ವಿದೇಶಿ ಪ್ರಜೆಗಳನ್ನು ಏಕೆ ಬಂಧನ ಕೇಂದ್ರಗಳಲ್ಲಿ ಇರಿಸಲಾಗಿದೆ ಹಾಗೂ ಏಕೆ ಅವರನ್ನು ಆಯಾ ದೇಶಗಳಿಗೆ ಗಡೀಪಾರು ಮಾಡಿಲ್ಲ ಎಂಬ ಬಗ್ಗೆ ವಿವರಣೆ ನೀಡುವಂತೆ ಸುಪ್ರೀಂ ಕೋರ್ಟ್, ಅಸ್ಸಾಂ ಸರ್ಕಾರಕ್ಕೆ ಆದೇಶ ನೀಡಿದೆ. ಪ್ರಕರಣದ ಮುಂದಿನ ವಿಚಾರಣೆಯ ವೇಳೆ ರಾಜ್ಯದ ಮುಖ್ಯ ಕಾರ್ಯದರ್ಶಿ ಈ ಸಂಬಂಧ ವಿವರಣೆ ನೀಡಲು ವರ್ಚುವಲ್ ವಿಧಾನದ ಮೂಲಕ ಹಾಜರಾಗುವಂತೆ ಸೂಚಿಸಿದೆ.
ಮೂಲಭೂತ ಹಕ್ಕುಗಳು ಕೇವಲ ಭಾರತೀಯ ಪ್ರಜೆಗಳಿಗೆ ಮಾತ್ರ ಸೀಮಿತವಲ್ಲ; ವಿದೇಶಿಯರು ಸೇರಿದಂತೆ ಎಲ್ಲ ಜನತೆಗೆ ಇರುವಂಥದ್ದು. ಆದ್ದರಿಂದ ಬಂಧನ ಕೇಂದ್ರಗಳಲ್ಲಿರುವವರನ್ನು ಆಯಾ ದೇಶಗಳಿಗೆ ಗಡೀಪಾರು ಮಾಡಲು ತಕ್ಷಣದ ಕ್ರಮ ಕೈಗೊಳ್ಳಬೇಕು ಎಂದು ನ್ಯಾಯಮೂರ್ತಿ ಅಭಯ್ ಎಸ್.ಓಕಾ ಮತ್ತು ಎನ್.ಕೋಟೀಶ್ವರ ಸಿಂಗ್ ಅವರನ್ನೊಳಗೊಂಡ ನ್ಯಾಯಪೀಠ ಆದೇಶಿಸಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಕೊಲ್ಕತ್ತಾದ ಭೀಭತ್ಸ ರೇಪ್-ಹತ್ಯೆ ತನಿಖೆಯಲ್ಲಿ ವಿಫಲವಾಯಿತೇ ಸಿಬಿಐ?
ಅಸ್ಸಾಂನ ಬಂಧನ ಕೇಂದ್ರಗಳು/ ತಾತ್ಕಾಲಿಕ ಶಿಬಿರಗಳಲಿ 270 ಮಂದಿಯನ್ನು ಇರಿಸಿರುವ ಬಗೆಗಿನ ಪ್ರಕರಣದ ಬಗ್ಗೆ ನ್ಯಾಯಪೀಠ ವಿಚಾರಣೆ ನಡೆಸುತ್ತಿದೆ.”ಅನುಸರಣಾ ಅಫಿಡವಿಟ್ ಸಲ್ಲಿಸಲು ಸರ್ಕಾರಕ್ಕೆ ಆರು ವಾರಗಳ ಕಾಲಾವಕಾಶ ನೀಡಲಾಗಿತ್ತು. ತಾತ್ಕಾಲಿಕ ಶಿಬಿರಗಳಲ್ಲಿ 270 ಮಂದಿ ವಿದೇಶಿ ಪ್ರಜೆಗಳನ್ನು ಇರಿಸಿದ ಬಗ್ಗೆ ಸಕಾರಣಗಳನ್ನು ದಾಖಲೆ ರೂಪದಲ್ಲಿ ನೀಡುವುದನ್ನು ನಾವು ನಿರೀಕ್ಷಿಸಿದ್ದೇವೆ. ಜತೆಗೆ ಅವರನ್ನು ಆಯಾ ದೇಶಗಳಿಗೆ ಗಡೀಪಾರು ಮಾಡಲು ಕೈಗೊಳ್ಳಲಾದ ಕ್ರಮಗಳ ಬಗ್ಗೆಯೂ ವಿವರಣೆ ನೀಡಬೇಕು ಎಂದು ಸೂಚಿಸಿತ್ತು.
“ವಿದೇಶಿಯರು 10 ವರ್ಷಕ್ಕಿಂತಲೂ ಅಧಿಕ ಕಾಲದಿಂದ ಈ ಶಿಬಿರಗಳಲ್ಲಿ ಇದ್ದಾರೆ. ಅವರನ್ನು ಬಂಧನದಲ್ಲಿ ಇರಿಸಿದ ಬಗ್ಗೆ ಅಫಿಡವಿಟ್ ನಲ್ಲಿ ಯಾವ ಸಮರ್ಥನೆಯೂ ಇಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಅವರ ಗಡೀಪಾರಿಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಇದು ನ್ಯಾಯಾಲಯ ಆದೇಶದ ಸ್ಪಷ್ಟ ಉಲ್ಲಂಘನೆ. ಅನುಸರಣೆ ಮಾಡದ ಬಗ್ಗೆ ವಿವರಣೆ ನೀಡಲು ಮುಂದಿನ ವಿಚಾರಣೆ ದಿನಾಂಕದಂದು ಅಸ್ಸಾಂ ಮುಖ್ಯ ಕಾರ್ಯದರ್ಶಿ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಹಾಜರಾಗುವಂತೆ ನಿರ್ದೇಶಿಸುತ್ತಿದ್ದೇವೆ” ಎಂದು ನ್ಯಾಯಾಲಯ ಹೇಳಿದೆ.
