ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಜೆಡಿ-ಯು (ಜನತಾದಳ-ಯುನೈಟೆಡ್) ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ, ಅವರ ಮುಂದಿನ ರಾಜಕೀಯ ನಡೆಯ ಬಗ್ಗೆ ಹಲವು ವದಂತಿಗಳು ಹರಿದಾಡುತ್ತಿವೆ. 2024ರ ಲೋಕಸಭೆ ಚುನಾವಣೆಗೂ ಮುನ್ನ ಅವರು ಬಿಜೆಪಿ ನೇತೃತ್ವದ ಎನ್ಡಿಎ ಕೂಟಕ್ಕೆ ಮರಳಲಿದ್ದಾರೆ. ಕಾಂಗ್ರೆಸ್, ಎಡ ಪಕ್ಷಗಳ ಜೊತಿನ ‘ಇಂಡಿಯಾ’ ಮೈತ್ರಿಕೂಟವನ್ನು ತೊರೆಯಲಿದ್ದಾರೆ ಎಂದು ಹೇಳಲಾಗುತ್ತಿದೆ.
ಡಿಸೆಂಬರ್ 19ರಂದು ನಡೆದ ಇಂಡಿಯಾ ಮೈತ್ರಿಕೂಟದ ಸಭೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಪ್ರಧಾನಿ ಅಭ್ಯರ್ಥಿಯಾಗಿ ಘೋಷಿಸಲಾಗಿದೆ. ಇದಕ್ಕೆ ನಿತೀಶ್ ಕುಮಾರ್ ಅಸಮಾಧಾನಗೊಂಡಿದ್ದಾರೆ. ಅವರು ಇಂಡಿಯಾ ಮೈತ್ರಿ ತೊರೆದು, ಎನ್ಡಿಎಗೆ ಮರಳುತ್ತಾರೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ.
ಆದರೆ, ಅವರು ಎನ್ಡಿಎಗೆ ಮರಳುತ್ತಾರೆ ಎಂಬ ವರದಿಗಳನ್ನು ಕೇಂದ್ರ ಸಚಿವರು ಸೇರಿದಂತೆ ಬಿಹಾರದ ಬಿಜೆಪಿ ನಾಯಕರು ತಳ್ಳಿಹಾಕಿದ್ದಾರೆ. ನತೀಶ್ ಅವರಿಗೆ ಬಿಜೆಪಿ ಬಾಗಿಲು ಮುಚ್ಚಿದೆ ಎಂದು ಹೇಳಿದ್ದಾರೆ.
ನವದೆಹಲಿಯಲ್ಲಿ ಶುಕ್ರವಾರ ನಡೆದ ಜೆಡಿಯು ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಲಲ್ಲನ್ ಸಿಂಗ್ ರಾಜೀನಾಮೆ ನೀಡಿದ ಬಳಿಕ ನಿತೀಶ್ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ಈ ಬೆನ್ನಲ್ಲೇ, ನಿತೀಶ್ ಅವರು ಎನ್ಡಿಎಗೆ ಮರಳುತ್ತಾರೆ ಎಂಬ ವರದಿಗಳು-ವದಂತಿಗಳು ಹಬ್ಬಿವೆ. ಅನ್ನು ತಿರಸ್ಕರಿಸಿರುವ ಹಿರಿಯ ಜೆಡಿಯು ನಾಯಕ ಕೆಸಿ ತ್ಯಾಗಿ, ಇದು ಬಿಜೆಪಿ ನಾಯಕರ ಹುಸಿ ಪ್ರಚಾರ ಎಂದು ಬಣ್ಣಿಸಿದ್ದಾರೆ.
ಮುಂದುವರೆದು ಮಾತನಾಡಿದ ತ್ಯಾಗಿ, “ಬಿಜೆಪಿ ಜೊತೆಗೆ ಭಿನ್ನಾಭಿಪ್ರಾಯಗಳಿವೆ. ಆದರೆ, ಬಿಜೆಪಿ ಶತ್ರುವಲ್ಲ. ಆಹ್ವಾನ ನೀಡಿದರೆ ಅಯೋಧ್ಯೆಯ ರಾಮಮಂದಿರ ಉದ್ಘಾಟನೆಯಲ್ಲಿ ಜೆಡಿಯು ಭಾಗವಹಿಸಲಿದೆ” ಎಂದೂ ಸ್ಪಷ್ಟಪಡಿಸಿದ್ದಾರೆ.
ತ್ಯಾಗಿ ಅವರ ಹೇಳಿಕೆಗಳು ನಿತೀಶ್ ಅವರ ರಾಜಕೀಯ ತಂತ್ರದ ಒಂದು ಭಾಗವಾಗಿ ಕಂಡುಬರುತ್ತದೆ. ಇದಲ್ಲದೆ, ನಿತೀಶ್ ಅವರು ಚುನಾವಣೆಯಲ್ಲಿ ಹೆಚ್ಚಿನ ಸ್ಥಾನಗಳಿಗಾಗಿ ಕಠಿಣ ಚೌಕಾಸಿ ಮಾಡುವುದಕ್ಕೆ ಹೆಸರುವಾಸಿಯೂ ಆಗಿದ್ದಾರೆ. ಹೀಗಾಗಿ, ಮುಂದಿನ ಲೋಕಸಭಾ ಚುನಾವಣೆಗೆ ಕೆಲವು ತಿಂಗಳುಗಳು ಬಾಕಿ ಇವೆ. ಇದೇ ಹೊತ್ತಿನಲ್ಲಿ ವಿರೋಧ ಪಕ್ಷದ ಮೈತ್ರಿಯಲ್ಲಿ ಸೀಟು ಹಂಚಿಕೆ ಪ್ರಕ್ರಿಯೆ ಆರಂಭವಾಗಿದೆ. ಬಿಹಾರದಲ್ಲಿ ತಮ್ಮ ಪಕ್ಷಕ್ಕೆ ಆರ್ಜೆಡಿ ಮತ್ತು ಕಾಂಗ್ರೆಸ್ನಿಂದ ಯೋಗ್ಯ ಪಾಲನ್ನು ಪಡೆಯಲು ನಿತೀಶ್ ತಮ್ಮ ಹಳೆಯ ಆಟವನ್ನು ಆಡುವ ಸಾಧ್ಯತೆಯಿದೆ ಎಂದು ರಾಜಕೀಯ ತಜ್ಞರು ಹೇಳುತ್ತಾರೆ.
ಅಲ್ಲದೆ, ನಿತೀಶ್ ಅವರ ಮನಸ್ಸನ್ನು ಅರ್ಥ ಮಾಡಿಕೊಳ್ಳುವುದು ಅಸಾಧ್ಯ. ಅವರ ರಾಜಕೀಯ ನಿರ್ಧಾರಗಳು ಅವರ ಆತ್ಮಸಾಕ್ಷಿಯ ಮೇಲೆ ಆಧಾರಿತವಾಗಿವೆ ಎಂದು ಬಿಹಾರದ ರಾಜಕೀಯ ವೀಕ್ಷಕರು ಹೇಳುತ್ತಾರೆ.
“ನಿತೀಶ್ ಅವರ ನಿಕಟವರ್ತಿಗಳಾದ ಜೆಡಿಯು ಹಿರಿಯ ನಾಯಕರಿಗೂ ಕೂಡ ನಿತೀಶ್ ಅವರ ಮುಂದಿನ ನಿರ್ಧಾರದ ಬಗ್ಗೆ ತಿಳಿದಿಲ್ಲ; ಅವರ ಮುಂದಿನ ನಡೆ ಏನೆಂದು ನಿತೀಶ್ ಅವರಿಗೆ ಮಾತ್ರ ತಿಳಿದಿದೆ; ನಾವು ಕಾಯೋಣ. ಎಲ್ಲ ವರದಿಗಳು ಊಹಾಪೋಹಗಳು, ಅದಕ್ಕಿಂತ ಬೇರೇನು ಇಲ್ಲ” ಎಂದು ಪಕ್ಷದೊಳಗಿನ ಕೆಲವರು ಹೇಳುತ್ತಾರೆ.
ಆದಾಗ್ಯೂ, ಕೆಲವು ಜೆಡಿಯು ನಾಯಕರು, “ಪಕ್ಷವು ವಿರೋಧ ಪಕ್ಷದ ‘ಇಂಡಿಯಾ’ ಮೈತ್ರಿಯಲ್ಲಿ ಪ್ರಬಲ ಭಾಗವಾಗಿದೆ. ಪಕ್ಷದ ಅಧ್ಯಕ್ಷರಾಗಿ ನಿತೀಶ್ ಅವರು ಮುಂದಿನ ಚುನಾವಣೆಯಲ್ಲಿ ಬಿಜೆಪಿಯನ್ನು ಎದುರಿಸಲು ಮೈತ್ರಿಯನ್ನು ಮತ್ತಷ್ಟು ಬಲಪಡಿಸಲು ಪ್ರಮುಖ ಪಾತ್ರ ವಹಿಸಲಿದ್ದಾರೆ” ಎಂದು ಹೇಳುತ್ತಿದ್ದಾರೆ.
“ದೆಹಲಿಯಲ್ಲಿ ನಡೆದ ಪಕ್ಷದ ಸಭೆಯಲ್ಲಿ ನಿತೀಶ್ ಅವರು ಮೈತ್ರಿಕೋಟದಲ್ಲಿ ಸೀಟು ಹಂಚಿಕೆ ಬಗ್ಗೆ ಮಾತುಕತೆ ನಡೆಸಲಿದ್ದಾರೆ. ಬಿಜೆಪಿಯನ್ನು ಸೋಲಿಸಲು 2024ರ ಜನವರಿಯಿಂದ ದೇಶಾದ್ಯಂತ ಪ್ರಚಾರ ಪ್ರಾರಂಭಿಸುತ್ತಾರೆ” ಎಂದು ಪಕ್ಷದ ನಾಯಕರೊಬ್ಬರು ತಿಳಿಸಿದ್ದಾರೆ.
ಇಲ್ಲಿ, ಜೆಡಿಯು ನಾಯಕರ ಪ್ರಕಾರ, ನಿತೀಶ್ ಅವರು ಪ್ರತಿಪಕ್ಷಗಳ ‘ಇಂಡಿಯಾ’ ಮೈತ್ರಿಯೊಂದಿಗಿದ್ದಾರೆ. ಅದನ್ನು ಒಗ್ಗೂಡಿಸಲು ಮತ್ತು ಬಲಪಡಿಸಲು ಕೆಲಸ ಮಾಡುತ್ತಾರೆ ಎಂಬುದು ಸ್ಪಷ್ಟವಾಗಿದೆ.
ಈ ಸುದ್ದಿ ಓದಿದ್ದೀರಾ?: ರಾಮ ಮಂದಿರ ಉದ್ಘಾಟನೆಗೆ ಸೋನಿಯಾ ಗಾಂಧಿ, ಖರ್ಗೆ ಭಾಗಿಯಾಗುವ ಬಗ್ಗೆ ಸೂಕ್ತ ಸಮಯದಲ್ಲಿ ನಿರ್ಧರಿಸುತ್ತೇವೆ: ಕಾಂಗ್ರೆಸ್
ಇದೆಲ್ಲದರ ನಡುವೆ, ನಿತೀಶ್ ಅವರು ತಮ್ಮ ಸರ್ಕಾರದ ಮಿತ್ರ ಪಕ್ಷ ರಾಷ್ಟ್ರೀಯ ಜನತಾ ದಳ (ಆರ್ಜೆಡಿ) ಮುಖ್ಯಸ್ಥ ಲಾಲು ಪ್ರಸಾದ್ ಯಾವವ್ ಅವರೊಂದಿಗೆ ಉತ್ತಮ ಸ್ನೇಹ ಬೆಳೆಸುತ್ತಿದ್ದಾರೆ. ಇದನ್ನು ಒಪ್ಪದ ಕಾರಣ ಲಲ್ಲನ್ ಸಿಂಗ್ ಅವರು ಜೆಡಿಯು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದೂ ವರದಿಯಾಗಿದೆ.
ಮಾಧ್ಯಮ ವರದಿಗಳ ಪ್ರಕಾರ, ನಿತೀಶ್ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ತೇಜಸ್ವಿ ಯಾದವ್ ಅವರನ್ನು ಹೊಸ ಮುಖ್ಯಮಂತ್ರಿ ಮಾಡಬೇಕು ಎಂಬ ಲಾಲು ಪ್ರಸಾದ್ ಯಾದವ್ ಅವರ ನಿಲುವಿಗೆ ಲಲ್ಲನ್ ಸಿಂಗ್ ಒಪ್ಪಿದ್ದಾರೆ ಎನ್ನಲಾಗಿದೆ. ತೇಜಸ್ವಿ ಯಾದವ್ ಪ್ರಸ್ತುತ ಉಪ ಮುಖ್ಯಮಂತ್ರಿಯಾಗಿದ್ದಾರೆ.
ಮತ್ತೊಂದು ವದಂತಿ ಏನೆಂದರೆ, ಲಲ್ಲನ್ ಸಿಂಗ್ ಅವರು ಜೆಡಿಯುಅನ್ನು ವಿಭಜಿಸಲು ಪಕ್ಷದ 12 ಶಾಸಕರ ಜೊತೆ ರಹಸ್ಯ ಸಭೆ ನಡೆಸಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಆದರೆ, ಸಿಂಗ್ ಅವರು ಮಾಧ್ಯಮಗಳ ವರದಿಗಳನ್ನು ನಿರಾಕರಿಸಿದ್ದಾರೆ. ತಮ್ಮ ವಿರುದ್ಧ ವದಂತಿ ಹರಡುತ್ತಿರುವ ಮಾಧ್ಯಮಗಳ ವಿರುದ್ಧ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
“ಇಂತಹ ಎಲ್ಲ ವರದಿಗಳು ಆಧಾರರಹಿತವಾಗಿವೆ ಮತ್ತು ಸತ್ಯಕ್ಕೆ ದೂರವಾಗಿವೆ. ಇದು ಪಟ್ಟಭದ್ರ ಹಿತಾಸಕ್ತಿಯಿಂದ ನನ್ನನ್ನು ನಿಂದಿಸುವ ಮತ್ತು ಮಾನಹಾನಿ ಮಾಡುವ ಪಿತೂರಿಯ ಭಾಗವಾಗಿದೆ” ಎಂದು ಸಿಂಗ್ ಹೇಳಿದ್ದಾರೆ.