ರೈಲಿನಲ್ಲಿ ನಾಲ್ವರು ಮುಸ್ಲಿಮರನ್ನು ಕೊಂದಿದ್ದ ಆರ್‌ಪಿಎಫ್‌ ಕಾನ್‌ಸ್ಟೆಬಲ್; ವರ್ಷವಾದರೂ ತೆವಳುತ್ತಿದೆ ತನಿಖೆ

Date:

Advertisements

ಜೈಪುರ-ಮುಂಬೈ ರೈಲಿನಲ್ಲಿ ನಾಲ್ವರು ಮುಸ್ಲಿಂ ಪ್ರಯಾಣಿಕರನ್ನು ಆರ್‌ಪಿಎಫ್ ಕಾನ್‌ಸ್ಟೆಬಲ್ ಆಗಿದ್ದ ಚೇತನ್‌ಸಿನ್ಹ್ ಚೌಧರಿ ಗುಂಡಿಕ್ಕಿ ಹತ್ಯೆಗೈದು ಒಂದು ವರ್ಷ ಕಳೆದಿದೆ. ಇನ್ನೂ, ಆರೋಪಿಗೆ ಶಿಕ್ಷೆಯಾಗಿಲ್ಲ. ಸಂತ್ರಸ್ತರಿಗೆ ನ್ಯಾಯ ದೊರೆತಿಲ್ಲ. ಸರ್ಕಾರವು ತ್ವರಿತ ವಿಚಾರಣೆಯ ಭರವಸೆ ನೀಡಿತ್ತಾದರೂ, ತನಿಖೆಯು ಬಸವನ ಹುಳುವಿನ ರೀತಿಯಲ್ಲಿ ತೆವಳುತ್ತಿದೆ ಎಂದು ಸಂತ್ರಸ್ತರ ಕುಟುಂಬಸ್ಥರು ಆರೋಪಿಸಿದ್ದಾರೆ. ಆರೋಪಿಗೆ ಕಠಿಣ ಶಿಕ್ಷೆಯಾಗಬೇಕೆಂದು ಒತ್ತಾಯಿಸಿದ್ದಾರೆ.

ಕಳೆದ ವರ್ಷ ಜುಲೈ 31ರಂದು ಜೈಪುರ್-ಮುಂಬೈ ಸೆಂಟ್ರಲ್ ಸೂಪರ್‌ಫಾಸ್ಟ್‌ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಮುಂಬೈನ ಬೋರಿವಲಿ ಬಳಿ ಆರೋಪಿ ಚೌಧರಿ ತನ್ನ ಹಿರಿಯ ಸಹಾಯಕ ಸಬ್ ಇನ್ಸ್‌ಪೆಕ್ಟರ್‌ ಟಿಕಾರಾಂ ಮೀನಾ ಮತ್ತು ಮೂವರು ಪ್ರಯಾಣಿಕರಾದ ಅಬ್ದುಲ್ ಕಾದರ್ ಮೊಹಮ್ಮದ್ ಹುಸೇನ್ ಭಾನಪುರವಾಲಾ, ಸೈಯದ್ ಸೈಫುದ್ದೀನ್ ಮತ್ತು ಅಸ್ಗರ್ ಅಬ್ಬಾಸ್ ಶೇಖ್ ಅವರನ್ನು ಗುಂಡಿಕ್ಕಿ ಕೊಂದಿದ್ದರು.

ಆರೋಪಿ ಚೌಧರಿಯನ್ನು ಬಂಧಿಸಲಾಗಿದ್ದು, ಆತನನ್ನು ಅಕೋಲಾ ಜೈಲಿನಲ್ಲಿ ಇರಿಸಲಾಗಿದೆ. ಆತನ ವಿರುದ್ಧ 39 ಪ್ರತ್ಯಕ್ಷ ಸಾಕ್ಷಿಗಳ ಹೇಳಿಕೆಗಳೊಂದಿಗೆ 1,097 ಪುಟಗಳ ಚಾರ್ಜ್‌ಶೀಟ್‌ಅನ್ನು ಬೊರಿವಲಿ ಜಿಆರ್‌ಪಿ ಅಧಿಕಾರಿಗಳು 2023ರ ಅಕ್ಟೋಬರ್‌ನಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಕೋಮು ದ್ವೇಷದಿಂದಲೇ ಮೂವರು ಪ್ರಯಾಣಿಕರನ್ನು ಚೌದರಿ ಹತ್ಯೆಗೈದಿದ್ದಾರೆಂದು ಅಧಿಕಾರಿಗಳು ಚಾರ್ಜ್‌ಶೀಟ್‌ನಲ್ಲಿ ಹೇಳಿದ್ದಾರೆ.

Advertisements

ಆದಾಗ್ಯೂ, ಪ್ರಕರಣದ ಆರೋಪಪಟ್ಟಿ ಸಲ್ಲಿಸಿದ ಬಳಿಕ ಯಾವುದೇ ಮಹತ್ವದ ಬೆಳವಣಿಗೆ ನಡೆದಿಲ್ಲ. “ಆರೋಪಿ (ಚೌಧರಿ) ವಿರುದ್ಧ ಆರೋಪಗಳನ್ನು ರೂಪಿಸುವ ಪ್ರಕ್ರಿಯೆ ಇನ್ನೂ ಮುಗಿದಿಲ್ಲ. ಪ್ರಕರಣದ ವಿಚಾರಣೆ ಈಗಷ್ಟೇ ಆರಂಭವಾಗಬೇಕಿದೆ” ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಪ್ರಕರಣವನ್ನು ತ್ವರಿತಗತಿಯಲ್ಲಿ ತನಿಖೆ ನಡೆಸಲಾಗುವುದು ಎಂದು ಸರ್ಕಾರ ಘೋಷಿಸಿತ್ತು. ಆದರೆ, ಇಲ್ಲಿಯವರೆಗೆ ಪ್ರಕರಣಕ್ಕೆ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಅನ್ನು ನಿಯೋಜಿಸಲಾಗಿಲ್ಲ ಎಂದು ವರದಿಯಾಗಿದೆ.

ಚೌಧರಿಯ ಗುಂಡಿಗೆ ಬಲಿಯಾದ ಸೈಫುದ್ದೀನ್ ಸೈಯದ್‌ ಅವರು ಹೈದರಾಬಾದ್‌ನಲ್ಲಿ ಮೊಬೈಲ್ ರಿಪೇರಿ ಕೆಲಸ ಮಾಡುತ್ತಿದ್ದರು. ಘಟನೆಯ ದಿನ ಯಾವುದೋ ಕೆಲಸದ ನಿಮಿತ್ತ ತನ್ನ ಮಾಲೀಕನೊಂದಿಗೆ ಮುಂಬೈಗೆ ತೆರಳುತ್ತಿದ್ದರು. ಅವರನ್ನು ಆರೋಪಿ ಚೌಧರಿ ಹತ್ಯೆಗೈದಿದ್ದಾನೆ.

ಸೈಫುದ್ದೀನ್ ಅವರ ಸಹೋದರ, ಹೈದರಾಬಾದ್ ನಿವಾಸಿ ಯೂನಸ್‌ ಸೈಯದ್ ಅವರು ಪ್ರಕರಣದ ತನಿಖೆಯಲ್ಲಿ ಸರ್ಕಾರದ ವಿಳಂಬ ಧೋರಣೆಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪೊಲೀಸರು ತಮಗೆ ಯಾವುದೇ ಮಾಹಿತಿ ನೀಡುತ್ತಿಲ್ಲ. ತನಿಖೆಯು ಆಮೆಗತಿಯಲ್ಲಿ ಸಾಗುತ್ತಿದೆ ಎಂದು ಆರೋಪಿಸಿದ್ದಾರೆ.

“ನನ್ನ ಸಹೋದರ ಸೈಫುದ್ದೀನ್ ನಮ್ಮ ಕುಟುಂಬದ ಏಕೈಕ ಆಧಾರವಾಗಿದ್ದರು. ಅವರ ಪತ್ನಿ, ಮೂವರು ಮಕ್ಕಳು ಸೇರಿದಂತೆ ಇಡೀ ಕುಟುಂಬವನ್ನು ಅವರು ಸಲಹುತ್ತಿದ್ದರು. ಮಕ್ಕಳು ಇನ್ನೂ ಚಿಕ್ಕವರು. ಅವರು ತಮ್ಮ ತಂದೆಯನ್ನೂ ಈಗಲೂ ‘ಮಿಸ್‌’ ಮಾಡಿಕೊಳ್ಳುತ್ತಿದ್ದಾರೆ. ಆರೋಪಿ ಆರ್‌ಪಿಎಫ್ ಕಾನ್‌ಸ್ಟೆಬಲ್ ನಮ್ಮ ಇಡೀ ಕುಟುಂಬವನ್ನು ಧ್ವಂಸಗೊಳಿಸಿದ್ದಾನೆ. ಆತನಿಗೆ ಗರಿಷ್ಠ ಶಿಕ್ಷೆಯಾಗಬೇಕು” ಎಂದು ಯೂನಸ್ ಆಗ್ರಹಿಸಿದ್ದಾರೆ.

ಇನ್ನು, ಮತ್ತೋರ್ವ ಮೃತ ವ್ಯಕ್ತಿ ಅಸ್ಗರ್ ಅಬ್ಬಾಸ್ ಅಲಿ ಶೇಖ್ (48) ಅವರು ನಾಗ್ಪುರದಲ್ಲಿ ಬಳೆ ವ್ಯಾಪಾರ ಮಾಡುತ್ತಿದ್ದರು. ಅವರು 2023 ಜುಲೈ 31ರಂದು ತನ್ನ ಸಹೋದರನನ್ನು ಭೇಟಿಯಾಗಲು ಮುಂಬೈಗೆ ತೆರಳುತ್ತಿದ್ದರು. ಅವರ ಕುಟುಂಬದ ಸದಸ್ಯ ಮೊಹಮ್ಮದ್ ಜಿಕರ್ರುಲ್ಲಾ ಸೈಯದ್, “ಆರೋಪಿ ಆರ್‌ಪಿಎಫ್ ಕಾನ್‌ಸ್ಟೆಬಲ್‌ಗೆ ಗಲ್ಲು ಶಿಕ್ಷೆಯಾಗಬೇಕು. ಆತ ನಾಲ್ಕು ಕುಟುಂಬಗಳನ್ನು ನಾಶಪಡಿಸಿದ್ದಾನೆ. ಪ್ರಯಾಣಿಕರನ್ನು ರಕ್ಷಿಸುವುದು ಆತನ ಕರ್ತವ್ಯವಾಗಿತ್ತು. ಆದರೆ, ಆತನೇ ಪ್ರಯಾಣಿಕರನ್ನು ಕೊಂದಿದ್ದಾನೆ. ಆತನಿಗೆ ಮರಣದಂಡನೆ ವಿಧಿಸಬೇಕು. ಅಂತಹ ಘೋರ ಅಪರಾಧಗಳ ಅಪರಾಧಿಗಳಿಗೆ ಕಠಿಣ ಶಿಕ್ಷೆಯನ್ನು ನೀಡದಿದ್ದರೆ, ನಾವು ಅಪರಾಧಿಗಳನ್ನು ಇನ್ನಷ್ಟು ಅಪರಾಧಗಳಿಗೆ ಪ್ರೋತ್ಸಾಹಿಸಿದಂತಾಗುತ್ತದೆ” ಎಂದು ಹೇಳಿದ್ದಾರೆ.

“ಆರೋಪಿ ವಿರುದ್ಧ ಇನ್ನೂ ಆರೋಪಗಳನ್ನು ನಿರೂಪಿಸಬೇಕಾಗಿದೆ. ಪ್ರಕರಣವು ಆಮೆಗತಿಯಲ್ಲಿ ಸಾಗುತ್ತಿದೆ” ಎಂದು ಪ್ರಕರಣದಲ್ಲಿ ಮೃತ ಅಬ್ದುಲ್ ಕಾದರ್ ಮೊಹಮ್ಮದ್ ಹುಸೇನ್ ಭಾನಪುರವಾಲಾ ಅವರ ಕುಟುಂಬವನ್ನು ಪ್ರತಿನಿಧಿಸುತ್ತಿರುವ ವಕೀಲ ವಿಷ್ಣು ಭಟ್ ಹೇಳಿದ್ದಾರೆ.

ಚೌಧರಿ ರೈಲಿನಲ್ಲಿ ಬುರ್ಖಾ ಧರಿಸಿದ್ದ ಪ್ರಯಾಣಿಕರಿಗೆ ಬಂದೂಕು ತೋರಿಸಿ ‘ಜೈ ಮಾತಾ ದಿ’ ಎಂದು ಹೇಳುವಂತೆ ಬೆದರಿಕೆ ಹಾಕುತ್ತಿದ್ದರು. ಅಲ್ಲದೆ, 2008ರ ಮುಂಬೈನಲ್ಲಿ ನಡೆದಿದ್ದ ದಾಳಿಯನ್ನು ಉಲ್ಲೇಖಿಸಿ, ತಾನು ಆ ಘಟನೆಯ ಸೇಡು ತೀರಿಸಿಕೊಳ್ಳುತ್ತಿದ್ದೇನೆಂದು ಮತ್ತೊಬ್ಬ ಪ್ರಯಾಣಿಕನಿಗೆ ಹೇಳಿದ್ದನು ಎಂದು ಪೊಲೀಸರು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಿದ್ದಾರೆ.

ನಾಲ್ಕು ಜನರನ್ನು ಕೊಂದ ನಂತರ, ಆತ ಸಂತ್ರಸ್ತರೊಬ್ಬರ ಮೃತದೇಹ ಬಳಿ ಹೋಗಿ ದ್ವೇಷ ಭಾಷಣ ಮಾಡಿದನು. ಚೌಧರಿಯವರ ಭಾಷಣದ ವೀಡಿಯೊವನ್ನು ಫೋರೆನ್ಸಿಕ್ ಪರೀಕ್ಷೆಗೆ ಒಳಪಡಿಸಲಾಗಿದೆ. ಬಳಿಕ, ಆತನ ವಿರುದ್ಧ ಎಫ್‌ಐಆರ್‌ನಲ್ಲಿ ಐಪಿಸಿ ಸೆಕ್ಷನ್ 153A (ಧರ್ಮ, ಜನಾಂಗ, ಜನ್ಮಸ್ಥಳ, ವಾಸಸ್ಥಳದ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷ ಉತ್ತೇಜಿಸುವುದು) ಅನ್ನು ಪೊಲೀಸರು ಸೇರಿಸಿದ್ದಾರೆ.

ಘಟನೆಯ ನಂತರ ಆರೋಪಿ ಚೌಧರಿಯನ್ನು ಸೇವೆಯಿಂದ ವಜಾಗೊಳಿಸಲಾಗಿದೆ. ಚೌಧರಿ ಪರ ವಕೀಲ ಅಮಿತ್ ಮಿಶ್ರಾ ಅವರು ಈ ಹಿಂದೆ, ಚೌಧರಿಯನ್ನು ಮುಂಬೈ ಅಥವಾ ಥಾಣೆ ಜೈಲಿಗೆ ಸ್ಥಳಾಂತರಿಸುವಂತೆ ಜೈಲು ಪ್ರಾಧಿಕಾರಿದ ಮುಂದೆ ಮನವಿ ಮಾಡಿದ್ದರು. ಆದರೆ, ಪ್ರಾಧಿಕಾರವು ಅವರ ಮನವಿಯನ್ನು ತರಿಸ್ಕರಿಸಿದ್ದು, ಅಕೋಲಾ ಜೈಲಿನಲ್ಲಿಯೇ ಇರಿಸಿದೆ.

ಉತ್ತರ ಪ್ರದೇಶ ಮೂಲದ ಚೌಧರಿ ಅವರ ತಾಯಿ ರಾಜೇಂದ್ರಿದೇವಿ ಅವರು ತನ್ನ ಮಗ ಪಾಪ ಮಾಡಿದ್ದಾನೆ. ಆತನ ಪಾಪಕ್ಕೆ ನಾವು ಬೆಲೆ ತೆರುತ್ತಿದ್ದೇವೆ ಎಂದು ಹೇಳಿದ್ದಾರೆ.

“ಅವನು ನಾಲ್ಕು ಜನರನ್ನು ಕೊಂದಿದ್ದಾನೆ. ನಾಲ್ಕು ಕುಟುಂಬಗಳನ್ನು ನಾಶಮಾಡಿದ್ದಾನೆ. ಅವನು ತನ್ನ ತಂದೆಯ ಹೆಸರು ಮತ್ತು ಖ್ಯಾತಿಯನ್ನು ನಾಶ ಮಾಡಿದ್ದಾನೆ. ಅವನ ಪಾಪದ ಕೆಲಸದಿಂದಾಗಿ ಅವನನ್ನು ಸೇವೆಯಿಂದ ವಜಾಗೊಳಿಸಲಾಗಿದೆ. ಈಗ ನಾವು ಬದುಕು ದೂಡಲು ಹೆಣಗಾಡುತ್ತಿದ್ದೇವೆ. ಅವನು ಆ ನಾಲ್ವರನ್ನು ಕೊಲ್ಲುವ ಬದಲು ನನ್ನನ್ನು ಸಾಯಿಸಬೇಕಿತ್ತು. ಅವನು ಅಂತಹ ದ್ವೇಷದ ಚಿಂತನೆಗಳನ್ನು ಹೇಗೆ ಬೆಳೆಸಿಕೊಂಡನೋ ಗೊತ್ತಿಲ್ಲ” ಎಂದು ರಾಜೇಂದ್ರಿದೇವಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

1 COMMENT

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನ್ಯಾಯದೇಗುಲಗಳಿಗೆ ಬಲು ಇಕ್ಕಟ್ಟಾದ ಬಾಗಿಲುಗಳ ಕಟ್ಟಿದ್ದೇವೆ- ಸಿಜೆಐ

‘ಹೈಕೋರ್ಟ್ ಜಡ್ಜ್ ಗಳ ಪೈಕಿ ಮೊಂಡರು, ಹಟಮಾರಿಗಳು, ಜಂಭದ ಕೋಳಿಗಳಿದ್ದಾರೆ...ಇನ್ನು ಕೆಲವರ...

ಉಪ ರಾಷ್ಟ್ರಪತಿ ಚುನಾವಣೆ: ಇಂಡಿಯಾ ಒಕ್ಕೂಟದ ಅಭ್ಯರ್ಥಿ ಸುದರ್ಶನ್ ರೆಡ್ಡಿ ನಾಮಪತ್ರ ಸಲ್ಲಿಕೆ

ಭಾರತದ ಉಪ ರಾಷ್ಟ್ರಪತಿ ಚುನಾವಣೆಗೆ ‘ಇಂಡಿಯಾ’ ಮೈತ್ರಿಕೂಟದ ಅಭ್ಯರ್ಥಿಯಾಗಿ ಸುಪ್ರೀಂ ಕೋರ್ಟ್‌ನ...

ಆನ್‌ಲೈನ್‌ ಜೂಜಾಟ ತಡೆಗೆ ಕಠಿಣ ಕಾನೂನು; ಸಂಸತ್ತಿನಲ್ಲಿ ಆನ್‌ಲೈನ್ ಗೇಮಿಂಗ್‌ ಪ್ರಚಾರ ಮತ್ತು ನಿಯಂತ್ರಣ ಮಸೂದೆ, 2025 ಮಂಡನೆ

ಭಾರತದ ಡಿಜಿಟಲ್ ಮನರಂಜನಾ ಕ್ಷೇತ್ರದಲ್ಲಿ ಭಾರೀ ಬದಲಾವಣೆಯನ್ನು ತರಲು ಸಿದ್ಧವಾಗಿರುವ ಆನ್‌ಲೈನ್...

ಕ್ರಿಮಿನಲ್ ಪ್ರಕರಣಗಳಲ್ಲಿ ಪ್ರಧಾನಿ, ಸಿಎಂ ಪದಚ್ಯುತಿಗೆ ಅನುವು ಮಾಡಿಕೊಡುವ ಮಸೂದೆ ಸಂಸತ್ತಿನಲ್ಲಿ ಮಂಡನೆ

ಗಂಭೀರ ಕ್ರಿಮಿನಲ್ ಪ್ರಕರಣಗಳಲ್ಲಿ ಬಂಧಿಸಲ್ಪಟ್ಟ ಅಥವಾ ಬಂಧನದಲ್ಲಿರುವ ಚುನಾಯಿತ ಪ್ರತಿನಿಧಿಗಳನ್ನು ಅಧಿಕಾರದಿಂದ...

Download Eedina App Android / iOS

X