ಎರಡು ಸಾವಿರ ರೂಪಾಯಿ ನೋಟುಗಳ ಹಿಂಪಡೆದು ಎರಡು ವರ್ಷಗಳಾದರೂ 6,266 ಕೋಟಿ ರೂಪಾಯಿಗಳ ಹೆಚ್ಚಿನ ಮೌಲ್ಯದ 2000 ರೂಪಾಯಿ ನೋಟುಗಳು ಚಲಾವಣೆಯಲ್ಲಿವೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಹೇಳಿದೆ.
2023ರ ಮೇ 19ರಂದು ಆರ್‌ಬಿಐ 2000 ರೂಪಾಯಿ ಮುಖಬೆಲೆಯ ನೋಟುಗಳನ್ನು ಹಿಂತೆಗೆದುಕೊಂಡಿದೆ. ಆದರೆ 2000 ರೂಪಾಯಿ ನೋಟುಗಳು ಇನ್ನೂ ಕಾನೂನುಬದ್ಧವಾಗಿರುತ್ತದೆ ಎಂದು ಘೋಷಿಸಿದೆ. ಆದರೆ ಇಂದಿಗೂ ಸಾವಿರಾರು ಕೋಟ್ಯಾಂತರ ರೂಪಾಯಿ ಮೌಲ್ಯದ ಎರಡು ಸಾವಿರ ರೂಪಾಯಿ ನೋಟುಗಳು ಚಲಾವಣೆಯಲ್ಲಿದೆ.
ಇದನ್ನು ಓದಿದ್ದೀರಾ? ₹2 ಸಾವಿರ ನೋಟುಗಳನ್ನು ಹಿಂಪಡೆಯಲು ನಿರ್ಧರಿಸಿದ ಆರ್‌ಬಿಐ; ಸೆ.30 ಕೊನೆ ದಿನ!
ಈ ಬಗ್ಗೆ ಆರ್‌ಬಿಐ ಶುಕ್ರವಾರ ಹೇಳಿಕೆಯನ್ನು ನೀಡಿದೆ. “2023ರ ಮೇ 19ರಂದು 2000 ರೂಪಾಯಿ ನೋಟುಗಳನ್ನು ಹಿಂಪಡೆದುಕೊಂಡಾಗ 3.56 ಲಕ್ಷ ಕೋಟಿ ರೂ.ಗಳಷ್ಟು ನೋಟುಗಳು ಚಲಾವಣೆಯಲ್ಲಿತ್ತು. ಆದರೆ 2025ರ ಏಪ್ರಿಲ್ 30ರ ಮುಕ್ತಾಯದ ಸಂದರ್ಭದಲ್ಲಿ 6,266 ಕೋಟಿ ರೂ.ಗಳಿಗೆ ಇಳಿದಿದೆ” ಎಂದು ಆರ್‌ಬಿಐ ತಿಳಿಸಿದೆ.
2023ರ ಮೇ 19ರಂದು ಚಲಾವಣೆಯಲ್ಲಿರುವ ರೂ. 2000 ನೋಟುಗಳಲ್ಲಿ ಶೇ. 98.24ರಷ್ಟು ಹಿಂತಿರುಗಿಸಲಾಗಿದೆ. 2023ರ ಅಕ್ಟೋಬರ್ 7ರವರೆಗೆ ಎಲ್ಲಾ ಬ್ಯಾಂಕ್ ಶಾಖೆಗಳಲ್ಲಿ ಅಂತಹ ನೋಟುಗಳ ಠೇವಣಿ ಅಥವಾ ವಿನಿಮಯದ ಸೌಲಭ್ಯ ಲಭ್ಯವಿತ್ತು. ಆದರೂ 19 ಆರ್‌ಬಿಐ ಕಚೇರಿಗಳಲ್ಲಿ ಇನ್ನೂ ಕೂಡಾ ನೋಟುಗಳನ್ನು ಬದಲಾವಣೆ ಮಾಡಿಕೊಳ್ಳಬಹುದಾಗಿದೆ.
2023ರ ಅಕ್ಟೋಬರ್ 9ರಿಂದ ಆರ್‌ಬಿಐ ವಿತರಣಾ ಕಚೇರಿಗಳು ವ್ಯಕ್ತಿಗಳು ಮತ್ತು ಸಂಸ್ಥೆಗಳಿಂದ 2000 ರೂಪಾಯಿ ನೋಟುಗಳನ್ನು ತಮ್ಮ ಬ್ಯಾಂಕ್ ಖಾತೆಗಳಿಗೆ ಠೇವಣಿ ಇಡಲು ಸ್ವೀಕರಿಸುತ್ತಿವೆ. ಇದಲ್ಲದೆ ಜನರು ತಮ್ಮ ಅಂಚೆ ಕಚೇರಿ ಖಾತೆಗಳಿಗೆ 2000 ರೂಪಾಯಿ ನೋಟುಗಳನ್ನು ಜಮೆ ಮಾಡಬಹುದಾಗಿದೆ.
