ಖಾಸಗಿ ಕಂಪನಿಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಕಲ್ಪಿಸುವ ಸಂಬಂಧ ರಾಜ್ಯ ಸರ್ಕಾರ ರೂಪಿಸಿದ್ದ ನೀತಿಯನ್ನು ಖಂಡಿಸಿದ್ದ ಫೋನ್‌ಪೇ ಸಿಇಒ ಮತ್ತು ಸಂಸ್ಥಾಪಕ ಸಮೀರ್ ನಿಗಮ್ ಭಾನುವಾರ, ಬೇಷರತ್ ಆಗಿ ಕನ್ನಡಿಗರ ಕ್ಷಮೆಯಾಚಿಸಿದ್ದಾರೆ.
ಕಂಪನಿಗಳ ‘ಸಿ’ ಮತ್ತು ‘ಡಿ’ ದರ್ಜೆಯ ಹುದ್ದೆಗಳಿಗೆ ಕನ್ನಡಿಗರನ್ನು ನೇಮಿಸಿಕೊಳ್ಳುವ ಸಂಬಂಧ ಸರ್ಕಾರವು ಮಸೂದೆ ಮಂಡಿಸಲು ನಿರ್ಧರಿಸಿತ್ತು. ಖಾಸಗಿ ವಲಯದಿಂದ ವ್ಯಾಪಕ ವಿರೋಧ ವ್ಯಕ್ತವಾದ್ದರಿಂದ ತಾತ್ಕಾಲಿಕವಾಗಿ ತಡೆ ಹಿಡಿದಿದೆ.
ಮಸೂದೆ ಬಗ್ಗೆ ಪ್ರತಿಕ್ರಿಯಿಸಿದ್ದ ನಿಗಮ್, ‘ಸರ್ಕಾರದ ಈ ನಿರ್ಧಾರವು ನಾಚಿಕೆಗೇಡಿನ ಸಂಗತಿಯಾಗಿದೆ’ ಎಂದು ಪ್ರತಿಕ್ರಿಯಿಸಿದ್ದರು. ಇದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡಿಗರು ಆಕ್ರೋಶ ವ್ಯಕ್ತಪಡಿಸಿದ್ದರು. ಫೋನ್ ಪೇ ಬದಲಿಗೆ ಬೇರೆ ಯುಪಿಐ ಆ್ಯಪ್ ಬಳಸುವಂತೆ ಅಭಿಯಾನ ಆರಂಭಿಸಿದ್ದರು. ‘ಬಾಯ್ಕಾಟ್ ಫೋನ್‌ಪೇ’ ಅಭಿಯಾನವು ತೀವ್ರಗೊಂಡಿತ್ತು. ಇದರಿಂದ ಎಚ್ಚೆತ್ತುಕೊಂಡಿರುವ ಸಿಇಒ ನಿಗಮ್ ಕನ್ನಡಿಗರ ಕ್ಷಮೆ ಕೋರಿದ್ದಾರೆ.
‘ಫೋನ್‌ಪೇ ಬೆಂಗಳೂರಿನಲ್ಲಿ ಆರಂಭಗೊಂಡಿತು. ಹೆಚ್ಚಿನ ಸಂಖ್ಯೆಯ ಬಳಕೆದಾರರನ್ನು ಹೊಂದಿದೆ. ಬೆಂಗಳೂರು ವಿಶ್ವದರ್ಜೆಯ ತಂತ್ರಜ್ಞಾನ ಮತ್ತು ವೈವಿಧ್ಯತೆಗೆ ಹೆಸರು ವಾಸಿಯಾಗಿರುವ ನಗರವಾಗಿದೆ. ಇಲ್ಲಿ ಫೋನ್‌ಪೇ ತನ್ನ ಬೇರುಗಳನ್ನು ಗಟ್ಟಿಯಾಗಿ ಹೊಂದಿರುವುದು ಹೆಮ್ಮೆಯ ವಿಷಯ. ‘ಕನ್ನಡಿಗರಿಗೆ ಉದ್ಯೋಗ ನೀಡುವ ಸಂಬಂಧ ಇತ್ತೀಚೆಗೆ ಮಾಧ್ಯಮಗಳಲ್ಲಿ ಪ್ರಕಟವಾಗಿದ್ದ ವರದಿಗಳನ್ನು ಓದಿದೆ. ಇದಕ್ಕೆ ಅನುಗುಣವಾಗಿ ಪ್ರತಿಕ್ರಿಯೆ ನೀಡಿದ್ದೇನೆ. ಕರ್ನಾಟಕ ಮತ್ತು ಕನ್ನಡಿಗರ ಭಾವನೆಗಳಿಗೆ ನೋವುಂಟು ಮಾಡುವ ಯಾವುದೇ ಉದ್ದೇಶ ಹೊಂದಿಲ್ಲ’ ಎಂದು ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ಕನ್ನಡ ವಿರೋಧಿ ಫೋನ್ ಪೇ ವಿರುದ್ಧ ನಟ ಸುದೀಪ್ ಆಕ್ರೋಶ: ರಾಯಭಾರಿ ಒಪ್ಪಂದದಿಂದ ಹೊರಬರುವ ಸೂಚನೆ?
‘ನನಗೆ ಕನ್ನಡ ಸೇರಿ ದೇಶದ ಎಲ್ಲ ಭಾರತೀಯ ಭಾಷೆಗಳ ಬಗ್ಗೆ ಅತೀವ ಗೌರವವಿದೆ. ಭಾಷಾ ವೈವಿಧ್ಯತೆ ಮತ್ತು ಸಾಂಸ್ಕೃತಿಕ ಶ್ರೀಮಂತಿಕೆ, ಪರಂಪರೆಯು ದೇಶದ ಆಸ್ತಿಯಾಗಿದೆ. ಇದಕ್ಕೆ ಎಲ್ಲ ಭಾರತೀಯರು ಹೆಮ್ಮೆಪಡಬೇಕಿದೆ’ ಎಂದು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಆರಂಭಗೊಂಡ ಫೋನ್‌ಪೇ ಕಂಪನಿಯ ಬೇರುಗಳು ದೇಶದಾದ್ಯಂತ ವಿಸ್ತರಿಸಿವೆ. 55 ಕೋಟಿಗೂ ಹೆಚ್ಚು ಬಳಕೆದಾರರ ಸುರಕ್ಷಿತ ಡಿಜಿಟಲ್ ಪಾವತಿಗೆ ನೆರವಾಗಿದೆ ಎಂದು ಹೇಳಿದ್ದಾರೆ.
‘ಬೆಂಗಳೂರು ಸೇರಿ ಕರ್ನಾಟಕದಾದ್ಯಂತ ಕನ್ನಡಿಗರಿಗೆ ಲಕ್ಷಾಂತರ ಉದ್ಯೋಗ ಗಳನ್ನು ಸೃಷ್ಟಿಸಲು ನಾನು ಸಹಾಯ ಮಾಡಲು ಸಿದ್ಧ. ಸುಸ್ಥಿರವಾದ ಉದ್ಯೋಗದ ದಾರಿಯನ್ನು ಸೃಷ್ಟಿಸ ಬೇಕಿದೆ. ಇದಕ್ಕಾಗಿ ಎಲ್ಲರೂ ಒಟ್ಟಾಗಿ ಕೆಲಸ ನಿರ್ವಹಿಸಬೇಕಿದೆ’ ಎಂದಿದ್ದಾರೆ.
ಕನ್ನಡಿಗರಿಗೆ ಮೀಸಲಾತಿ ನಿಡಬೇಕೆಂದು ಮಸೂದೆ ಮಂಡಿಸಲು ರಾಜ್ಯ ಸರ್ಕಾರ ಮುಂದಾಗಿದ್ದ ಸಂದರ್ಭದಲ್ಲಿ ಫೋನ್‌ಪೇ ಸಿಇಒ ಸಮೀರ್ ನಿಗಮ್ ಸರ್ಕಾರದ ಕ್ರಮವನ್ನು ಟೀಕಿಸಿದ್ದರು.
“ನನಗೆ 46 ವರ್ಷ ವಯಸ್ಸು. 15 ವರ್ಷಗಳಿಗೂ ಹೆಚ್ಚು ಕಾಲ ಈ ರಾಜ್ಯದಲ್ಲಿ ವಾಸಿಸಲಿಲ್ಲ. ನಮ್ಮ ತಂದೆ ಭಾರತೀಯ ನೌಕಾಪಡೆಯಲ್ಲಿ ಸೇವೆ ಸಲ್ಲಿಸಿದ್ದವರು. ದೇಶದ ಎಲ್ಲ ಕಡೆ ನಿಯೋಜಿತರಾಗಿದ್ದವರು.ಇವರ ಮಕ್ಕಳು ಕರ್ನಾಟಕದ ಉದ್ಯೋಗಕ್ಕೆ ಅರ್ಹರಿಲ್ಲವೆ? ನಾನು ಹಲವು ಕಂಪನಿಗಳನ್ನು ನಿರ್ಮಿಸಿದ್ದೇನೆ. ದೇಶಾದ್ಯಂತ 25 ಸಾವಿರಕ್ಕೂ ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸಿದ್ದೇನೆ. ನನ್ನ ಮಕ್ಕಳು ತಮ್ಮ ತವರು ನಗರದಲ್ಲಿ ಉದ್ಯೋಗಕ್ಕೆ ಅರ್ಹರಿಲ್ಲವೆ? ಸರ್ಕಾರದ ಈ ನಿರ್ಧಾರವು ನಾಚಿಕೆಗೇಡಿನ ಸಂಗತಿಯಾಗಿದೆ” ಎಂದು ಹೇಳಿದ್ದರು.
ಸಮೀರ್ ನಿಗಮ್ ಈ ಹೇಳಿಕೆಗೆ ಸಾಮಾಜಿಕ ಜಾಲತಾಣ ಸೇರಿದಂತೆ ಹಲವು ಕಡೆಯಿಂದ ಕನ್ನಡಿಗರು ಆಕ್ರೋಶ ವ್ಯಕ್ತಪಡಿಸಿದ್ದರು.