2026-27ನೇ ಸಾಲಿನ ಕಬ್ಬಿಗೆ ಪ್ರತಿ ಟನ್ಗೆ ₹5,500 ದರ ನಿಗದಿಪಡಿಸುವುದು, ಸ್ವಾಮಿನಾಥನ್ ಆಯೋಗದ ಶಿಫಾರಸುಗಳನ್ನು ಜಾರಿಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸೆ.23ರಂದು ಕೇಂದ್ರ ಸಚಿವ ಪ್ರಲ್ಲಾದ ಜೋಶಿ ಅವರ ನಿವಾಸದ ಎದುರು ಪಕ್ಷಾತೀತವಾಗಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಹಸಿರು ಸೇನೆ ರಾಜ್ಯಾಧ್ಯಕ್ಷ ಚೂನ್ನಪ್ಪ ಪೂಜೇರ ತಿಳಿಸಿದರು.
ಬೆಳಗಾವಿ ಜಿಲ್ಲೆಯ ಕಿತ್ತೂರಿನ ಡೊಂಬರಕೊಪ್ಪ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೊಬ್ಬರ ಹಾಗೂ ಕೃಷಿ ಉತ್ಪಾದನಾ ವೆಚ್ಚ ನಾಲ್ಕು ಪಟ್ಟು ಹೆಚ್ಚಾಗಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ರಾಜ್ಯದ 31 ಜಿಲ್ಲೆಗಳಿಂದ 1ರಿಂದ 2 ಲಕ್ಷ ರೈತರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದು, ಕಿತ್ತೂರು ಭಾಗದಿಂದಲೇ 20 ಸಾವಿರಕ್ಕೂ ಹೆಚ್ಚು ರೈತರು ಭಾಗವಹಿಸಲಿದ್ದಾರೆ ಎಂದರು.
ಕಬ್ಬಿಗೆ ವೈಜ್ಞಾನಿಕವಾಗಿ ಪ್ರತಿ ಟನ್ಗೆ ₹5,500 ದರ ನಿಗದಿಪಡಿಸಬೇಕು. ಪ್ರತಿ ಕೆ.ಜಿ. ಸಕ್ಕರೆಗೆ ₹50 ಹಾಗೂ ಕೋಕಾ-ಕೋಲಾ, ಪೆಪ್ಪಿ ಮತ್ತು ಸಿಹಿ ತಿನಿಸು ತಯಾರಕರಿಗೆ ₹100 ದರ ನಿಗದಿಪಡಿಸಿ, ಲಾಭದ ಪಾಲನ್ನು ರೈತರಿಗೆ ನೀಡಬೇಕು ಎಂದು ಒತ್ತಾಯಿಸಿದರು.
ರಾಜ್ಯದಲ್ಲಿ ಉತ್ಪಾದನೆಯಾಗುವ ಸಂಪೂರ್ಣ ಎಥೆನಾಲ್ ಅನ್ನು ಸರ್ಕಾರವೇ ಖರೀದಿಸಬೇಕು. ಇದರಿಂದ ಕಬ್ಬು, ಮೆಕ್ಕೆಜೋಳ ಮತ್ತು ಭತ್ತ ಬೆಳೆಗಾರರಿಗೆ ನ್ಯಾಯಯುತ ಬೆಲೆ ದೊರೆಯಲಿದೆ. ಕೃಷಿ ಕೂಲಿ ಕಾರ್ಮಿಕರ ಕೊರತೆ ನೀಗಿಸಲು ಉದ್ಯೋಗ ಖಾತರಿ ಯೋಜನೆಯನ್ನು ಕೃಷಿ ಚಟುವಟಿಕೆಗಳಿಗೆ ಸಂಪೂರ್ಣವಾಗಿ ಅಳವಡಿಸಬೇಕು ಎಂದು ಆಗ್ರಹಿಸಿದರು.
ಸಕ್ಕರೆ ಕಾರ್ಖಾನೆಗಳಲ್ಲಿ ನಡೆಯುವ ತೂಕದ ಮೋಸ ತಡೆಯಲು ಎಪಿಎಂಸಿ ಮೂಲಕ ಸರ್ಕಾರವೇ ಡಿಜಿಟಲ್ ತೂಕದ ಸೇತುವೆ ನಿರ್ಮಿಸಬೇಕು. ರೈತರ ಆರ್ಥಿಕ ಭದ್ರತೆಗಾಗಿ ಸ್ವಾಮಿನಾಥನ್ ಆಯೋಗದ ಶಿಫಾರಸುಗಳನ್ನು ತಕ್ಷಣ ಜಾರಿಗೆ ತರಬೇಕು ಎಂದು ಹೇಳಿದರು.
ಅಕ್ಟೋಬರ್ನಲ್ಲಿ ಉಗ್ರ ಹೋರಾಟ: ಮಹಾರಾಷ್ಟ್ರದ ಮಾಜಿ ಸಂಸದ ರಾಜು ಶೆಟ್ಟಿ ಅವರೊಂದಿಗೆ ಚರ್ಚಿಸಿ ಅಕ್ಟೋಬರ್ ಕೊನೆಯ ವಾರದಲ್ಲಿ ‘ಗುರ್ಲಾಪುರ ಚಳವಳಿ’ ಮಾದರಿಯಲ್ಲಿ ಉಗ್ರ ಹೋರಾಟ ರೂಪಿಸಲಾಗುವುದು ಎಂದು ಚೂನ್ನಪ್ಪ ಪೂಜೇರ ಎಚ್ಚರಿಕೆ ನೀಡಿದರು.
ರೈತ ಹೋರಾಟಗಾರ ಬಿಷ್ಟಪ್ಪ ಶಿಂದೆ, ಪ್ರವೀಣ ಸರದಾರ, ಕಲ್ಲಪ್ಪ ಕುಗಟಿ, ಪ್ರೇಮ್ ಚೌಗಲಾ, ದೇವೇಂದ್ರ ಪಾಟೀಲ, ಸಾವಂತ ಕಿರಬನವರ, ಮಯೂರ ಗಿರಿಯಾಲ, ಸುರೇಶ ಗುದಗಿ, ಸಂಗಮೇಶ ಹಿರೇಮಠ, ಸತೀಶ ಲಂಗೊಟಿ, ಆನಂದ ಚಕ್ಕಡಿ, ಮಂಜುನಾಥ ಸರದಾರ, ಶಫಿಲ್ ಹಲಾಲ್ದಾರ, ಧಶರಥ ಮಡಿವಾಳರ ಸೇರಿದಂತೆ ಅನೇಕ ರೈತರು ಉಪಸ್ಥಿತರಿದ್ದರು.





