ಉತ್ತರ ಪ್ರದೇಶದ ಲೋಕಸಭೆ ಚುನಾವಣೆಯ ಸೀಟು ಹಂಚಿಕೆ ಪೂರ್ಣಗೊಂಡ ನಂತರವೇ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ನ್ಯಾಯ ಯಾತ್ರೆಯಲ್ಲಿ ಪಾಲ್ಗೊಳ್ಳುವುದಾಗಿ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ತಿಳಿಸಿದ್ದಾರೆ.
“ಮಾತುಕತೆ ನಡೆಯುತ್ತಿದೆ. ಎರಡೂ ಕಡೆಗೂ ಪಟ್ಟಿಗಳು ಬರುತ್ತಿವೆ. ಒಮ್ಮೆ ಸೀಟು ಹಂಚಿಕೆ ಅಂತಿಮವಾದರೆ ಸಮಾಜವಾದಿ ಪಕ್ಷ ಕಾಂಗ್ರೆಸ್‌ನ ಭಾರತ್ ಜೋಡೋ ನ್ಯಾಯಯಾತ್ರೆಯಲ್ಲಿ ಪಾಲ್ಗೊಳ್ಳಲಿದೆ. ಸೀಟುಗಳ ಸಂಖ್ಯೆ ಹಾಗೂ ಅಭ್ಯರ್ಥಿಗಳ ಹೆಸರುಗಳು ಈಗಾಗಲೇ ನಿರ್ಧಾರವಾಗಿದೆ. ಆದರೆ ರಾಹುಲ್ ಗಾಂಧಿಯವರು ಕೆಲವು ಸೀಟುಗಳು ಬೇಕೆಂದು ಪಟ್ಟು ಹಿಡಿದಿರುವ ಕಾರಣ ಮೈತ್ರಿಯ ಅಂತಿಮ ಪಟ್ಟಿ ತಡವಾಗುತ್ತಿದೆ” ಎಂದು ಅಖಿಲೇಶ್ ಯಾದವ್ ಹೇಳಿದ್ದಾರೆ.
ಅಖಿಲೇಶ್ ಯಾದವ್, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆ ನಡುವೆ ಮಾತುಕತೆ ನಡೆಯುತ್ತಿದ್ದು, ಆದರೆ ಸೀಟುಗಳ ಅಂತಿಮ ಪಟ್ಟಿ ಇನ್ನು ತೀರ್ಮಾನವಾಗಿಲ್ಲ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಭಾರತವನ್ನು ಗೆಲ್ಲಿಸಿದ ಬಡವರ ಮಕ್ಕಳ ಬೆರಗಿನ ಆಟ
ರಾಹುಲ್ ಗಾಂಧಿ ನೇತೃತ್ವದ ನ್ಯಾಯ ಯಾತ್ರೆಯು ಅಮೇಥಿ ಲೋಕಸಭಾ ವ್ಯಾಪ್ತಿಯಲ್ಲಿ ಸಾಗುತ್ತಿದೆ. ಇದರ ನಂತರ ರಾಯ್‌ಬರೇಲಿಯಲ್ಲಿ ಸಾಗಲಿದೆ. ಸಮಾಜವಾದಿ ಪಕ್ಷ ನ್ಯಾಯ ಯಾತ್ರೆಯಲ್ಲಿ ಪಾಲ್ಗೊಳ್ಳುವುದಾಗಿ ಈ ಮೊದಲು ತಿಳಿಸಿದ್ದರು.
ಸಮಾಜವಾದಿ ಪಕ್ಷ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷಕ್ಕೆ 11 ಸೀಟು ನಿಡುವುದಾಗಿ ತಿಳಿಸಿತ್ತು. ಆದರೆ ಕಾಂಗ್ರೆಸ್ ರಾಜ್ಯ ಘಟಕ ಹೆಚ್ಚು ಸೀಟು ನಿಡಬೇಕೆಂದು ಬೇಡಿಕೆಯಿಟ್ಟಿತ್ತು.
ಉತ್ತರ ಪ್ರದೇಶ ಕಾಂಗ್ರೆಸ್ ಮುಖ್ಯಸ್ಥರಾದ ಅಜಯ್ ರಾಯ್, 2009ರಲ್ಲಿ ಕಾಂಗ್ರೆಸ್ 20ಕ್ಕೂ ಹೆಚ್ಚು ಸ್ಥಾನ ಗೆದ್ದಿರುವ ಕಾರಣ ಈ ಬಾರಿಯೂ ಅಷ್ಟೆ ಸ್ಥಾನ ನೀಡಬೇಕೆಂದು ಹೇಳಿದ್ದರು.
ಸಮಾಜವಾದಿ ಪಕ್ಷ ಹಾಗೂ ಕಾಂಗ್ರೆಸ್ ವಿಪಕ್ಷಗಳ ಇಂಡಿಯಾ ಮೈತ್ರಿಕೂಟದ ಮಿತ್ರಪಕ್ಷಗಳಾಗಿವೆ.