ದೇಶದಲ್ಲಿ ಇಂದಿಗೂ ಮುಂದುವರಿದಿರುವ ಅಮಾನವೀಯ ಪದ್ಧತಿ ‘ಮಲ ಹೊರುವ ಪದ್ಧತಿ’ ಅಂದರೆ ಕೈಯಿಂದ ಶೌಚಾಲಯ ಸ್ವಚ್ಛಗೊಳಿಸುವುದು ಮತ್ತು ಒಣ ಶೌಚಾಲಯಗಳನ್ನು ಸ್ವಚ್ಛಗೊಳಿಸುವುದು. ಆದರೆ ಕೇಂದ್ರದ ಮೋದಿ ಸರ್ಕಾರ ಈ ಪದ್ಧತಿ ಇಂದು ಆಚರಣೆಯಲ್ಲಿಲ್ಲ ಎಂದು ಹೇಳಿಕೊಳ್ಳುತ್ತಿದೆ. ಇಂತಹ ಸಂದರ್ಭದಲ್ಲಿ ಈ ಪದ್ಧತಿ ನಿರ್ಮೂಲನೆಗೆ ಆಗ್ರಹಿಸಿ ಸಫಾಯಿ ಕರ್ಮಚಾರಿ ಆಂದೋಲನ (SKA) ‘INDIA @80’ ಎಂಬ ವರ್ಷಪೂರ್ತಿ ರಾಷ್ಟ್ರೀಯ ಅಭಿಯಾನಕ್ಕೆ ಚಾಲನೆ ನೀಡಿದೆ.
ಈ ಪದ್ಧತಿಯನ್ನು ‘ರಾಷ್ಟ್ರೀಯ ಅವಮಾನ’ ಎಂದು ಕರೆಯಲಾಗಿದ್ದು, ಇದನ್ನು ಯುದ್ಧೋಪಾದಿಯಲ್ಲಿ ಕೊನೆಗಾಣಿಸಬೇಕು ಎಂದು ಸಂಘಟನೆ ಒತ್ತಾಯಿಸಿದೆ. ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ದೇಶದ ವಿವಿಧ ರಾಜ್ಯಗಳಿಂದ ಬಂದಿದ್ದ ನೂರಾರು ಮಹಿಳಾ ಸಫಾಯಿ ಕರ್ಮಚಾರಿಗಳು, ಸುಪ್ರೀಂ ಕೋರ್ಟ್ನ ನಿವೃತ್ತ ನ್ಯಾಯಮೂರ್ತಿಗಳು ಹಾಗೂ ಮಾನವ ಹಕ್ಕುಗಳ ಹೋರಾಟಗಾರರು ಭಾಗವಹಿಸಿದ್ದರು.
ಇದನ್ನೂ ಓದಿ: ಗದಗ | ನಿಷೇಧಿತ ಮಲಗುಂಡಿ ಸ್ವಚ್ಛಗೊಳಿಸುವ ಪದ್ಧತಿ ಇನ್ನೂ ಜೀವಂತ
“ದೇಶದಲ್ಲಿ ಮಲ ಹೊರುವ ಪದ್ಧತಿಯೇ ಇಲ್ಲ ಎಂದು ಸರ್ಕಾರ ಸಂಸತ್ತಿನಲ್ಲಿ ಹೇಳಿಕೆ ನೀಡುತ್ತಿದೆ. ಆದರೆ, ನಾವು ಇಂದಿಗೂ ಪ್ರತಿದಿನ ಒಣ ಶೌಚಾಲಯಗಳನ್ನು ಸ್ವಚ್ಛಗೊಳಿಸಲು ಬಲವಂತಕ್ಕೊಳಗಾಗುತ್ತಿದ್ದೇವೆ. ಈ ಅಸ್ಪೃಶ್ಯತೆ ಮತ್ತು ಗುಲಾಮಗಿರಿಯಿಂದ ನಮಗೆ ಎಂದಿಗೆ ಮುಕ್ತಿ” ಎಂದು ಸಫಾಯಿ ಕರ್ಮಚಾರಿ ಆಂದೋಲನದ ರಾಷ್ಟ್ರೀಯ ಸಂಚಾಲಕ ಬೆಜ್ವಾಡ ವಿಲ್ಸನ್ ಪ್ರಕಟಣೆಯಲ್ಲಿ ಪ್ರಶ್ನಿಸಿದ್ದಾರೆ.
ಸಂಘಟನೆಯ ವರದಿಯ ಪ್ರಕಾರ, ಕೇವಲ ಅರ್ಧ ವರ್ಷದಲ್ಲೇ ದೇಶಾದ್ಯಂತ ಚರಂಡಿ ಮತ್ತು ಸೆಪ್ಟಿಕ್ ಟ್ಯಾಂಕ್ಗಳನ್ನು ಕೈಯಿಂದ ಸ್ವಚ್ಛಗೊಳಿಸುವಾಗ 101 ಕ್ಕೂ ಹೆಚ್ಚು ಕಾರ್ಮಿಕರು ಪ್ರಾಣ ಕಳೆದುಕೊಂಡಿದ್ದಾರೆ. ಕಾಗದದ ಮೇಲೆ ಶಾಸನಬದ್ಧ ನಿಷೇಧವಿದ್ದರೂ, ವಾಸ್ತವದಲ್ಲಿ 40ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಈ ಪದ್ಧತಿ ಇನ್ನೂ ಜಾರಿಯಲ್ಲಿದೆ ಎಂದು ಜ್ಯೂರಿಷ್ಟ್ಗಳು ಕಳವಳ ವ್ಯಕ್ತಪಡಿಸಿದ್ದಾರೆ. ಮುಂಬರುವ ಪೀಳಿಗೆಯನ್ನಾದರೂ ಈ ಅಮಾನವೀಯ ಕೆಲಸದಿಂದ ಮುಕ್ತಗೊಳಿಸಬೇಕು ಎಂದು ಸಂಘಟನೆ ಸರ್ಕಾರವನ್ನು ಆಗ್ರಹಿಸಿದೆ.





