ಭಾರತದಲ್ಲಿ RSS ಸಿದ್ಧಾಂತವನ್ನು ಸಂಪೂರ್ಣವಾಗಿ ಕಳಚಿ ಹಾಕುವವರೆಗೆ ದೇಶದಲ್ಲಿ ನೈಜ ಶಾಂತಿ ಮತ್ತು ಸಾಮಾಜಿಕ ಸಾಮರಸ್ಯ ನೆಲೆಸಲು ಸಾಧ್ಯವೇ ಇಲ್ಲ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಬಿಹಾರದ ಪಾಟ್ನಾದಲ್ಲಿ ಆಯೋಜಿಸಲಾಗಿದ್ದ ಬೃಹತ್ ಬಹಿರಂಗ ಸಮಾವೇಶದಲ್ಲಿ ಭಾಗವಹಿಸಿದ್ದ ಅವರು, ಆರ್‌ಎಸ್‌ಎಸ್ ಮತ್ತು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. “RSS ತನ್ನ ಸ್ಥಾಪನೆಯ ಆರಂಭಿಕ ದಿನಗಳಿಂದಲೂ ಧಾರ್ಮಿಕ ಧ್ರುವೀಕರಣ ಮತ್ತು ಅಶಾಂತಿಯನ್ನು ಸೃಷ್ಟಿಸುವ ಕಾರ್ಯಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ. ಇಂದು ದೇಶದಲ್ಲಿ ಉಂಟಾಗುತ್ತಿರುವ ಸಾಮುದಾಯಿಕ ಉದ್ವಿಗ್ನತೆಗಳಿಗೆ ಈ ಮಾನಸಿಕತೆಯೇ ನೇರ ಕಾರಣ” ಎಂದಿದ್ದಾರೆ.
“ಸಂವಿಧಾನಿಕ ಮೌಲ್ಯಗಳು ಮತ್ತು ಸಾಮಾಜಿಕ ಸಮಾನತೆಗೆ ವಿರುದ್ಧವಾಗಿ ನಡೆದುಕೊಳ್ಳುವ ಪ್ರವೃತ್ತಿ ಬಿಜೆಪಿ ಮತ್ತು ಆರ್‌ಎಸ್‌ಎಸ್‌ನಲ್ಲಿ ಆಳವಾಗಿ ಬೇರೂರಿದೆ” ಎಂದಿದ್ದಾರೆ.
ಸ್ವಾತಂತ್ರ್ಯ ಸಿಕ್ಕು ಇಷ್ಟೊಂದು ದಶಕಗಳಾಗಿದ್ದರೂ ಸಮಾಜದಲ್ಲಿ ಅಸ್ಪೃಶ್ಯತೆ ಮತ್ತು ತಾರತಮ್ಯದ ಆಚರಣೆಗಳು ಜೀವಂತವಾಗಿರುವುದಕ್ಕೆ ಕಳವಳ ವ್ಯಕ್ತಪಡಿಸಿದ ಅವರು, ಉತ್ತರಾಖಂಡದ ಹಲ್ದ್ವಾನಿಯಲ್ಲಿ ಕಾಂಗ್ರೆಸ್ ಸಮಾವೇಶ ನಡೆದ ನಂತರದ ‘ಶುದ್ಧೀಕರಣ’ ಘಟನೆಯನ್ನು ಪ್ರಸ್ತಾಪಿಸಿದರು. “ಇಂತಹ ಮನಸ್ಥಿತಿ ಇರುವಾಗ ದೇಶದಲ್ಲಿ ಐಕ್ಯತೆ ಹೇಗೆ ಸಾಧ್ಯ” ಎಂದು ಪ್ರಶ್ನಿಸಿದರು.
ಇದೇ ವೇಳೆ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಆಡಳಿತ ವೈಖರಿ ಮತ್ತು ಚುನಾವಣಾ ಭರವಸೆಗಳನ್ನು ನೇರವಾಗಿ ತರಾಟೆಗೆ ಟೀಕಿಸಿದ ಖರ್ಗೆ, “ಪ್ರಧಾನಿಯವರು ಸದಾ ಸುಳ್ಳು ಭರವಸೆ ನೀಡುವ ಅಭ್ಯಾಸ ಮಾಡಿಕೊಂಡಿದ್ದಾರೆ. ಅಧಿಕಾರಕ್ಕೆ ಬಂದ ಮೊದಲ 100 ದಿನಗಳಲ್ಲಿ ವಿದೇಶದಲ್ಲಿದ್ದ ಕಪ್ಪುಹಣವನ್ನು ಮರಳಿ ತರುವುದಾಗಿ ನೀಡಿದ್ದ ವಾಗ್ದಾನ ಏನಾಯಿತು? ಆ ಹಣ ಎಲ್ಲಿಗೆ ಹೋಯಿತು” ಎಂದು ಸಾರ್ವಜನಿಕವಾಗಿ ಪ್ರಶ್ನಿಸಿದರು.
ಮತ್ತೊಂದೆಡೆ, ಬಿಹಾರ ಮಾಜಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ರಾಜಕೀಯ ಸಿದ್ಧಾಂತದ ಬದಲಾವಣೆಯನ್ನೂ ಖರ್ಗೆ ಕಟುವಾಗಿ ವಿಮರ್ಶಿಸಿದರು. “ಸಮಾಜವಾದಿ ಸಿದ್ಧಾಂತದ ಹಿನ್ನೆಲೆಯಿಂದ ಬಂದ ನಿತೀಶ್ ಕುಮಾರ್ ಅವರು ತಮ್ಮ ತತ್ವಾದರ್ಶಗಳನ್ನು ಬಲಿಕೊಟ್ಟು, ಬಿಜೆಪಿ ಮತ್ತು ಆರೆಸ್ಸೆಸ್ ಜೊತೆ ಕೈಜೋಡಿಸಿ ಮೈತ್ರಿ ಮಾಡಿಕೊಂಡಿರುವುದು ಅತ್ಯಂತ ಬೇಸರ ತಂದಿದೆ” ಎಂದರು.




