ಎನ್‌ಸಿಪಿ ನಾಯಕ ಬಾಬಾ ಸಿದ್ದಿಕಿ ಹತ್ಯೆಯ ರುವಾರಿ ಬಂಧಿತ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್‌ನನ್ನು ಎನ್‌ಕೌಂಟರ್ ಮಾಡಿದರೆ, ಆ ಪೊಲೀಸ್ ಅಧಿಕಾರಿಗೆ 1,11,11,111 ರೂ. ಬಹುಮಾನ ನೀಡುವುದಾಗಿ ರಾಜಸ್ಥಾನದ ಪ್ರಾದೇಶಿಕ ಪಕ್ಷ ಕ್ಷತ್ರಿಯ ಕರ್ಣಿ ಸೇನೆ ಘೋಷಿಸಿದೆ.
ಕರ್ಣಿ ಸೇನೆಯ ರಾಷ್ಟ್ರೀಯ ಅಧ್ಯಕ್ಷ ರಾಜ್ ಶೇಖಾವತ್ ಅವರು ಖಾಸಗಿ ಸುದ್ದಿ ವಾಹಿನಿ ಜೊತೆಗೆ ಮಾತನಾಡಿದ್ದು, ಲಾರೆನ್ಸ್‌ನನ್ನು ಎನ್‌ಕೌಂಟರ್ ಮಾಡುವ ಅಧಿಕಾರಿಗೆ ಬಹುಮಾನ ನೀಡುವುದಾಗಿ ಘೋಷಿಸಿದ್ದಾರೆ. ತಮ್ಮ ನಾಯಕ ಸುಖದೇವ್ ಸಿಂಗ್ ಗೊಗಮೆಡಿ ಹತ್ಯೆಗೆ ಪ್ರತೀಕಾರವಾಗಿ ಬಹುಮಾನ ಘೋಷಿಸಿರುವುದಾಗಿ ತಿಳಿಸಿದ್ದಾರೆ.
ಬಹುಮಾನ ನೀಡುವ ಬಗ್ಗೆ ಮಾತನಾಡಿರುವ ವಿಡಿಯೋವನ್ನು ಶೇಖಾವತ್ ‘ಎಕ್ಸ್‘ನಲ್ಲಿ ಹಂಚಿಕೊಂಡಿದ್ದಾರೆ. “ನಮ್ಮ ನಾಯಕ ಗೊಗಮೆಡಿ ಹತ್ಯೆಗೆ ಲಾರೆನ್ಸ್ ಬಿಷ್ಣೋಯಿಯೇ ಕಾರಣ. ಆತನನ್ನು ಪೊಲೀಸರು ಎನ್‌ಕೌಂಟರ್ ಮಾಡಿದರೆ, ಆ ಪೊಲೀಸ್ ಅಧಿಕಾರಿಗೆ 1,11,11,111 ರೂ. ಬಹುಮಾನ ನೀಡುತ್ತೇವೆ” ಎಂದು ವಿಡಿಯೋದಲ್ಲಿ ಹೇಳಿದ್ದಾರೆ.
2023ರ ಡಿಸೆಂಬರ್‌ನಲ್ಲಿ ಗೊಗಮೆಡಿ ಅವರನ್ನು ಹತ್ಯೆ ಮಾಡಲಾಗಿತ್ತು. ಆ ಹತ್ಯೆಯನ್ನು ತಾನೇ ಮಾಡಿರುವುದಾಗಿ ಲಾರೆನ್ಸ್ ಗ್ಯಾಂಗ್‌ನಲ್ಲಿದ್ದ ರೋಹಿತ್ ಗೋಡಾರಾ ಹೇಳಿಕೊಂಡಿದ್ದಾನೆ. ಆತ ಭಾರತ ಬಿಟ್ಟು ಪರಾರಿಯಾಗಿದ್ದು, ಕೆನಡಾದಲ್ಲಿ ತಲೆಮರೆಸಿಕೊಂಡಿದ್ದಾನೆ ಎಂದು ಹೇಳಲಾಗಿದೆ.