ಕೇರಳ ವಿಧಾನಸಭಾ ಫಲಿತಾಂಶ ಪ್ರಕಟವಾಗಿ, ಕಾಂಗ್ರೆಸ್ ನೇತೃತ್ವದ ಯುಡಿಎಫ್ ಭರ್ಜರಿ ಜಯ ಗಳಿಸಿದ ಬಳಿಕ ಎದುರಾಗಿದ್ದ ಮುಖ್ಯಮಂತ್ರಿ ಆಯ್ಕೆ ಸವಾಲಿಗೆ ತೆರೆಬಿದ್ದಿದೆ. ಹಿಂದಿನ ಸರ್ಕಾರದ ಅವಧಿಯಲ್ಲಿ ವಿಪಕ್ಷ ನಾಯಕರಾಗಿದ್ದ ಕಾಂಗ್ರೆಸ್ ನಾಯಕ ವಿ.ಡಿ ಸತೀಶನ್ ಅವರನ್ನು ಮುಖ್ಯಮಂತ್ರಿ ಹುದ್ದೆಗೆ ಆಯ್ಕೆ ಮಾಡಲಾಗಿದೆ. ಸತೀಶನ್ ಅವರ ನಾಯಕತ್ವಕ್ಕೆ ಕಾಂಗ್ರೆಸ್ ಹೈಕಮಾಂಡ್ ಮನ್ನಣೆ ನೀಡಿದೆ.
ಚುನಾವಣಾ ಫಲಿತಾಂಶದ ನಂತರ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಸತೀಶನ್ ಅವರ ಹೆಸರನ್ನು ಸರ್ವಾನುಮತದಿಂದ ಸೂಚಿಸಲಾಗಿದೆ. ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಉಮ್ಮನ್ ಚಾಂಡಿ ಮತ್ತು ರಮೇಶ್ ಚೆನ್ನಿತ್ತಲ ಅವರಂತಹ ಹಿರಿಯ ನಾಯಕರ ಮಾರ್ಗದರ್ಶನದೊಂದಿಗೆ ಕೇರಳದಲ್ಲಿ ಪಕ್ಷವನ್ನು ಹೊಸ ತಲೆಮಾರಿನ ನಾಯಕತ್ವಕ್ಕೆ ಒಪ್ಪಿಸಬೇಕು ಎಂದು ಕಾಂಗ್ರೆಸ್ ಹೈಕಮಾಂಡ್ ನಿರ್ಧರಿಸಿದೆ. ಅದರಂತೆ, ಸತೀಶನ್ ಅವರನ್ನು ಮುಖ್ಯಮಂತ್ರಿ ಹುದ್ದೆಗೆ ಆಯ್ಕೆ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಸತೀಶನ್ ಅವರ ಆಯ್ಕೆಯು ಕೇರಳ ಕಾಂಗ್ರೆಸ್‌ನಲ್ಲಿ ‘ಯುವ ಪರ್ವ’ದ ಆರಂಭವೆಂದು ಕೆಲವರು ಬಣ್ಣಿಸಿದ್ದಾರೆ. ಸುದೀರ್ಘ ಕಾಲದ ನಂತರ ಕಾಂಗ್ರೆಸ್ ತನ್ನ ಸಾಂಪ್ರದಾಯಿಕ ಶೈಲಿಯಿಂದ ಹೊರಬಂದು, ಸಂಸದೀಯ ಅನುಭವ ಹೊಂದಿರುವ ಕ್ರಿಯಾಶೀಲ ನಾಯಕನಿಗೆ ಮನ್ನಣೆ ನೀಡಿರುವುದು ರಾಜ್ಯದ ರಾಜಕೀಯದಲ್ಲಿ ಹೊಸ ಅಧ್ಯಾಯ ಬರೆಯಲಿದೆ ಎಂದು ಕಾಂಗ್ರೆಸ್ಸಿಗರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಪರವೂರ್ ಕ್ಷೇತ್ರದಿಂದ ಸತತ ಐದು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಸತೀಶನ್ ಅವರು ತಳಮಟ್ಟದ ರಾಜಕಾರಣದಿಂದ ಬೆಳೆದುಬಂದವರು. ವಿಧಾನಸಭೆಯಲ್ಲಿ ಅತಿ ಹೆಚ್ಚು ಅಧ್ಯಯನಪೂರ್ಣ ಭಾಷಣಗಳನ್ನು ಮಾಡುವ ಮೂಲಕ ಸತೀಶನ್ ಅವರು ರಾಜ್ಯದ ಗಮನ ಸೆಳೆದಿದ್ದರು. ಹಿಂದಿನ ಸರ್ಕಾರದ ಅವಧಿಯಲ್ಲಿ ವಿರೋಧ ಪಕ್ಷದ ನಾಯಕರಾಗಿ ಅವರು ನಿರಂತರ ಹೋರಾಟಗಳನ್ನು ನಡೆಸುವುದರಿಂದ, ಜನಪ್ರಿಯತೆಯನ್ನೂ ಗಳಿಸಿದ್ದರು.
ಈ ಲೇಖನ ಓದಿದ್ದೀರಾ?: ತಮಿಳುನಾಡು | ವಿಜಯ್ ಸರ್ಕಾರಕ್ಕೆ AIADMK ಬಂಡಾಯ ಬಣ ಬೆಂಬಲ; ಮೋದಿ-ಶಾ ಕುತಂತ್ರವೇ?
ಸದ್ಯ, ಕೇರಳವು ಪ್ರಸ್ತುತ ಆರ್ಥಿಕ ಸಂಕಷ್ಟ ಮತ್ತು ಪರಿಸರ ವೈಪರೀತ್ಯದಂತಹ ಸವಾಲುಗಳನ್ನು ಎದುರಿಸುತ್ತಿದ್ದು, ಸತೀಶನ್ ಅವರು ಸಂಕೀರ್ಣ ಪರಿಸ್ಥಿತಿಯಲ್ಲಿ ಆಡಳಿತದ ಚುಕ್ಕಾಣಿ ಹಿಡಿದಿದ್ದಾರೆ. ರಾಜ್ಯದ ಸಾಲದ ಹೊರೆಯನ್ನು ತಗ್ಗಿಸುವುದು ಮತ್ತು ಕೃಷಿ ವಲಯಕ್ಕೆ ಮರುಚೈತನ್ಯ ನೀಡುವುದು ಅವರ ಮೊದಲ ಆದ್ಯತೆಯಾಗಿದೆ.
ಜೊತೆಗೆ, ಶಬರಿಮಲೆ ವಿಚಾರವನ್ನು ಮುಂದಿಟ್ಟುಕೊಂಡು ಆರ್‌ಎಸ್‌ಎಸ್/ಬಿಜೆಪಿ ಕೋಮುದ್ವೇಷ ಮತ್ತು ಲಿಂಗ ತಾರತಮ್ಯವನ್ನು ಹೇರಲು ಹವಣಿಸುತ್ತಿರುವ ಸಮಯದಲ್ಲಿ ಸಾಮಾಜಿಕ ಸಾಮರಸ್ಯ ಕಾಪಾಡುವುದು ಅವರ ಮುಂದಿರುವ ದೊಡ್ಡ ಸವಾಲುಗಳಲ್ಲಿ ಒಂದಾಗಿದೆ. ಡಿಎಫ್ ಮೈತ್ರಿಕೂಟದಲ್ಲಿರುವ ಮುಸ್ಲಿಂ ಲೀಗ್ ಸೇರಿದಂತೆ ಇತರ ಮಿತ್ರಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸುಸ್ಥಿರ ಆಡಳಿತ ನೀಡುವುದು ಅನಿವಾರ್ಯವಾಗಿದೆ.



