ಬಾಲಿವುಡ್ ನಟ ಸೈಫ್ ಅಲಿ ಖಾನ್ ಮೇಲೆ ಚಾಕುವಿನಿಂದ ಇರಿದ ಶಂಕಿತ ಹಲ್ಲೆಕೋರನ ಚಿತ್ರವನ್ನು ಬಿಡುಗಡೆ ಮಾಡಲಾಗಿದೆ. ಕಳ್ಳತನ ಮಾಡಲು ಬಂದಿದ್ದ ವ್ಯಕ್ತಿಯು ನಟನಿಗೆ ಹಲ್ಲೆ ನಡೆಸಿ ಪರಾರಿಯಾಗಿದ್ದಾನೆ ಎಂದು ಹೇಳಲಾಗಿದೆ.
ನಿನ್ನೆ ತಡರಾತ್ರಿ ಸುಮಾರು 2:30ಕ್ಕೆ ಹಲ್ಲೆಕೋರ ಬಾಂದ್ರಾದ ಅಪಾರ್ಟ್‌ಮೆಂಟ್‌ನಲ್ಲಿ 12ನೇ ಮಹಡಿಯಲ್ಲಿರುವ ನಟನ ನಿವಾಸಕ್ಕೆ ನುಗ್ಗಿದ್ದಾನೆ ಎಂದು ವರದಿಯಾಗಿದೆ.
ಇದನ್ನು ಓದಿದ್ದೀರಾ? ಸೈಫ್ ಅಲಿ ಖಾನ್‌ಗೆ ಚಾಕು ಇರಿತ | ಮಹಾರಾಷ್ಟ್ರದಲ್ಲಿ ಸೆಲೆಬ್ರೆಟಿಗಳೇ ಸುರಕ್ಷಿತವಾಗಿಲ್ಲ: ವಿಪಕ್ಷ ಆಕ್ರೋಶ
ಮುಂಬೈ ಪೊಲೀಸರು ಸದ್ಯ ಸಿಸಿಟಿವಿ ದೃಶ್ಯವನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ ಶಂಕಿತ ಹಲ್ಲೆಕೋರ ಮೆಟ್ಟಿಲಿನಿಂದ ಕೆಳಕ್ಕೆ ಇಳಿಯುತ್ತಿರುವುದು ಕಂಡುಬಂದಿದೆ. ಹಲ್ಲೆಕೋರನ ಮುಖವು ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಪೊಲೀಸರು ಚಿತ್ರ ಬಿಡುಗಡೆ ಮಾಡಿದ್ದಾರೆ.
ಪೊಲೀಸರ ಪ್ರಕಾರ ಹಲ್ಲೆಕೋರ ಕಳ್ಳತನ ಮಾಡುವ ಉದ್ದೇಶದಿಂದ ನಟನ ಮನೆಗೆ ನುಗ್ಗಿದ್ದಾನೆ. ಸೈಫ್ ಮನೆಯ ಕಾಂಪೌಂಡ್ ಮೇಲೆ ಏರಿ ಬಳಿಕ ತುರ್ತು ನಿರ್ಗಮನ ಸ್ಥಳದಿಂದ ಸೈಫ್ ಮನೆಗೆ ಪ್ರವೇಶಿಸಿದ್ದಾನೆ ಎಂದು ವರದಿಯಾಗಿದೆ.
ಮೊದಲು ನಟನ ಮನೆಯ ನರ್ಸ್ ಕಳ್ಳನನ್ನು ನೋಡಿದ್ದು, ಕಿರುಚಿದ್ದಾರೆ. ಈ ವೇಳೆ ಸೈಫ್ ಕಳ್ಳನನ್ನು ತಡೆದಿದ್ದು, ಆತ ನಟನಿಗೆ ಚಾಕುವಿನಿಂದ ಇರಿದಿದ್ದಾನೆ. ಇನ್ನು ಆರೋಪಿಯು ಒಂದು ಕೋಟಿ ರೂಪಾಯಿ ನೀಡುವಂತೆ ಬೇಡಿಕೆ ಇಟ್ಟಿದ್ದಾನೆ ಎಂದು ವರದಿಯಾಗಿದೆ. ಸದ್ಯ ನಟ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಹೇಳಲಾಗಿದೆ.
