ಭಾರತದ ಕ್ರಿಕೆಟ್ ಪ್ರೇಮಿಗಳ ಪಾಲಿಗೆ ದೇವರು ಎಂದೇ ಖ್ಯಾತಿ ಪಡೆದ ಸಚಿನ್ ತೆಂಡೂಲ್ಕರ್ ಅವರು ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ರಾಜಸ್ಥಾನದ 12 ವರ್ಷದ ಬಾಲಕಿ ಬೌಲಿಂಗ್ ಮಾಡುವ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ.
ಸಚಿನ್ ಅವರು ‘ಎಕ್ಸ್’ನಲ್ಲಿ ಹಂಚಿಕೊಂಡಿರುವ ಈ ವಿಡಿಯೊವನ್ನು ಇಲ್ಲಿಯವರೆಗೆ 26 ಲಕ್ಷ ಮಂದಿ ವೀಕ್ಷಿಸಿದ್ದು, 73 ಸಾವಿರ ಮಂದಿ ಲೈಕ್ ಮಾಡಿದ್ದಾರೆ, ಹಂಚಿಕೊಂಡಿದ್ದಾರೆ.
ಪುಟ್ಟ ಬಾಲಕಿ ಸುಶೀಲಾ ಮೀನಾ ಅವರು ರಾಜಸ್ಥಾನದ ಪ್ರತಾಪ್‌ಗಢ ಮೂಲದವರು ಎಂದು ತಿಳಿದುಬಂದಿದೆ. ಸುಶೀಲಾ ಬೌಲಿಂಗ್ ವಿಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ಗಮನ ಸೆಳೆದಿವೆ.
ಸುಶೀಲಾ ಮೀನಾ ಬೌಲಿಂಗ್ ಮಾಡುತ್ತಿರುವ ವಿಡಿಯೊ ‘ಎಕ್ಸ್’ನಲ್ಲಿ ಹಂಚಿಕೊಂಡಿರುವ ಸಚಿನ್ ತೆಂಡೂಲ್ಕರ್, ‘ನಯವಾದ, ಶ್ರಮವಿಲ್ಲದ ಮತ್ತು ವೀಕ್ಷಿಸಲು ಸುಂದರವಾಗಿದೆ. ಸುಶೀಲಾ ಅವರ ಬೌಲಿಂಗ್ ನಿಮ್ಮದೇ (ಝಹೀರ್) ಶೈಲಿಯಿಂದ ಕೂಡಿದೆ. ನೀವು ಈ ವಿಡಿಯೊವನ್ನು ನೋಡುತ್ತೀರಾ?’ ಎಂದು ಝಹೀರ್ ಖಾನ್ ಅವರನ್ನು ಟ್ಯಾಗ್ ಮಾಡಿದ್ದಾರೆ.
ಇತ್ತ ಈ ವಿಡಿಯೋವನ್ನು ಗಮನಿಸಿದ ಝಹೀರ್ ಖಾನ್ ಕೂಡ ಸುಶೀಲಾ ಮೀನಾ ಬೌಲಿಂಗ್ ಗಮನಿಸಿದ್ದು, ಆಕೆಯ ಬೌಲಿಂಗ್ ತನಗಿಂತ ತುಂಬಾ ಪರಿಣಾಮಕಾರಿಯಾಗಿದೆ. ಅವಳು ತನ್ನ ಚಿಕ್ಕ ವಯಸ್ಸಿನಲ್ಲಿ ತುಂಬಾ ಬಲಶಾಲಿಯಾಗಿ ಕಾಣುತ್ತಿದ್ದಾಳೆ ಎಂದು ಝಹೀರ್ ಖಾನ್ ಹೊಗಳಿದ್ದಾರೆ.
ಇದನ್ನು ಓದಿದ್ದೀರಾ?: ಸಿಡಿಲಬ್ಬರದ ಬ್ಯಾಟಿಂಗ್: ಹೊಸ ದಾಖಲೆ ಬರೆದ ಸ್ಮೃತಿ ಮಂಧಾನ
ಬಡ ಹುಡುಗಿಯ ಪರಿಶ್ರಮ, ಬೌಲಿಂಗ್ ಶೈಲಿ, ಆ ಸ್ಲೋ ಮೋಷನ್ ಬೌಲಿಂಗ್ ನೆಟ್ಟಿಗರ ಮನಸೂರೆಗೊಂಡಿದೆ. ನೋಡಿದವರೆಲ್ಲರೂ ಬಾಯ್ತುಂಬ ಹೊಗಳಿದ್ದಾರೆ. ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ. ಪರಿಣಾಮವಾಗಿ ಕೆಲವೇ ಗಂಟೆಗಳ ಅಂತರದಲ್ಲಿ ಸಾಮಾಜಿಕ ಜಾಣತಾಣದಲ್ಲಿ ಸುಶೀಲಾ ಫೋಟೋ ಮತ್ತು ವಿಡಿಯೋ ತುಂಬಿಹೋಗಿವೆ. ಒಬ್ಬರಿಂದ ಒಬ್ಬರಿಗೆ ಹಂಚಿಕೆಯಾಗಿ, ವೈರಲ್ ಆಗಿದೆ.
ಆ ವೈರಲ್ ವಿಡಿಯೋ ಗಮನಿಸಿ ‘ಎಕ್ಸ್’ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಆದಿತ್ಯ ಬಿರ್ಲಾ ಗ್ರೂಪ್, ‘ಫೋರ್ಸ್ ಫಾರ್ ಗುಡ್’ ಯೋಜನೆಯ ಅಡಿಯಲ್ಲಿ, ಸುಶೀಲಾಗೆ ಕ್ರಿಕೆಟ್ ತರಬೇತಿ ನೀಡುತ್ತೇವೆ. ನಾವೆಲ್ಲರೂ ಸುಶೀಲಾ ಅವರಿಗಾಗಿ ಒಂದಾಗೋಣ… ಅವಳು ಮಿಂಚುವಂತೆ ಮಾಡೋಣ ಎಂದು ಬರೆದುಕೊಂಡಿದ್ದಾರೆ. ಆ ಮೂಲಕ ಸುಶೀಲಾ ಮೀನಾ ಅವರ ಕ್ರಿಕೆಟರ್ ಆಗಬೇಕೆಂಬ ಕನಸನ್ನು ನನಸಾಗಿಸಲು ಇದೀಗ ಆದಿತ್ಯ ಬಿರ್ಲಾ ಗ್ರೂಪ್ ಮುಂದಾಗಿದೆ.

ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಯಾವುದೇ ಕ್ರಿಕೆಟಿಗರನ್ನು ಹೊಗಳಿದರೆ ಅದರಲ್ಲಿ ವಿಶೇಷತೆ ಇರಲೇಬೇಕು. ಯಾವುದೇ ಉದಯೋನ್ಮುಖ ಕ್ರಿಕೆಟಿಗನ ಬಗ್ಗೆ ಮಾತನಾಡಿದರೆ, ಎಲ್ಲರೂ ಅವರತ್ತ ಗಮನ ಹರಿಸುತ್ತಾರೆ. ಅವರ ಅದೃಷ್ಟ ಬದಲಾಗುವ ಸಾಧ್ಯತೆ ಕೂಡ ಇರುತ್ತದೆ. ಈಗ 12 ವರ್ಷದ ಪುಟ್ಟ ಬಾಲಕಿಗೆ ಅಂತಹದೊಂದು ಅದೃಷ್ಟ ಒಲಿದಿದೆ.
ಒಟ್ಟಿನಲ್ಲಿ ಸಚಿನ್ ತೆಂಡೂಲ್ಕರ್ ಹಂಚಿಕೊಂಡ ಒಂದೇ ಒಂದು ವಿಡಿಯೋ ಇದೀಗ 12 ವರ್ಷದ ಪುಟ್ಟ ಬಾಲಕಿ ಸುಶೀಲಾ ಮೀನಾ ಅವರ ಭವಿಷ್ಯಕ್ಕೆ ಹೊಸ ದಾರಿ ತೋರಿಸಿಕೊಟ್ಟಿದೆ.
ಸಾಧಕರು ಎನಿಸಿಕೊಂಡವರು, ಹೀಗೆ ಗ್ರಾಮೀಣ ಯುವ ಜನತೆಯತ್ತ ಗಮನ ಹರಿಸಿ, ಅವರಲ್ಲಿರುವ ಪ್ರತಿಭೆಯನ್ನು ಗುರುತಿಸಿದರೆ, ಪ್ರೋತ್ಸಾಹಿಸಿದರೆ, ಏನಾಗಬಹುದು ಎಂಬುದಕ್ಕೆ ಈ ಪ್ರಕರಣವೊಂದು ಸಾಕ್ಷಿಯಾಗಿ ನಿಲ್ಲುತ್ತದೆ. ಅದು ದುಪ್ಪಟ್ಟಾಗಲಿ ಎಂದು ಆಶಿಸೋಣ.