ಭಾರತದ ಮುಂದಿನ ನೌಕಾಪಡೆಯ ಮುಖ್ಯಸ್ಥರನ್ನಾಗಿ ಡಿ ಕೆ ತ್ರಿಪಾಠಿ ಅವರನ್ನು ಕೇಂದ್ರ ಸರ್ಕಾರ ನೇಮಿಸಿದೆ.
ತ್ರಿಪಾಠಿ ಅವರು ಪ್ರಸ್ತುತ ವೈಸ್ ಅಡ್ಮಿರಲ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಹಾಲಿ ನೌಖಾಪಡೆಯ ಮುಖ್ಯಸ್ಥರಾಗಿರುವ ಅಡ್ಮರಲ್ ಆರ್ ಹರಿ ಕುಮಾರ್ ಅವರು ಏ.30 ರಂದು ನಿವೃತ್ತಿಯಾಗಲಿದ್ದು, ಅದೇ ದಿನದಂದು ಡಿ ಕೆ ತ್ರಿಪಾಠಿ ಅಧಿಕಾರ ಸ್ವೀಕರಿಸಲಿದ್ದಾರೆ.
ಮೇ 15, 1964 ರಂದು ಜನಿಸಿದ ತ್ರಿಪಾಠಿ, ಖಡಕ್ವಾಸ್ಲಾದ ಸೈನಿಕ್ ಶಾಲೆಯಲ್ಲಿ ಮತ್ತು ನ್ಯಾಷನಲ್ ಡಿಫೆನ್ಸ್ ಅಕಾಡೆಮಿಯ ಶಿಕ್ಷಣ ಪಡೆದುಕೊಂಡರು. 1985 ರಲ್ಲಿ ಭಾರತೀಯ ನೌಕಾಪಡೆ ಸೇರ್ಪಡೆಗೊಂಡರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಚುನಾವಣಾ ವಿಷಯವಾದ ’ಸಂವಿಧಾನ’ ಮತ್ತು ಮೋದಿ ಮಾತಿನ ಬೂಟಾಟಿಕೆ
ತ್ರಿಪಾಠಿ ಅವರು ಆರಂಭದಲ್ಲಿ ನೌಕಾಪಡೆಯ ಮುಂಚೂಣಿ ಯುದ್ಧ ನೌಕೆಗಳಲ್ಲಿ ಸಿಗ್ನಲ್ ಸಂವಹನ ಅಧಿಕಾರಿ ಮತ್ತು ಎಲೆಕ್ಟ್ರಾನಿಕ್ ವಾರ್‌ಫೇರ್ ಅಧಿಕಾರಿಯಾಗಿ ಸೇವೆ ಸಲ್ಲಿಸಿದರು. ನಂತರ ಕ್ಷಿಪಣಿ ವಿಧ್ವಂಸಕ ಐಎನ್‌ಎಸ್ ಮುಂಬೈನ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಪ್ರಧಾನ ಯುದ್ಧ ಅಧಿಕಾರಿಯಾಗಿ ಸೇವೆ ಸಲ್ಲಿಸಿದರು.
ಸುಮಾರು 39 ವರ್ಷಗಳ ಕಾಲ ಅವರ ಸುದೀರ್ಘ ಸೇವೆಯಲ್ಲಿ, ಮುಂಬೈನ ವೆಸ್ಟರ್ನ್ ಫ್ಲೀಟ್‌ನ ಫ್ಲೀಟ್ ಕಾರ್ಯನಿರ್ವಹಣೆಯ ಅಧಿಕಾರಿ, ನೌಕಾ ಕಾರ್ಯಾಚರಣೆಗಳ ನಿರ್ದೇಶಕ, ಪ್ರಧಾನ ನಿರ್ದೇಶಕ ನೆಟ್ವರ್ಕ್ ಸೆಂಟ್ರಿಕ್ ಕಾರ್ಯಾಚರಣೆಗಳು ಮತ್ತು ನೌಕಾ ಯೋಜನೆಗಳ ಪ್ರಧಾನ ನಿರ್ದೇಶಕ ಸೇರಿದಂತೆ ವಿವಿಧ ಪ್ರಮುಖ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ.
ತ್ರಿಪಾಠಿ ಅವರ ಸೇವೆಗೆ ಕೇಂದ್ರ ಸರ್ಕಾರವು ಪರಮ ವಿಶಿಷ್ಟ ಸೇವಾ ಪದಕ, ಅತಿ ವಿಶಿಷ್ಟ ಸೇವಾ ಪದಕ ಮತ್ತು ನವೋ ಸೇನಾ ಪದಕಗಳನ್ನು ನೀಡಿ ಗೌರವಿಸಿದೆ.
