿಗಳ ವಿಚಾರಣೆ ನಡೆಸಿತು.
ಸಂಪೂರ್ಣ ಪರೀಕ್ಷೆಯನ್ನು ರದ್ದುಪಡಿಸಬೇಕಾದರೆ ಪತ್ರಿಕೆ ಸೋರಿಕೆ ಪರಿಣಾಮಕಾರಿಯಾಗಿದೆ ಎಂದು ಪೂರಕ ಸಾಕ್ಷಾಧಾರಗಳೊಂದಿಗೆ ಸ್ಪಷ್ಟಪಡಿಸಬೇಕು ಎಂದು ಮುಖ್ಯ ನ್ಯಾಯಮೂರ್ತಿಗಳು ಹಿರಿಯ ವಕೀಲರಾದ ನರೇಂದ್ರ ಹೂಡ ಹಾಗೂ ಪ್ರತಿನಿಧಿಸಿದ್ದ ಅರ್ಜಿದಾರರಿಗೆ ಸೂಚನೆ ನೀಡಿದರು.
“23 ಲಕ್ಷದಲ್ಲಿ ಒಂದು ಲಕ್ಷ ಮಂದಿ ಮಾತ್ರ ಪ್ರವೇಶ ಪಡೆಯುತ್ತಾರೆ. ನಾವು ಮರು ಪರೀಕ್ಷೆ ನಡೆಸಲು ಸಾಧ್ಯವಿಲ್ಲ. ಸಂಪೂರ್ಣ ಪರೀಕ್ಷೆ ಪರಿಣಾಮಕಾರಿಯಾಗಿ ಅಕ್ರಮವಾಗಿದ್ದರೆ ಮಾತ್ರ ಮರು ಪರೀಕ್ಷೆ ನಡೆಸಬಹುದು” ಎಂದು ಮುಖ್ಯ ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್ ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಗ್ಯಾರಂಟಿ ಯೋಜನೆಗಳಿಗೆ ಮೀಸಲು ನಿಧಿ ಬಳಕೆಯನ್ನು ತಕ್ಷಣ ತಡೆಯಬೇಕು
ದೇಶಾದ್ಯಂತ ಸರ್ಕಾರ ಹಾಗೂ ಖಾಸಗಿ ವೈದ್ಯಕೀಯ ಕಾಲೇಜುಗಳ ಸೀಟುಗಳ ಸಂಖ್ಯೆಯ ಬಗ್ಗೆ ತಿಳಿಸುವಂತೆ ಮುಖ್ಯ ನ್ಯಾಯಮೂರ್ತಿಗಳು ಹೂಡ ಅವರನ್ನು ಪ್ರಶ್ನಿಸಿದರು.
ಒಂದು ಲಕ್ಷಕ್ಕೂ ಹೆಚ್ಚು ಸೀಟುಗಳಿದ್ದು, ಒಂದು ವೇಳೆ ಮರು ಪರೀಕ್ಷೆ ನಡೆಸಿದರೆ ಒಟ್ಟು 23 ಲಕ್ಷ ಅಭ್ಯರ್ಥಿಗಳಲ್ಲಿ ಈಗ ಅಕ್ರಮವಾಗಿ ಪ್ರವೇಶ ಪಡೆದಿರುವ ಹಲವು ಮಂದಿಗೆ ಸೀಟು ಲಭಿಸುವುದಿಲ್ಲ. ಹಲವು ಪ್ರಮಾಣಿಕ ಅಭ್ಯರ್ಥಿಗಳು ಪ್ರವೇಶ ಪಡೆಯಲಿದ್ದಾರೆ ಎಂದು ಅರ್ಜಿದಾರರ ಪರ ವಕೀಲರು ಪೀಠಕ್ಕೆ ಮನವರಿಕೆ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯ ನ್ಯಾಯಮೂರ್ತಿಗಳು, ನಾವು ಮರು ಪರೀಕ್ಷೆಗೆ ಆದೇಶಿಸಲು ಸಾಧ್ಯವಿಲ್ಲ. ಸಂಪೂರ್ಣ ಪರೀಕ್ಷೆಯನ್ನು ರದ್ದುಪಡಿಸಬೇಕಾದರೆ ಪತ್ರಿಕೆ ಸೋರಿಕೆ ಪರಿಣಾಮಕಾರಿಯಾಗಿದೆ ಎಂದು ಪೂರಕ ಸಾಕ್ಷಾಧಾರಗಳೊಂದಿಗೆ ಸ್ಪಷ್ಟಪಡಿಸಬೇಕು ಎಂದು ಸ್ಪಷ್ಟಪಡಿಸಿದರು.