ಉತ್ತರ ಪ್ರದೇಶದ ಸಂಭಲ್‌ನ ಶಾಹಿ ಜಾಮಾ ಮಸೀದಿಯ ಸಮೀಕ್ಷೆ ವಿರೋಧಿಸಿ ಪ್ರತಿಭಟನಕಾರರು ನಡೆಸಿದ ಹಿಂಸಾಚಾರದಲ್ಲಿ ನಾಲ್ವರು ಮೃತಪಟ್ಟಿದ್ದು, ಭದ್ರತಾ ಸಿಬ್ಬಂದಿ ಸೇರಿ ಹಲವರು ಗಾಯಗೊಂಡಿದ್ದಾರೆ. ಹೀಗಾಗಿ ಜಿಲ್ಲಾಡಳಿತ ನಿಷೇಧಾಜ್ಞೆ ವಿಧಿಸಿದ್ದು, ನ.30ರವರೆಗೆ ಹೊರಗಿನ ಜನರ ಪ್ರವೇಶಕ್ಕೆ ನಿರ್ಬಂಧ ಹೇರಿ ಆದೇಶಿಸಿದೆ.
‘ತಕ್ಷಣದಿಂದ ಜಾರಿಯಾಗುವಂತೆ, ಸಕ್ಷಮ ಅಧಿಕಾರಿಯ ಅನುಮತಿಯಿಲ್ಲದೆ ಹೊರಗಿನವರು, ಇತರ ಸಾಮಾಜಿಕ ಸಂಘಟನೆಗಳು ಅಥವಾ ಜನಪ್ರತಿನಿಧಿಗಳು ಜಿಲ್ಲೆಯ ಗಡಿಯನ್ನು ಪ್ರವೇಶಿಸುವಂತಿಲ್ಲ’ ಎಂದು ಜಿಲ್ಲಾಧಿಕಾರಿಗಳ ಆದೇಶದಲ್ಲಿ ತಿಳಿಸಲಾಗಿದೆ.
ಹಾಗೆಯೇ ಪ್ರದೇಶದಲ್ಲಿ ಇಂಟರ್‌ನೆಟ್ ಸ್ಥಗಿತಗೊಳಿಸಲಾಗಿದ್ದು, ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಮಾಜವಾದಿ ಪಕ್ಷದ ಲೋಕಸಭಾ ಸದಸ್ಯ ಜಯಾವುರ್ ರೆಹಮಾನ್ ಬಾರ್ಕ್ ಹಾಗೂ ಸ್ಥಳೀಯ ಶಾಸಕ ಇಕ್ಬಾಲ್ ಮೆಹಮೊದ್ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಇವರ ವಿರುದ್ಧ ಹಿಂಸಾಚಾರ ಪ್ರಚೋದನೆ,ಜನರನ್ನು ಗುಂಪು ಸೇರಿಸುವಿಕೆ ಹಾಗೂ ಅಶಾಂತಿ ಉಂಟು ಮಾಡಿದ್ದಕ್ಕಾಗಿ ಪ್ರಕರಣ ದಾಖಲಿಸಲಾಗಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಅಮೆರಿಕ ಲಂಚ-ವಂಚನೆ ಪ್ರಕರಣದಲ್ಲಿ ‘ಮೋದಾನಿ’ ಆರೋಪಿಯಲ್ಲವೇ?
ಜಾಮಾ ಮಸೀದಿಯಿದ್ದ ಜಾಗದಲ್ಲಿ ಪುರಾತನ ಹಿಂದೂ ದೇವಾಲಯವಿತ್ತು, ಮೊಘಲ್ ದೊರೆ ಬಾಬರ್ ಆಳ್ವಿಕೆ ಅವಧಿಯಲ್ಲಿ ದೇಗುಲ ಕೆಡವಿ ಮಸೀದಿ ಕಟ್ಟಲಾಗಿದೆ. ದೇಗುಲಕ್ಕೆ ಸೇರಿದ ಅನೇಕ ಗುರುತುಗಳೂ ಅಲ್ಲಿವೆ ಎಂದು ಸುಪ್ರೀಂ ಕೋರ್ಟ್ ವಕೀಲ ವಿಷ್ಣು ಶಂಕರ್ ಜೈನ್ ಅವರು ಸ್ಥಳೀಯ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿ ವಿಚಾರಣೆ ನಡೆಸಿದ ಕೋರ್ಟ್, ವಿಡಿಯೋ ಚಿತ್ರೀಕರಣ ಮತ್ತು ಛಾಯಾಗ್ರಹಣ ಸಮೇತ ಸಮೀಕ್ಷೆ ನಡೆಸಿ, ವರದಿ ಸಲ್ಲಿಸುವಂತೆ ಆದೇಶಿಸಿತ್ತು.
“ಸಮೀಕ್ಷೆಯು ಶಾಂತಿಯುತವಾಗಿಯೇ ನಡೆಯುತ್ತಿತ್ತು. ಮಸೀದಿ ಸಮೀಪ ಜಮಾಯಿಸಿದ್ದ ಜನರು ಘೋಷಣೆಗಳನ್ನು ಕೂಗಲು ಆರಂಭಿಸಿದರು. ಅವರನ್ನು ಚದುರಿಸಲು ಪೊಲೀಸರು ಮುಂದಾದಾಗ, ದುಷ್ಕರ್ಮಿಗಳ ಗುಂಪೊಂದು ಪೊಲೀಸರತ್ತ ಕಲ್ಲುಗಳನ್ನು ತೂರಲು ಆರಂಭಿಸಿತು. ನಂತರ ಘರ್ಷಣೆ ಹಿಂಸಾರೂಪ ಪಡೆಯಿತು’ ಎಂದು ಮೊರಾದಾಬಾದ್ ವಿಭಾಗೀಯ ಆಯುಕ್ತ ಆಂಜನೇಯ ಸಿಂಗ್ ಹೇಳಿದ್ದಾರೆ.
