ಹಣ ಕಳವು ಮಾಡಿದ್ದ ಪ್ರಕರಣದಲ್ಲಿ ಪೊಲೀಸರು ಆರೋಪಿಯ ಗ್ರಾಮದ ಮೇಲೆ ದಾಳಿ ಮಾಡಿದ್ದು, ಸಗಣಿ ರಾಶಿಯೊಳಗೆ 20 ಲಕ್ಷ ರೂ. ಹಣ ಪತ್ತೆಯಾಗಿದೆ. ಹಣವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಒಡಿಶಾದ ಬಾಲಸೋರ್ ಜಿಲ್ಲೆಯ ಬದಮಂದರುನಿ ಗ್ರಾಮದ ಮೇಲೆ ಹೈದರಾಬಾದ್ ಮತ್ತು ಒಡಿಶಾ ಪೊಲೀಸರು ಜಂಟಿ ದಾಳಿ ನಡೆಸಿದ್ದಾರೆ. ಈ ವೇಳೆ, ಗ್ರಾಮದಲ್ಲಿದ್ದ ಸಗಣಿ ರಾಶಿಯಲ್ಲಿ ಹಣ ಪತ್ತೆಯಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಬದಮಂದರುನಿ ಗ್ರಾಮದವನೇ ಆದ, ಹಣ ಕದಿದ್ದ ಆರೋಪಿ ಗೋಪಾಲ್ ಬೆಹೆರಾ ಎಂಬಾತ ಹೈದರಾಬಾದ್ ಮೂಲದ ಕೃಷಿಯಾಧಾರಿಕ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಕಂಪನಿಯ ಲಾಕರ್ನಿಂದ 20 ಲಕ್ಷಕ್ಕೂ ಹೆಚ್ಚು ಹಣವನ್ನು ಕದ್ದು, ತನ್ನ ಸಂಬಂಧಿ ಮೂಲಕ ಗ್ರಾಮಕ್ಕೆ ರವಾನಿಸಿದ್ದಾನೆ ಆರೋಪಿಸಲಾಗಿದೆ.
ಕಂಪನಿಯು ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಗೋಪಾಲ್ ಮತ್ತು ಆತನ ಸಂಬಂಧಿ ರಬೀಂದ್ರನ ನಿವಾಸದ ಮೇಲೆ ದಾಳಿ ನಡೆಸಿದ್ದಾರೆ. ಸಗಣಿಯ ರಾಶಿಯಲ್ಲಿ ಬಚ್ಚಿಟ್ಟಿದ್ದ ಹಣವನ್ನು ವಶಕ್ಕೆ ಪಡೆದಿದ್ದಾರೆ.