ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ನೀಡಲು ನಿರಾಕರಿಸಿದ 2023ರ ಅಕ್ಟೋಬರ್ 17ರ ತೀರ್ಪನ್ನು ಮರುಪರಿಶೀಲಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆಯಿಂದ ನ್ಯಾಯಮೂರ್ತಿ ಸಂಜೀವ್ ಖನ್ನಾ ಹಿಂದೆ ಸರಿದಿದ್ದಾರೆ.
ಸಲಿಂಗ ವಿವಾಹಕ್ಕೆ ಸಂಬಂಧಿಸಿದ ಈ ಹಿಂದಿನ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆಯನ್ನು ಬುಧವಾರ ನಡೆಸಬೇಕಾಗಿತ್ತು. ಆದರೆ ಬುಧವಾರ ಅರ್ಜಿ ವಿಚಾರ ನಡೆದಿರಲಿಲ್ಲ. ಐವರು ನ್ಯಾಯಾಧೀಶರ ಪೀಠದ ನ್ಯಾಯಾಧೀಶರಲ್ಲಿ ಒಬ್ಬರಾದ ಸಂಜೀವ್ ಖನ್ನಾ ವಿಚಾರಣೆಯಿಂದ ಹಿಂದೆ ಸರಿದಿರುವುದೇ ಅರ್ಜಿ ವಿಚಾರಣೆ ನಡೆಯದಿರಲು ಕಾರಣ ಎಂದು ವರದಿಯಾಗಿದೆ.
ಐವರು ನ್ಯಾಯಾಧೀಶರ ಪೀಠದಲ್ಲಿದ್ದ ಸುಪ್ರೀಂ ಕೋರ್ಟ್‌ನ ಎರಡನೇ ಹಿರಿಯ ನ್ಯಾಯಾಧೀಶರಾದ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರು ವೈಯಕ್ತಿಕ ಕಾರಣವನ್ನು ಉಲ್ಲೇಖಿಸಿ ಸಲಿಂಗ ವಿವಾಹದ ಅರ್ಜಿ ವಿಚಾರಣೆಯಿಂದ ಹಿಂದೆ ಸರಿದಿದ್ದಾರೆ.
ಇದನ್ನು ಓದಿದ್ದೀರಾ? ಸಲಿಂಗ ವಿವಾಹ | ಬಹಿರಂಗ ವಿಚಾರಣೆಗಾಗಿ ಸುಪ್ರೀಂಗೆ ಅರ್ಜಿದಾರರ ಮನವಿ
ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ನೇತೃತ್ವದ ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್, ಎಸ್ ರವೀಂದ್ರ ಭಟ್, ಹಿಮಾ ಕೊಹ್ಲಿ ಮತ್ತು ಪಿ ಎಸ್ ನರಸಿಂಹ ಅವರನ್ನೊಳಗೊಂಡ ಪೀಠವು 2023ರ ಅಕ್ಟೋಬರ್‌ನಲ್ಲಿ ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ನೀಡಲು ನಿರಾಕರಿಸಿ ಆದೇಶ ನೀಡಿತ್ತು.
ನ್ಯಾಯಮೂರ್ತಿಗಳಾದ ಕೌಲ್ ಮತ್ತು ಭಟ್ ಅವರ ನಿವೃತ್ತಿಯ ನಂತರ, ನ್ಯಾಯಮೂರ್ತಿಗಳಾದ ಖನ್ನಾ ಮತ್ತು ಬಿವಿ ನಾಗರತ್ನ ಅವರನ್ನು ಒಳಗೊಂಡ ಐವರು ನ್ಯಾಯಾಧೀಶರ ಪೀಠವನ್ನು ಪುನರ್ರಚಿಸಲಾಗಿದೆ. ಪೀಠವು ಜುಲೈ 10ರಂದು ಮರುಪರಿಶೀಲನಾ ಅರ್ಜಿ ವಿಚಾರಣೆ ನಡೆಸಬೇಕಾಗಿತ್ತು.
ನ್ಯಾಯಮೂರ್ತಿ ಖನ್ನಾ ಅರ್ಜಿ ಪರಿಶೀಲನೆಯಿಂದ ಹಿಂದೆ ಸರಿದ ಕಾರಣ ಮುಖ್ಯ ನ್ಯಾಯಾಧೀಶರು ಮತ್ತೆ ಪೀಠವನ್ನು ಪುನರ್ರಚಿಸಬೇಕಾಗುತ್ತದೆ.