ಚುನಾವಣಾ ಬಾಂಡ್ ಗಳ ಯೋಜನೆಯ ಸಿಂಧುತ್ವದ ಬಗ್ಗೆ ಪ್ರಶ್ನಿಸಿದ್ದ ಅರ್ಜಿಗಳ ಒಂದು ಬ್ಯಾಚ್‌ನ ಬಗ್ಗೆ ಸುಪ್ರೀಂ ಕೋರ್ಟ್ ಗುರುವಾರ(ಏ.18) ತೀರ್ಪು ಪ್ರಕಟಿಸಲಿದೆ.
ಇದೇ ವಿಷಯವಾಗಿ ಕಳೆದ ವರ್ಷದ ನವೆಂಬರ್ 2 ರಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ನೇತೃತ್ವದ ಐವರು ನ್ಯಾಯಮೂರ್ತಿಗಳ ಪೀಠ ತೀರ್ಪನ್ನು ಕಾಯ್ದಿರಿಸಿತ್ತು.
ಈ ಯೋಜನೆಯ ಬಗ್ಗೆ ಕೇಂದ್ರ ಸರ್ಕಾರವು ಜನವರಿ 2, 2018ರಂದು ಅಧಿಸೂಚನೆ ಹೊರಡಿಸಿದ್ದು, ರಾಜಕೀಯ ಪಕ್ಷಗಳಿಗೆ ನೀಡುವ ದೇಣಿಗೆಯಲ್ಲಿ ಪಾರದರ್ಶಕತೆಯನ್ನು ತರುವ ನಿಟ್ಟಿನಲ್ಲಿ ನಗದು ನೆರವು ನೀಡುವ ಪರ್ಯಾಯವಾಗಿ ಚುನಾವಣಾ ಬಾಂಡ್ ಯೋಜನೆಯನ್ನು ಆರಂಭಿಸಲಾಗಿತ್ತು.
ಯೋಜನೆಯ ನಿಯಮಾವಳಿಗಳ ಅನ್ವಯ,ದೇಶದ ಯಾವುದೇ ಪ್ರಜೆ ಅಥವಾ ದೇಶದಲ್ಲಿ ಸ್ಥಾಪಿತವಾದ ಸಂಸ್ಥೆ ಚುನಾವಣಾ ಬಾಂಡ್‌ಗಳನ್ನು ಖರೀದಿಸಬಹುದಾಗಿತ್ತು. ವೈಯಕ್ತಿಕವಾಗಿ ಅಥವಾ ಇತರರೊಂದಿಗೆ ಜಂಟಿಯಾಗಿ ಚುನಾವಣಾ ಬಾಂಡ್ಗಳನ್ನು ಖರೀದಿಸಬಹುದಿತ್ತು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಬಯಲಾಗುತ್ತಿರುವ ಸುಳ್ಳುಗಳು, ಬೆತ್ತಲಾಗುತ್ತಿರುವ ಬಿಜೆಪಿ
1951ನೇ ಜನಪ್ರತಿನಿಧಿ ಕಾಯ್ದೆಯ ಸೆಕ್ಷನ್ 29ಎ ಅಡಿಯಲ್ಲಿ ಕಳೆದ ಲೋಕಸಭಾ ಹಾಗೂ ವಿಧಾನಸಭಾ ಚುನಾವಣೆಗಳಲ್ಲಿ ಶೇ.1 ರಷ್ಟು ಮತ ಪಡೆದ ನೋಂದಾಯಿಸಲಾದ ರಾಜಕೀಯ ಪಕ್ಷಗಳು ಮಾತ್ರ ಚುನಾವಣಾ ಬಾಂಡ್‌ಗಳನ್ನು ಸ್ವೀಕರಿಸಲು ಅರ್ಹವಾಗಿದ್ದವು.
ಅಧಿಸೂಚನೆಯ ಪ್ರಕಾರ, ಅರ್ಹತೆ ಹೊಂದಿದ ರಾಜಕೀಯ ಪಕ್ಷಗಳು ಚುನಾವಣಾ ಬಾಂಡ್‌ಗಳನ್ನು ಅಧಿಕೃತ ಬ್ಯಾಂಕ್‌ಗಳ ಮೂಲಕ ನಗದನ್ನಾಗಿ ಸ್ವೀಕರಿಸಬಹುದಾಗಿತ್ತು.
ಆದಾಗ್ಯೂ 2019ರ ಏಪ್ರಿಲ್‌ನಲ್ಲಿ , ಅರ್ಜಿಗಳನ್ನು ಸುದೀರ್ಘವಾಗಿ ವಿಚಾರಣೆ ನಡೆಸದೆ ಚುನಾವಣಾ ಬಾಂಡ್‌ಗಳ ಯೋಜನೆಗೆ ತಡೆ ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿತ್ತು.
ನಂತರದಲ್ಲಿ ಕಳೆದ ವರ್ಷದ ಅಕ್ಟೋಬರ್ 31ರಂದು ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ, ಬಿ ಆರ್ ಗವಾಯಿ, ಜೆ ಬಿ ಪರ್ದಿವಾಲಾ ಹಾಗೂ ಮನೋಜ್ ಮಿಶ್ರಾ ಅವರನ್ನು ಒಳಗೊಂಡ ಸಾಂವಿಧಾನಿಕ ಪೀಠ ಕಾಂಗ್ರೆಸ್‌ನ ಜಯಾ ಠಾಕೂರ್, ಸಿಪಿಎಂ ಹಾಗೂ ಎನ್‌ಜಿಒ ಸಂಸ್ಥೆ ಎಡಿಆರ್ ಒಳಗೊಂಡ ಸಂಸ್ಥೆಗಳು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆಯ ವಾದಗಳನ್ನು ಆಲಿಸಿತ್ತು.
ಈ ವಿಚಾರಣೆಯ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ಚುನಾವಣಾ ಪ್ರಕ್ರಿಯೆಗಳಲ್ಲಿ ನಗದು ಹಣವನ್ನು ಕಡಿಮೆ ಮಾಡುವ ಅಗತ್ಯತೆಯನ್ನು ಒತ್ತಿ ಹೇಳಿತ್ತು.
