ನಟ ಸೈಫ್ ಅಲಿ ಖಾನ್ ಚಾಕು ಇರಿತ ಪ್ರಕರಣದಲ್ಲಿ ಜನವರಿ 16ರಂದು ಛತ್ತೀಸ್‌ಗಢದ ದುರ್ಗ್‌ನಲ್ಲಿ ಬಂಧನಕ್ಕೆ ಒಳಗಾದ ಶಂಕಿತ ಆರೋಪಿಯನ್ನು ಬಿಡುಗಡೆಗೊಳಿಸಲಾಗಿದ್ದು “ಮುಂಬೈ ಪೊಲೀಸರು ಜೀವನ ಹಾಳು ಮಾಡಿದರು, ನನಗೆ ನ್ಯಾಯ ಬೇಕು” ಎಂದು ಆಕಾಶ್ ಕನೋಜಿಯಾ ಹೇಳಿದ್ದಾರೆ.
ಜನವರಿ 18ರಂದು ಮುಂಬೈ ಪೊಲೀಸರ ಸುಳಿವು ಪಡೆದ ನಂತರ ರೈಲ್ವೆ ರಕ್ಷಣಾ ಪಡೆ ಮುಂಬೈ ಲೋಕಮಾನ್ಯ ತಿಲಕ್ ಟರ್ಮಿನಸ್- ಕೋಲ್ಕತ್ತಾ ಶಾಲಿಮಾರ್ ಜ್ಞಾನೇಶ್ವರಿ ಎಕ್ಸ್‌ಪ್ರೆಸ್‌ನಿಂದ ಚಾಲಕ ಆಕಾಶ್ ಕನೋಜಿಯಾ (31) ಅವರನ್ನು ದುರ್ಗ ನಿಲ್ದಾಣದಲ್ಲಿ ಬಂಧಿಸಿದೆ.
ಇದನ್ನು ಓದಿದ್ದೀರಾ? ಸೈಫ್ ಅಲಿ ಖಾನ್ ಕಸ, ಅದನ್ನು ಎಸೆಯಬೇಕು, ಚೂರಿ ಇರಿತ ನಾಟಕ: ಮಹಾರಾಷ್ಟ್ರ ಸಚಿವನ ವಿವಾದಾತ್ಮಕ ಹೇಳಿಕೆ
ಅದಾದ ಬಳಿಕ ಜನವರಿ 19ರಂದು ಬೆಳಿಗ್ಗೆ ಮುಂಬೈ ಪೊಲೀಸರು ನೆರೆಯ ಥಾಣೆಯಿಂದ ಬಾಂಗ್ಲಾದೇಶಿ ಪ್ರಜೆ ಶರೀಫುಲ್ ಇಸ್ಲಾಂ ಶೆಹಜಾದ್ ಮೊಹಮ್ಮದ್ ರೋಹಿಲ್ಲಾ ಅಮೀನ್ ಫಕೀರ್ ಅಲಿಯಾಸ್ ವಿಜಯ್ ದಾಸ್ ಅವರನ್ನು ಬಂಧಿಸಿದರು. ನಂತರ ಪೊಲೀಸರು ಕನೋಜಿಯಾ ಅವರನ್ನು ಬಿಡುಗಡೆಗೊಳಿಸಿದರು.
ಆದರೆ ಅಷ್ಟರಲ್ಲೇ ಮಾಧ್ಯಮಗಳಲ್ಲಿ ಆಕಾಶ್ ಕನೋಜಿಯಾ ಚಿತ್ರಗಳನ್ನು ಪ್ರಕಟಿಸಲಾಗಿತ್ತು. “ಇದರಿಂದಾಗಿ ನನ್ನ ಜೀವನವೇ ಹಾಳಾಗಿದೆ. ನನಗೆ ಈಗ ಕೆಲಸವಿಲ್ಲ. ನನ್ನನ್ನು ಮದುವೆಯಾಗಲಿದ್ದ ಯುವತಿ ಮತ್ತು ಆಕೆಯ ಕುಟುಂಬಸ್ಥರು ಸಂಬಂಧ ಮುರಿದಿದ್ದಾರೆ” ಎಂದು ಕನೋಜಿಯಾ ಹೇಳಿದ್ದಾರೆ.
ಜನವರಿ 16ರಂದು ಮುಂಜಾನೆ ಮುಂಬೈನ ಬಾಂದ್ರಾದ ಅಪಾರ್ಟ್‌ಮೆಂಟ್‌ವೊಂದರಲ್ಲಿ ಕಳ್ಳತನ ಮಾಡಲು ಯತ್ನಿಸಿದ ವ್ಯಕ್ತಿಯೋರ್ವ ಸೈಫ್ ಅಲಿ ಖಾನ್ (54) ಅವರ ಮೇಲೆ ಚಾಕು ಇರಿದಿದ್ದ. ಬಳಿಕ ನಟನಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಇದನ್ನು ಓದಿದ್ದೀರಾ? ಸೈಫ್ ಅಲಿ ಖಾನ್ ಕುಟುಂಬಕ್ಕೆ ಸೇರಿದ 15 ಸಾವಿರ ಕೋಟಿ ಮೌಲ್ಯದ ಆಸ್ತಿ ಕೇಂದ್ರದ ಪಾಲಾಗುವ ಸಾಧ್ಯತೆ?
ಮೊದಲು ಬಂಧನಕ್ಕೆ ಒಳಗಾಗಿ ಬಿಡುಗಡೆಯಾದ ಕನೋಜಿಯಾ, “ಮಾಧ್ಯಮಗಳು ನನ್ನ ಚಿತ್ರಗಳನ್ನು ತೋರಿಸಲು ಪ್ರಾರಂಭಿಸಿತು. ನಾನು ಈ ಪ್ರಕರಣದಲ್ಲಿ ಪ್ರಮುಖ ಶಂಕಿತ ವ್ಯಕ್ತಿ ಎಂದು ಹೇಳಿತು. ಇದರಿಂದ ನನ್ನ ಕುಟುಂಬ ಆಘಾತಕ್ಕೊಳಗಾಯಿತು. ಮುಂಬೈ ಪೊಲೀಸರ ಒಂದು ತಪ್ಪು ನನ್ನ ಜೀವನವನ್ನು ಹಾಳು ಮಾಡಿತು. ನನಗೆ ಮೀಸೆ ಇತ್ತು ಮತ್ತು ನಟನ ಕಟ್ಟಡದ ಸಿಸಿಟಿವಿಯಲ್ಲಿ ಕಂಡುಬಂದ ವ್ಯಕ್ತಿಯ ಮುಖದಲ್ಲಿ ಮೀಸೆ ಇರಲಿಲ್ಲ. ಪೊಲೀಸರು ಅದನ್ನು ಗಮನಿಸಿಲ್ಲ” ಎಂದು ಕನೋಜಿಯಾ ತಿಳಿಸಿದರು.
“ಘಟನೆಯ ಬಳಿಕ ಪೊಲೀಸರಿಂದ ನನಗೆ ಕರೆ ಬಂತು, ಎಲ್ಲಿದ್ದೀರಿ ಎಂದು ಪೊಲೀಸರು ಪ್ರಶ್ನಿಸಿದರು. ನಾನು ಮನೆಯಲ್ಲಿದ್ದೇನೆ ಎಂದು ಹೇಳಿದ ನಂತರ ಕರೆ ಕಡಿತವಾಯಿತು. ನಾನು ನನ್ನನ್ನು ವಿವಾಹವಾಗಲಿರುವ ಯುವತಿಯನ್ನು ಭೇಟಿಯಾಗಲು ಹೋಗುತ್ತಿದ್ದೆ. ಆಗ ನನ್ನನ್ನು ಬಂಧಿಸಿ ರಾಯ್‌ಪುರಕ್ಕೆ ಕರೆದೊಯ್ಯಲಾಯಿತು. ಅಲ್ಲಿಗೆ ತಲುಪಿದ ಮುಂಬೈ ಪೊಲೀಸರ ತಂಡ ನನ್ನ ಮೇಲೆ ಹಲ್ಲೆ ನಡೆಸಿದರು” ಎಂದು ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಸೈಫ್ ಅಲಿ ಖಾನ್ ಮೇಲೆ ಚಾಕು ಇರಿದ ಆರೋಪಿ ಬಂಧನ
“ಬಿಡುಗಡೆಯಾದ ಬಳಿಕ ನನ್ನ ತಾಯಿ ಮನೆಗೆ ಬರಲು ಹೇಳಿದರು. ಆದರೆ ಅದಾದ ಬಳಿಕ ನನ್ನ ಜೀವನವೇ ಗೊಂದಲಮಯವಾಯಿತು. ನಾನು ನನ್ನ ಉದ್ಯೋಗದಾತರಿಗೆ ಕರೆ ಮಾಡಿದಾಗ, ಅವರು ಕೆಲಸಕ್ಕೆ ಬರಬೇಡಿ ಎಂದು ಹೇಳಿದರು. ನನ್ನ ವಿವರಣೆಯನ್ನು ಕೇಳಲು ನಿರಾಕರಿಸಿದರು. ಅದಾದ ಬಳಿಕ ನನ್ನ ವಿವಾಹ ಸಂಬಂಧವು ಮುರಿದುಹೋಯಿತು ಎಂದು ನನ್ನ ಅಜ್ಜಿ ತಿಳಿಸಿದರು” ಎಂದು ತಿಳಿಸಿದರು.
ಇದು ಮುಖವಾಣಿಗೆ ಬಂದಿರುವ ಪ್ರಕರಣವಾದ ಕಾರಣ ಬಂಧಿತ ವ್ಯಕ್ತಿಯು ತನಗೆ ಆದ ಅನ್ಯಾಯದ ಬಗ್ಗೆ ಮಾಧ್ಯಮಕ್ಕೆ ತಿಳಿಸಿದ್ದಾರೆ. ಆದರೆ ಅದೆಷ್ಟೋ ಪ್ರಕರಣದಲ್ಲಿ ಪೊಲೀಸರು ಶಂಕೆಯ ಮೇರೆಗೆ ನಿರಪರಾಧಿಯನ್ನು ಬಂಧಿಸಿ ಹಲವು ತಾಪತ್ರಯಕ್ಕೆ ಬಂಧಿತ ವ್ಯಕ್ತಿ ಒಳಗಾಗಿರುವುದು ಇದೆ. ಪೊಲೀಸರು ತಮ್ಮ ಕರ್ತವ್ಯ ಮಾಡುವುದು ನಿಜ, ಆದರೆ ಕೆಲವು ಅಚಾತುರ್ಯದಿಂದ ಕೆಲವು ಜನರ ಜೀವನವೇ ಬದಲಾಗುವುದು ಅಲ್ಲಗಳೆಯುವಂತಿಲ್ಲ.
