ಸಾವರ್ಕರ್ ಭಾರತ ಮಾತೆಯ ಹೆಮ್ಮೆಯ ಪುತ್ರ. ಅವರ ಧೈರ್ಯ ಮತ್ತು ಹೋರಾಟದ ಸಾಹಸಗಾಥೆಯನ್ನ ದೇಶ ಯಾವತ್ತಿಗೂ ಮರೆಯುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಮೇ 28ರಂದು ಸಾವರ್ಕರ್ ಜನ್ಮದಿನವಾಗಿದ್ದು, ಮೋದಿ ಅವರು ಸಾಮಾಜಿಕ ಜಾಲತಾಣದಲ್ಲಿ ಸಾವರ್ಕರ್ ಕುರಿತು ಪೋಸ್ಟ್ ಹಂಚಿಕೊಂಡಿದ್ದಾರೆ. “ಬ್ರಿಟಿಷರು ಅತ್ಯಂತ ಕಠಿಣ ಶಿಕ್ಷೆ, ಚಿತ್ರಹಿಂಸೆ ನೀಡಿದರೂ, ಸಾವರ್ಕರ್ ಅವರ ಮಾತೃಭೂಮಿಯ ಮೇಲಿನ ಸಮರ್ಪಣೆಯನ್ನು ಕುಗ್ಗಿಸಲು ಬ್ರಿಟಿಷರಿಗೆ ಆಗಲಿಲ್ಲ. ಭಾರತ ಮಾತೆಯ ಹೆಮ್ಮೆಯ ಪುತ್ರ ಸಾವರ್ಕರ್. ಸಾವರ್ಕರ್ ಅವರ ತ್ಯಾಗ ಮತ್ತು ಬದ್ಧತೆಯು ಭಾರತದ ಅಭಿವೃದ್ಧಿಗೆ ದಾರಿ ದೀಪವಾಗಿದೆ” ಎಂದಿದ್ದಾರೆ.
ಅಂದಹಾಗೆ, ಸಾವರ್ಕರ್ ಅವರನ್ನು ಬ್ರಿಟಿಷರು 1910ರಲ್ಲಿ ಬಂಧಿಸಿ, ಅಂಡಮಾನ್‌ನ ಕಾಲಾಪಾನಿ ಜೈಲಿನಲ್ಲಿಟ್ಟಿದ್ದರು. ಜೈಲಿನಲ್ಲಿದ್ದ ಸಾವರ್ಕರ್ 1911, 1913 ಮತ್ತು ನಂತರದ ವರ್ಷಗಳಲ್ಲಿ ಬ್ರಿಟಿಷ್ ಸರ್ಕಾರಕ್ಕೆ ಕ್ಷಮಾಪಣೆ ಪತ್ರಗಳನ್ನು ಬರೆದಿದ್ದರು. ಅಲ್ಲದೆ, ತಮ್ಮನ್ನು ಬಿಡುಗಡೆ ಮಾಡಿದರೆ, ಮುಂದೆ ಎಂದಿಗೂ ಬ್ರಿಟಿಷ್ ಸರ್ಕಾರದ ವಿರುದ್ಧದ ಹೋರಾಟ/ಚಳವಳಿಗಳಲ್ಲಿ ತೊಡಗುವುದಿಲ್ಲ ಎಂದು ಕ್ಷಮಾಪಣೆ ಪತ್ರದಲ್ಲಿ ಬರೆದಿದ್ದರು. ಬ್ರಿಟಿಷರ ಕೃಪೆಯಿಂದ ಜೈಲಿನಿಂದ ಹೊರಬಂದ ಸಾವರ್ಕರ್ ಸ್ವಾತಂತ್ರ್ಯ ಚಳವಳಿಯಿಂದ ಹಿಂದೆ ಸರಿದು, ಕೋಮುವಾದಿ ಸಿದ್ಧಾಂತವನ್ನು ಭಾರತದಲ್ಲಿ ಹುಟ್ಟುಹಾಕಿದರು. ಬ್ರಿಟಿಷರ ಬದಲಿಗೆ ಮುಸ್ಲಿಮರನ್ನು ತಮ್ಮ ಶತ್ರುಗಳೆಂಬ ಪ್ರತಿಪಾದನೆಯನ್ನು ಹುಟ್ಟುಹಾಕಿದರು. ಭಾರತದಲ್ಲಿ ಕೋಮುದ್ವೇಷ ಹರಡಲು ಮೂಲ ಕಾರಣ ಸಾವರ್ಕರ್ ಮತ್ತು ಗೋಳ್ವಾಲ್ಕರ್ ಎಂದು ಆರೋಪಿಸಲಾಗಿದೆ. ಹೀಗಾಗಿ, ಸಾವರ್ಕರ್ ವೀರ ಅಲ್ಲ, ಕ್ಷಮೆ ಕೇಳಿದ ಹೇಡಿ ಎಂದು ಬಲಪಂಥೀಯ ವಾದದ ವಿರೋಧಿಗಳು ಬಣ್ಣಿಸಿದ್ದಾರೆ.