ಭಾರತ ಕ್ರಿಕೆಟ್ ತಂಡದ ಮಾಜಿ ಬಾಟ್ಸ್‌ಮನ್ ವೀರೇಂದ್ರ ಸೆಹ್ವಾಗ್ ಅವರ ಸಹೋದರ ವಿನೋದ್ ಸೆಹ್ವಾಗ್ ಅವರನ್ನು ಏಳು ಕೋಟಿ ರೂಪಾಯಿ ಚೆಕ್ ಬೌನ್ಸ್ ಪ್ರಕರಣದಲ್ಲಿ ಚಂಡೀಗಢ ಪೊಲೀಸರು ಬಂಧಿಸಿದ್ದಾರೆ. ಸದ್ಯ ಸ್ಥಳೀಯ ನ್ಯಾಯಾಲಯವು ವಿನೋದ್ ಅವರಿಗೆ ನ್ಯಾಯಾಂಗ ಬಂಧನಕ್ಕೆ ವಿಧಿಸಿದೆ.
ಜಲ್ತ ಫುಡ್ ಆಂಡ್ ಬಿವರೇಜಸ್ ಕಂಪನಿಗೆ ಸಂಬಂಧಿಸಿದ ಪ್ರಕರಣ ಇದಾಗಿದೆ. ಈ ಸಂಸ್ಥೆಯ ನಿರ್ದೇಶಕರುಗಳಾದ ವಿನೋದ್ ಸೆಹ್ವಾಗ್, ವಿಷ್ಣು ಮಿತ್ತಲ್ ಮತ್ತು ಸುಧೀರ್ ಮಲ್ಹೋತ್ರಾ ವಿರುದ್ಧ ಚೆಕ್ ಬೌನ್ಸ್ ಪ್ರಕರಣ ದಾಖಲಾಗಿದೆ.
ಇದನ್ನು ಓದಿದ್ದೀರಾ? ಕ್ರಿಕೆಟ್: ವೀರೇಂದ್ರ ಸೆಹ್ವಾಗ್ ನಂತರದ ದಾಖಲೆಯ ತ್ರಿಶತಕ ಬಾರಿಸಿದ ಇಂಗ್ಲೆಂಡ್‌ನ ಹ್ಯಾರಿ ಬ್ರೂಕ್
ಹಿಮಾಚಲ ಪ್ರದೇಶದ ಶ್ರೀ ನೈನಾ ಪ್ಲಾಸ್ಟಿಕ್ ಫ್ಯಾಕ್ಟರಿಯ ಮಾಲೀಕ ಕೃಷ್ಣ ಮೋಹನ್ ಚೆಕ್ ಬೌನ್ಸ್ ಪ್ರಕರಣವನ್ನು ದಾಖಲಿಸಿದ್ದಾರೆ. “ದೆಹಲಿಯ ಜಲ್ತ ಫುಡ್ ಆಂಡ್ ಬಿವರೇಜಸ್ ಕಂಪನಿಯು ನಮ್ಮ ಫ್ಯಾಕ್ಟರಿಯಿಂದ ಕೆಲವು ಉತ್ಪನ್ನಗಳನ್ನು ಖರೀದಿಸಿತ್ತು. 7 ಕೋಟಿ ರೂಪಾಯಿಯ ಚೆಕ್ ನೀಡಿತ್ತು. ನಾನು ಬ್ಯಾಂಕ್‌ನಲ್ಲಿ ಈ ಚೆಕ್ ಜಮೆ ಮಾಡಿದಾಗ ಚೆಕ್ ಬೌನ್ಸ್ ಆಗಿದೆ. ನನಗೆ ಸಂಸ್ಥೆ ಪಾವತಿಸಬೇಕಾದ ಹಣ ಪಾವತಿ ಮಾಡದ ಕಾರಣ ನಾನು ದೂರು ನೀಡಿದೆ” ಎಂದು ಕೃಷ್ಣ ಮೋಹನ್ ದೂರಿದ್ದಾರೆ.
ಇನ್ನು 2022ರಲ್ಲಿ ವಿನೋದ್ ಸೆಹ್ವಾಗ್, ವಿಷ್ಣು ಮಿತ್ತಲ್ ಮತ್ತು ಸುಧೀರ್ ಮಲ್ಹೋತ್ರಾ ಅವರನ್ನು ಕೋರ್ಟ್ ಆರ್ಥಿಕ ಅಪರಾಧ ಎಸಗಿ ದೇಶದಿಂದ ಪರಾರಿಯಾದವರು (fugitives) ಎಂದು ಘೋಷಿಸಿದೆ. ಮೂವರೂ ಕೂಡಾ ಯಾವುದೇ ವಿಚಾರಣೆಗೆ ಹಾಜರಾಗದೆ ಇದ್ದಾಗ ದೂರು ದಾಖಲಿಸುವಂತೆ 2023ರ ಡಿಸೆಂಬರ್‌ನಲ್ಲಿ ಪೊಲೀಸರಿಗೆ ಕೋರ್ಟ್ ಆದೇಶಿಸಿದೆ.
ಸದ್ಯ ವಿನೋದ್ ಸೆಹ್ವಾಗ್ ಬಂಧನ ಮಾಡಲಾಗಿದೆ. ವಿನೋದ್ ಜಾಮೀನು ಅರ್ಜಿ ಸಲ್ಲಿಸಿದ್ದು ಅದರ ವಿಚಾರಣೆ ಮಾರ್ಚ್ 10ರಂದು ನಡೆಯಲಿದೆ. ಈಗಾಗಲೇ ವಿನೋದ್ ವಿರುದ್ಧ 174 ಚೆಕ್ ಬೌನ್ಸ್ ಪ್ರಕರಣಗಳು ದಾಖಲಾಗಿವೆ ಎನ್ನಲಾಗಿದೆ. ಈ ಪೈಕಿ 138 ಪ್ರಕರಣದಲ್ಲಿ ವಿನೋದ್ ಜಾಮೀನು ಅರ್ಜಿಯನ್ನು ಸಲ್ಲಿಸಿದ್ದಾರೆ.
