ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು ನಾಮಪತ್ರದೊಂದಿಗೆ ಸಲ್ಲಿಸುವ ಅಫಿಡವಿಟ್‌ನಲ್ಲಿ ಸುಳ್ಳು ಮಾಹಿತಿ ನೀಡಿದ್ದರೆ, ಅವರ ವಿರುದ್ಧ ಖಾಸಗಿ ವ್ಯಕ್ತಿಗಳೂ ಕ್ರಿಮಿನಲ್ ದೂರು ದಾಖಲಿಸಬಹುದು. ಇಂತಹ ದೂರು ದಾಖಲಿಸಲು ಚುನಾವಣಾ ಆಯೋಗದ ಅನುಮತಿ ಅಗತ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.
ನ್ಯಾಯಮೂರ್ತಿಗಳಾದ ದೀಪಂಕರ್ ದತ್ತಾ ಮತ್ತು ಶೀಲ್ ನಾಗು ಅವರನ್ನೊಳಗೊಂಡ ಪೀಠ ಈ ತೀರ್ಪು ನೀಡಿದ್ದು, ಜನಪ್ರತಿನಿಧಿಗಳ ಕಾಯ್ದೆಯ ಸೆಕ್ಷನ್ 125A ಅಡಿಯಲ್ಲಿ ಖಾಸಗಿ ವ್ಯಕ್ತಿ ಸಲ್ಲಿಸುವ ದೂರನ್ನು ನ್ಯಾಯಾಲಯ ಪರಿಗಣಿಸಬಹುದು ಎಂದು ಸ್ಪಷ್ಟಪಡಿಸಿದೆ.
ಈ ಹಿಂದೆ, ಮತದಾರರಿಗೆ ಅಭ್ಯರ್ಥಿಗಳ ವಿರುದ್ಧ ಚುನಾವಣಾ ಅರ್ಜಿ ಸಲ್ಲಿಸುವ ಹಕ್ಕು ಮಾತ್ರವಿದ್ದು, ಕ್ರಿಮಿನಲ್ ದೂರು ದಾಖಲಿಸುವುದು ಚುನಾವಣಾ ಆಯೋಗದ ವ್ಯಾಪ್ತಿಗೆ ಬರುತ್ತದೆ ಎಂದು ಕರ್ನಾಟಕ ಹೈಕೋರ್ಟ್ ಅಭಿಪ್ರಾಯಪಟ್ಟಿತ್ತು. ಈ ಆದೇಶವನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ.
ಜನಪ್ರತಿನಿಧಿಗಳ ಕಾಯ್ದೆಯ ಸೆಕ್ಷನ್ 125A ಅಡಿಯಲ್ಲಿ ಅಭ್ಯರ್ಥಿಗಳು ಉದ್ದೇಶಪೂರ್ವಕವಾಗಿ ಸುಳ್ಳು ಮಾಹಿತಿ ನೀಡುವುದು ಅಥವಾ ತಪ್ಪು ಅಫಿಡವಿಟ್ ಸಲ್ಲಿಸುವುದು ಅಪರಾಧವಾಗಿದೆ. ಈ ಅಪರಾಧಕ್ಕೆ ಆರು ತಿಂಗಳವರೆಗೆ ಜೈಲು ಶಿಕ್ಷೆ ವಿಧಿಸಲು ಅವಕಾಶವಿದೆ.
ಕ್ರಿಮಿನಲ್ ಪ್ರಕ್ರಿಯಾ ಸಂಹಿತೆಯ ಸೆಕ್ಷನ್ 195(1)ರ ಅಡಿಯಲ್ಲಿ ಕೆಲವು ಅಪರಾಧಗಳನ್ನು ನ್ಯಾಯಾಲಯ ಪರಿಗಣಿಸಲು ನಿರ್ಬಂಧಗಳಿವೆ. ಆದರೆ, ಜನಪ್ರತಿನಿಧಿಗಳ ಕಾಯ್ದೆಯ ಸೆಕ್ಷನ್ 125A ಈ ನಿರ್ಬಂಧದ ವ್ಯಾಪ್ತಿಗೆ ಬರುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಜನಪ್ರತಿನಿಧಿಗಳ ಕಾಯ್ದೆಗೆ 2002ರಲ್ಲಿ ಸೆಕ್ಷನ್ 125A ಸೇರ್ಪಡೆ ಮಾಡಲಾಗಿತ್ತು. ಬಳಿಕ 2006ರಲ್ಲಿ ಕ್ರಿಮಿನಲ್ ಪ್ರಕ್ರಿಯಾ ಸಂಹಿತೆಗೆ ತಿದ್ದುಪಡಿ ತಂದಾಗ, ಸೆಕ್ಷನ್ 125A ಅನ್ನು ನಿರ್ಬಂಧಿತ ಅಪರಾಧಗಳ ಪಟ್ಟಿಗೆ ಸೇರಿಸದಿರುವುದು ಉದ್ದೇಶಪೂರ್ವಕವಾಗಿದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ. ಹೀಗಾಗಿ, ಅಭ್ಯರ್ಥಿಯ ವಿರುದ್ಧ ಖಾಸಗಿ ವ್ಯಕ್ತಿ ಸಲ್ಲಿಸಿದ ದೂರಿನ ಆಧಾರದಲ್ಲಿಯೂ ನ್ಯಾಯಾಲಯ ಪ್ರಕರಣವನ್ನು ಪರಿಗಣಿಸಬಹುದು.
ಇಂತಹ ದೂರುಗಳನ್ನು ಪರಿಶೀಲಿಸಿ ತನಿಖಾ ಸಂಸ್ಥೆಗಳಿಗೆ ಶಿಫಾರಸು ಮಾಡುವ ಅಧಿಕಾರ ಚುನಾವಣಾ ಆಯೋಗಕ್ಕಿದೆ ಎಂಬ ಆಯೋಗದ ಪತ್ರಿಕಾ ಪ್ರಕಟಣೆಯನ್ನೂ ಸುಪ್ರೀಂ ಕೋರ್ಟ್ ಅಂತಿಮ ಮಾನದಂಡವಾಗಿ ಪರಿಗಣಿಸಿಲ್ಲ.
ಚುನಾವಣಾ ಆಯೋಗ ತನ್ನ ವ್ಯಾಪ್ತಿಯಲ್ಲಿ ಸ್ವತಂತ್ರವಾಗಿದ್ದರೂ, ಕಾನೂನುಗಳ ವ್ಯಾಖ್ಯಾನ ಮಾಡುವುದು ಮುಖ್ಯವಾಗಿ ನ್ಯಾಯಾಲಯಗಳ ಕಾರ್ಯವಾಗಿದೆ. ಆಯೋಗ ಹೊರಡಿಸುವ ಮಾರ್ಗಸೂಚಿಗಳು ಅಥವಾ ಪತ್ರಿಕಾ ಪ್ರಕಟಣೆಗಳು ನ್ಯಾಯಾಲಯವನ್ನು ಬದ್ಧಗೊಳಿಸುವುದಿಲ್ಲ ಎಂದು ಪೀಠ ಸ್ಪಷ್ಟಪಡಿಸಿದೆ.
ಖಾಸಗಿ ವ್ಯಕ್ತಿಗಳಿಗೆ ದೂರು ದಾಖಲಿಸಲು ಅವಕಾಶ ನೀಡಿದರೆ, ರಾಜಕೀಯ ವಿರೋಧಿಗಳು ಚುನಾಯಿತ ಅಭ್ಯರ್ಥಿಗಳನ್ನು ಗುರಿಯಾಗಿಸಿಕೊಂಡು ಕಿರುಕುಳ ನೀಡಬಹುದು ಅಥವಾ ಆಧಾರರಹಿತ ಪ್ರಕರಣಗಳನ್ನು ದಾಖಲಿಸಬಹುದು ಎಂಬ ಆತಂಕಕ್ಕೂ ಸುಪ್ರೀಂ ಕೋರ್ಟ್ ಪ್ರತಿಕ್ರಿಯಿಸಿದೆ.
ಇಂತಹ ದೂರುಗಳು ದುರುದ್ದೇಶಪೂರಿತವಾಗಿದ್ದರೆ ಅಥವಾ ಕಿರುಕುಳ ನೀಡುವ ಉದ್ದೇಶ ಹೊಂದಿದ್ದರೆ, ಪ್ರಕರಣದ ವಾಸ್ತವಾಂಶ ಮತ್ತು ಸನ್ನಿವೇಶಗಳಿಗೆ ಅನುಗುಣವಾಗಿ ಸೂಕ್ತ ಆದೇಶಗಳನ್ನು ನೀಡಲು ಮ್ಯಾಜಿಸ್ಟ್ರೇಟ್‌ಗಳಿಗೆ ಕಾನೂನಿನಡಿ ಅಧಿಕಾರವಿದೆ ಎಂದು ನ್ಯಾಯಪೀಠ ತಿಳಿಸಿದೆ.
ಇದನ್ನೂ ಓದಿ: ʼವೋಟ್ ಚೋರಿʼ ಸಂಗ್ರಾಮ; ಸುಪ್ರೀಂ ಕೋರ್ಟ್ ಕಡೆಗೆ ಕಾಂಗ್ರೆಸ್ ಮೆರವಣಿಗೆ
ಬೀದರ್ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಅವರು 2023ರ ಚುನಾವಣಾ ನಾಮಪತ್ರದಲ್ಲಿ ತಮ್ಮ ವಾಸಸ್ಥಳದ ವಿಳಾಸದ ಬಗ್ಗೆ ಸುಳ್ಳು ಮಾಹಿತಿ ನೀಡಿದ್ದಾರೆ ಎಂದು ಆರೋಪಿಸಿ ರಾಜಕುಮಾರ್ ಮಾಡ್ಕಿ ಎಂಬ ಖಾಸಗಿ ವ್ಯಕ್ತಿ ನ್ಯಾಯಾಲಯದಲ್ಲಿ ದೂರು ನೀಡಿದ್ದರು. ಕರ್ನಾಟಕ ಹೈಕೋರ್ಟ್ ಈ ದೂರನ್ನು ರದ್ದುಗೊಳಿಸಿ, “ಖಾಸಗಿ ವ್ಯಕ್ತಿ ದೂರು ನೀಡಲು ಅವಕಾಶವಿಲ್ಲ, ಚುನಾವಣಾ ಆಯೋಗವೇ ಕ್ರಮ ಕೈಗೊಳ್ಳಬೇಕು” ಎಂದು ಹೇಳಿತ್ತು. ಈ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾದ ಮೇಲ್ಮನವಿಯಲ್ಲಿ ಸುಪ್ರೀಂ ಕೋರ್ಟ್ ಈ ಐತಿಹಾಸಿಕ ತೀರ್ಪು ನೀಡಿದೆ.
2002ರ Association for Democratic Reforms (ADR) ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನ ಆಧಾರದಲ್ಲೇ ಅಭ್ಯರ್ಥಿಗಳು ತಮ್ಮ ಆಸ್ತಿ, ಶೈಕ್ಷಣಿಕ ಅರ್ಹತೆ ಹಾಗೂ ಅಪರಾಧ ಹಿನ್ನೆಲೆಯ ಅಫಿಡವಿಟ್ ಸಲ್ಲಿಸುವುದನ್ನು ಕಡ್ಡಾಯಗೊಳಿಸಲಾಯಿತು (ಸೆಕ್ಷನ್ 33A ಮತ್ತು 125A). ಈ ಹೊಸ ತೀರ್ಪು ಮತದಾರರ ಆ ‘ತಿಳಿಯುವ ಹಕ್ಕಿಗೆ’ ಮತ್ತಷ್ಟು ಬಲ ನೀಡಿದೆ. ಸಾಮಾನ್ಯವಾಗಿ ಸರ್ಕಾರಿ ಅಧಿಕಾರಿಗೆ ನೀಡುವ ಸುಳ್ಳು ಪ್ರಮಾಣಪತ್ರಗಳ ಬಗ್ಗೆ (IPC/CrPC ಅಡಿ) ಸಾರ್ವಜನಿಕ ಸೇವಕ (Public Servant) ಮಾತ್ರ ದೂರು ನೀಡಬೇಕೆಂಬ ನಿಯಮವಿತ್ತು. ಆದರೆ, ಜನಪ್ರತಿನಿಧಿಗಳ ಕಾಯ್ದೆಯ ಸೆಕ್ಷನ್ 125A ಸ್ವತಂತ್ರ ನಿಯಮವಾಗಿದ್ದು, ಅದಕ್ಕೆ ಈ ನಿರ್ಬಂಧ ಅನ್ವಯಿಸುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ





