ತಮಿಳುನಾಡು ವಿಧಾನಸಭೆಯಲ್ಲಿ ಬಹುಮತಕ್ಕೆ 118 ಸ್ಥಾನಗಳ ಅಗತ್ಯವಿದೆ. ವಿಜಯ್ ಅವರು ತಮ್ಮ (ಟಿವಿಕೆ) 107 ಶಾಸಕರು, ಕಾಂಗ್ರೆಸ್ (5), ಐಯುಎಂಎಲ್ (2), ವಿಸಿಕೆ (2), ಎಡ ಪಕ್ಷಗಳ (4) ಬೆಂಬಲದೊಂದಿಗೆ ಸರ್ಕಾರ ರಚಿಸಲು ಮುಂದಾಗಿದ್ದರು. ಈಗ, ಎಐಎಡಿಎಂಕೆ ಬಂಡಾಯ ಬಣವೂ ಬೆಂಬಲ ನೀಡಿದ್ದು, ವಿಜಯ್ ಸರ್ಕಾರವು 144 ಶಾಸಕರ ಬೆಂಬಲವನ್ನು ಗಳಿಸಿಕೊಂಡಿದೆ.
ಕಳೆದ ತಮಿಳುನಾಡು ವಿಧಾನಸಭೆಯಲ್ಲಿ ಪ್ರಮುಖ ವಿರೋಧ ಪಕ್ಷವಾಗಿದ್ದ ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ (AIADMK), ಸಂಸತ್ ಚುನಾವಣೆಯೂ ಸೇರಿ ನಾನಾ ಚುನಾವಣೆಗಳಲ್ಲಿ ನಿರಂತರ ಸೋಲು ಕಂಡಿದೆ. ಹಿನ್ನಡೆ ಅನುಭವಿಸುತ್ತಲೇ ಬಂದಿದೆ. ಇದೀಗ, ಪಕ್ಷವು ವಿಭಜನೆಯಾಗಿದೆ. ಪಕ್ಷದ 47 ಮಂದಿ ಶಾಸಕರಲ್ಲಿ 30 ಶಾಸಕರು ವಿ. ಷಣ್ಮುಗಂ ಮತ್ತು ಎಸ್.ಪಿ. ವೇಲುಮಣಿ ನೇತೃತ್ವದಲ್ಲಿ ಪಕ್ಷದಿಂದ ವಿಭಜನೆಗೊಂಡಿದ್ದಾರೆ. ಅವರೆಲ್ಲರೂ ನೂತನ ಮುಖ್ಯಮಂತ್ರಿ, ಟಿವಿಕೆ ನಾಯಕ ಜೋಸೆಫ್ ವಿಜಯ್ ಅವರ ಸರ್ಕಾರಕ್ಕೆ ಬೆಂಬಲ ನೀಡಿದ್ದಾರೆ. ವಿಜಯ್ ಸರ್ಕಾರವನ್ನು ಬಲಪಡಿಸಿದ್ದಾರೆ.
ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಅವರ ನಾಯಕತ್ವದ ವಿರುದ್ಧ ಈ ಬಂಡಾಯ ಶಾಸಕರು ಅಸಮಾಧಾನಗೊಂಡಿದ್ದರು. ‘ಪಳನಿಸ್ವಾಮಿ ಅವರು ಡಿಎಂಕೆ ಜೊತೆ ಗೂಡಿ ಸರ್ಕಾರ ರಚಿಸಲು ಮುಂದಾಗಿದ್ದರು. ಅವರ ನಡೆ ತಮ್ಮ ಪಕ್ಷದ ಐತಿಹ್ಯಕ್ಕೆ ವಿರುದ್ಧವಾಗಿದೆ’ ಎಂದು ಷಣ್ಮುಗಂ ಮತ್ತು ವೇಲುಮಣಿ ಆರೋಪಿಸಿದ್ದಾರೆ. ಎಐಎಡಿಎಂಕೆಯಲ್ಲಿ ಈ ವಿಭಜನೆಯು ಜಯಲಲಿತಾ ಕಾಲದ ನಂತರ ಸಂಭವಿಸಿರುವ ಅತಿದೊಡ್ಡ ಬಿರುಕು ಎಂದು ರಾಜಕೀಯ ವಿಶ್ಲೇಷಕರು ಹೇಳುತ್ತಿದ್ದಾರೆ. ಎಐಎಡಿಎಂಕೆಯ ಬಂಡಾಯ ಬಣವು ವೇಲುಮಣಿ ಅವರನ್ನು ತಮ್ಮ ಶಾಸಕಾಂಗ ಪಕ್ಷದ ನಾಯಕನೆಂದು ಘೋಷಿಸಿದೆ. ವಿಜಯ್ ಸರ್ಕಾರಕ್ಕೆ ಬೆಂಬಲ ನೀಡಿದೆ.
ತಮಿಳುನಾಡು ವಿಧಾನಸಭೆಯಲ್ಲಿ ಬಹುಮತಕ್ಕೆ 118 ಸ್ಥಾನಗಳ ಅಗತ್ಯವಿದೆ. ವಿಜಯ್ ಅವರು ತಮ್ಮ (ಟಿವಿಕೆ) 107 ಶಾಸಕರು, ಕಾಂಗ್ರೆಸ್ (5), ಐಯುಎಂಎಲ್ (2), ವಿಸಿಕೆ (2), ಎಡ ಪಕ್ಷಗಳ (4) ಬೆಂಬಲದೊಂದಿಗೆ ಸರ್ಕಾರ ರಚಿಸಲು ಮುಂದಾಗಿದ್ದರು. ಈಗ, ಎಐಎಡಿಎಂಕೆ ಬಂಡಾಯ ಬಣವೂ ಬೆಂಬಲ ನೀಡಿದ್ದು, ವಿಜಯ್ ಸರ್ಕಾರವು 144 ಶಾಸಕರ ಬೆಂಬಲವನ್ನು ಗಳಿಸಿಕೊಂಡಿದೆ.
ಆದಾಗ್ಯೂ, ಈ ಬಂಡಾಯ ಮತ್ತು ಬೆಂಬಲವು ಕೇವಲ ಎಐಎಡಿಎಂಕೆ ಒಳಗಿನ ಆಂತರಿಕ ಬಂಡಾಯದ ಫಲವಲ್ಲ. ಇಂದೊಂದು, ದೆಹಲಿಯಿಂದ ನಿಯಂತ್ರಿತ ನಾಟಕ. ಮೋದಿ-ಶಾ ನೇತೃತ್ವದ ಬಿಜೆಪಿ ದಕ್ಷಿಣ ಭಾರತದ ದ್ರಾವಿಡ ಕೋಟೆಯಲ್ಲಿ ಬಿರುಕು ಮೂಡಿಸಲು ಎಐಎಡಿಎಂಕೆಯನ್ನು ವಿಭಜಿಸಿದೆ ಎಂಬ ಮಾತುಗಳು/ಆರೋಪಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ.
ಈ ಲೇಖನ ಓದಿದ್ದೀರಾ?: ಅನುದಾನ ಬೇಕಂದ್ರೆ ಬಿಜೆಪಿ ಸೇರಬೇಕಾ; ದಕ್ಷಿಣದ ರಾಜ್ಯಗಳಿಗೆ ಮೋದಿ ಕೊಟ್ರಾ ಎಚ್ಚರಿಕೆ?
ಉತ್ತರ ಭಾರತದಲ್ಲಿ ತಮ್ಮ ಕಬ್ಬಿಣದ ಕಡಲೆಯಂತಿದ್ದ ಪಶ್ಚಿಮ ಬಂಗಾಳವನ್ನು ತಂತ್ರ-ಕುತಂತ್ರಗಳಿಂದ ಗೆದ್ದಿರುವ ಬಿಜೆಪಿ, ದ್ರಾವಿಡ ನೆಲದಲ್ಲಿಯೂ ತನ್ನ ಪ್ರಭಾವವನ್ನು ಬೆಳೆಸಿಕೊಳ್ಳಲು ಮತ್ತು ನಿಯಂತ್ರಣ ಸಾಧಿಸಲು ಹವಣಿಸುತ್ತಿದೆ. ಎಐಎಡಿಎಂಕೆ ಜೊತೆ ಮೈತ್ರಿ ಹೊಂದಿದ್ದರೂ, ತಮಿಳುನಾಡಿನಲ್ಲಿ ಬಿಜೆಪಿ ತನ್ನ ನೆಲೆ ಕಂಡುಕೊಳ್ಳಲು ಸಾಧ್ಯವಾಗಿಲ್ಲ. ಆದ್ದರಿಂದ, ಪ್ರಸ್ತುತ ವಿಧಾನಸಭೆಯಲ್ಲಿ ದ್ರಾವಿಡ ಪಕ್ಷಗಳಾದ ಡಿಎಂಕೆ ಮತ್ತು ಎಐಎಡಿಎಂಕೆ ದುರ್ಬಲಗೊಂಡಿರುವ ಈ ಸಂದರ್ಭವನ್ನು ಬಳಸಿಕೊಂಡು ಬಿಜೆಪಿ ತನ್ನ ಪ್ರಭಾವ ಹೆಚ್ಚಿಸಲು ತಂತ್ರ ರೂಪಿಸಿದೆ. ಅದರಂತೆ, ವಿಜಯ್ ಸರ್ಕಾರವನ್ನು ಒಳಗಿನಿಂದಲೇ ನಿಯಂತ್ರಣಕ್ಕೆ ತೆಗೆದುಕೊಳ್ಳುವ ಕುತಂತ್ರ ಹೆಣೆದಿದೆ ಎನ್ನಲಾಗುತ್ತಿದೆ.
ಕೆಲವು ವರದಿಗಳ ಪ್ರಕಾರ, ಕಾರ್ಪೊರೇಟ್ ಶಕ್ತಿಗಳು ಮತ್ತು ಮೋದಿ-ಶಾ ಜೊತೆಗಿನ ಸಾಮೀಪ್ಯವುಳ್ಳವರು ಬಂಡಾಯವನ್ನು ಚುರುಕುಗೊಳಿಸಿದ್ದಾರೆ ಎಂದು ಹೇಳಲಾಗುತ್ತಿದೆ. ವಿಜಯ್ ಅವರ ಸರ್ಕಾರದೊಳಗೆ ತಮ್ಮ ಕೈಗೊಂಬೆಗಳನ್ನು ಕೂರಿಸಿ, ಒಳಗಿನಿಂದಲೇ ಸರ್ಕಾರದ ಮೇಲೆ ಒತ್ತಡ ಹೇರುವುದು, ವಿಜಯ್ ಅವರ ನೀತಿ-ನಿಯಮ-ಯೋಜನೆಗಳ ಮೇಲೆ ಪರಿಣಾಮ ಬೀರುವುದು ಹಾಗೂ ನಿಧಾನವಾಗಿ ಸರ್ಕಾರವನ್ನು ಮೋದಿ-ಶಾ ನಿಯಂತ್ರಣಕ್ಕೆ ಬರುವಂತೆ ಮಾಡುವ ಆಕ್ರಮಣಕ್ಕೆ ಬಿಜೆಪಿ ಈ ತಂತ್ರ ಹೆಣೆದಿದೆ. ಅದಕ್ಕಾಗಿ, ಎಐಎಡಿಎಂಕೆಯನ್ನು ವಿಭಜಿಸಿ, ವಿಜಯ್ ಸರ್ಕಾರವನ್ನು ಬೆಂಬಲಿಸಿ, ಸರ್ಕಾರದೊಳಗೆ ತಮ್ಮವರನ್ನು ಪ್ರತಿಷ್ಠಾಪಿಸುತ್ತಿದೆ ಎಂಬ ಅಭಿಪ್ರಾಯಗಳಿವೆ.



