ಬಾಲಿವುಡ್ ನಟ ಸಲ್ಮಾನ್ ಖಾನ್ ಅವರಿಗೆ ಸೋಮವಾರ ಮತ್ತೆ ಜೀವ ಬೆದರಿಕೆ ಸಂದೇಶ ಬಂದಿದೆ. ಮುಂಬೈನ ವರ್ಲಿಯಲ್ಲಿರುವ ಸಾರಿಗೆ ಇಲಾಖೆಗೆ ವಾಟ್ಸಾಪ್ ಸಂದೇಶದ ಮೂಲಕ ಈ ಕೊಲೆ ಬೆದರಿಕೆಯನ್ನು ಕಳುಹಿಸಲಾಗಿದೆ. ಕಾರು ಬಾಂಬ್ ಬಳಸಿ ಕೊಲ್ಲುವುದಾಗಿ ಎಚ್ಚರಿಕೆ ನೀಡಲಾಗಿದೆ.
ಬೆದರಿಕೆ ಸಂದೇಶದಲ್ಲಿ, ಆರೋಪಿಯು ಸಲ್ಮಾನ್ ಖಾನ್ ಅವರ ಮುಂಬೈನ ಬಾಂದ್ರಾದಲ್ಲಿರುವ ಗ್ಯಾಲಕ್ಸಿ ಅಪಾರ್ಟ್‌ಮೆಂಟ್‌ಗಳ ಮನೆಗೆ ನುಗ್ಗಿ ಅವರ ಕಾರನ್ನು ಬಾಂಬ್‌ನಿಂದ ಸ್ಫೋಟಿಸುವ ಮೂಲಕ ಕೊಲ್ಲುವುದಾಗಿ ಎಚ್ಚರಿಸಿದ್ದಾನೆ. ಸದ್ಯ ಸಂದೇಶ ಕಳುಹಿಸಿದ ಅಪರಿಚಿತ ವ್ಯಕ್ತಿಯ ವಿರುದ್ಧ ವರ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನು ಓದಿದ್ದೀರಾ? ಮನೆ, ಶೂಟಿಂಗ್ ಇಷ್ಟೇ ಬದುಕು: ಜೀವ ಬೆದರಿಕೆ ಬಗ್ಗೆ ಮೌನ ಮುರಿದ ಸಲ್ಮಾನ್ ಖಾನ್
ಆರೋಪಿಗಳ ಪತ್ತೆಗಾಗಿ ತನಿಖೆ ನಡೆಯುತ್ತಿದೆ. 1998ರ ಕೃಷ್ಣಮೃಗ ಗುಂಡಿನ ದಾಳಿ ಪ್ರಕರಣದಲ್ಲಿ ಸಲ್ಮಾನ್ ಖಾನ್ ಶಿಕ್ಷೆಗೊಳಗಾದ ಬಳಿಕ ನಟನಿಗೆ ಅನೇಕೆ ಕೊಲೆ ಬೆದರಿಕೆಗಳು ಬಂದಿವೆ. ಬಿಷ್ಣೋಯ್ ಸಮುದಾಯವು ಕೃಷ್ಣಮೃಗಗಳನ್ನು ಪವಿತ್ರವೆಂದು ಪರಿಗಣಿಸುತ್ತದೆ. ಆದ್ದರಿಂದ ಕೃಷ್ಣಮೃಗದ ಮೇಲೆ ಗುಂಡಿನ ದಾಳಿ ನಡೆಸಿದ ಸಲ್ಮಾನ್ ಖಾನ್ ಹತ್ಯೆಗೆ ಯತ್ನಿಸಲಾಗುತ್ತಿದೆ.
ಕಳೆದ ವರ್ಷ ಏಪ್ರಿಲ್ 14ರಂದು, ಬೈಕ್‌ನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಸಲ್ಮಾನ್ ಖಾನ್ ಅವರ ಬಾಂದ್ರಾ ನಿವಾಸದ ಮೇಲೆ ನಾಲ್ಕು ಸುತ್ತು ಗುಂಡು ಹಾರಿಸಿ ಸ್ಥಳದಿಂದ ಪರಾರಿಯಾಗಿದ್ದಾರೆ. ಇಂದು (ಏಪ್ರಿಲ್ 14) ಮತ್ತೆ ಕೊಲೆ ಬೆದರಿಕೆಯನ್ನು ಹಾಕಲಾಗಿದೆ. ಕಳೆದ ವರ್ಷ ಗುಂಡಿನ ದಾಳಿ ಬಳಿಕ ದರೋಡೆಕೋರ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಫೇಸ್‌ಬುಕ್ ಪೋಸ್ಟ್ ಮಾಡಿ ಗುಂಡಿನ ದಾಳಿಯ ಹೊಣೆಯನ್ನು ಹೊತ್ತುಕೊಂಡಿತ್ತು. ಹಾಗೆಯೇ ಮಹಾರಾಷ್ಟ್ರ ಸಚಿವ ಬಾಬಾ ಸಿದ್ದಿಕ್ ಅವರ ಹತ್ಯೆಗೆ ತಾವೇ ಕಾರಣ ಎಂದು ಹೇಳಿಕೊಂಡಿತ್ತು.
ಜೈಲಿನಲ್ಲಿರುವ ಈ ಗ್ಯಾಂಗ್‌ಸ್ಟರ್, ಸಲ್ಮಾನ್ ಖಾನ್ ಮೇಲೆ ದೀರ್ಘಕಾಲದ ದ್ವೇಷವನ್ನು ಹೊಂದಿದ್ದು ಈ ಹಿಂದೆ ಹಲವು ಬಾರಿ ಬೆದರಿಕೆ ಹಾಕಿದ್ದಾನೆ. ಈಗಾಗಲೇ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ 18 ಸದಸ್ಯರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಸದ್ಯ ಸಲ್ಮಾನ್ ಖಾನ್ ಭದ್ರತೆಯನ್ನು ಹೆಚ್ಚಿಸಲಾಗಿದೆ.
