ಜಮ್ಮು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಮುಖ್ಯ ಶಿಕ್ಷಣಾಧಿಕಾರಿ (ಸಿಇಒ) ಶಿಕ್ಷಣ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರು ಮತ್ತು ಶಿಕ್ಷಕೇತರ ಸಿಬ್ಬಂದಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಸರ್ಕಾರಿ ನೀತಿಗಳನ್ನು ಟೀಕಿಸದಂತೆ ಸೂಚನೆ ನೀಡಿದ್ದಾರೆ. ಈ ನಿಯಮವನ್ನು ಉಲ್ಲಂಘಿಸಿದರೆ ಶಿಸ್ತು ಕ್ರಮ, ಸೇವೆಯಿಂದ ವಜಾಗೊಳಿಸುವಿಕೆ ಸೇರಿದಂತೆ ಕಠಿಣ ಕ್ರಮಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ.
ಶನಿವಾರ ಬಿಡುಗಡೆಯಾದ ಸುತ್ತೋಲೆಯಲ್ಲಿ, ಶಿಕ್ಷಣ ಇಲಾಖೆಯ ಎಲ್ಲಾ ಉದ್ಯೋಗಿಗಳು ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಮತ್ತು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ “ಅನಗತ್ಯ ಚರ್ಚೆ, ವಿವಾದಗಳಲ್ಲಿ ಭಾಗವಹಿಸುವುದು, ಅನುಚಿತ ವಿಷಯವನ್ನು ಹಂಚಿಕೊಳ್ಳುವುದು, ಕಾಮೆಂಟ್ ಮಾಡುವುದು ಅಥವಾ ಪೋಸ್ಟ್ ಮಾಡುವುದನ್ನು” ತಪ್ಪಿಸಬೇಕು ಎಂದು ಸಿಇಒ ಆದೇಶಿಸಿದ್ದಾರೆ.
ಪುಲ್ವಾಮಾದ ಶಾಸಕ ಮತ್ತು ಪಿಡಿಪಿ ನಾಯಕ ವಾಹೀದ್ ಪಾರಾ ಈ ಆದೇಶವನ್ನು ತೀವ್ರವಾಗಿ ಖಂಡಿಸಿದ್ದಾರೆ. “ಈ ಆದೇಶವು ಜನರ ಧ್ವನಿಯನ್ನು ಎತ್ತುವುದನ್ನು ತಡೆಯುತ್ತದೆ” ಎಂದು ಆಕ್ಷೇಪಿಸಿದ ಅವರು, ಜಮ್ಮು ಮತ್ತು ಕಾಶ್ಮೀರದಲ್ಲಿ ಈಗಾಗಲೇ ಮೌನವಾಗಿರುವ ವಾತಾವರಣದಲ್ಲಿ, ಶಿಕ್ಷಕರು ಮತ್ತು ಸರ್ಕಾರಿ ಸಿಬ್ಬಂದಿಯ ಧ್ವನಿಯನ್ನು ದಮನ ಮಾಡುವ ಈ ಕ್ರಮ ಆತಂಕಕಾರಿ ಎಂದಿದ್ದಾರೆ. “ಜನರಿಗೆ ಧ್ವನಿ ನೀಡುವ ಭರವಸೆಯೊಂದಿಗೆ ಅಧಿಕಾರಕ್ಕೆ ಬಂದ ಸರ್ಕಾರವು ಈಗ ಉಳಿದಿರುವ ಕೆಲವು ಧ್ವನಿಗಳನ್ನು ಸಹ ಮೌನಗೊಳಿಸುತ್ತಿದೆ” ಎಂದು ಅವರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ, ಜೊತೆಗೆ ಸುತ್ತೋಲೆಯ ಪ್ರತಿಯನ್ನು ಹಂಚಿಕೊಂಡಿದ್ದಾರೆ.
ಸಿಇಒ ಅವರ ಪ್ರಕಾರ, ಶಿಕ್ಷಣ ಇಲಾಖೆಯ ಆಡಳಿತ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ, ಸಾಮಾಜಿಕ ಮಾಧ್ಯಮಗಳ ದುರ್ಬಳಕೆಯ ಕುರಿತು ಚರ್ಚೆಯಾಗಿದೆ. ಇಂತಹ ಕೃತ್ಯಗಳು ಇಲಾಖೆಯ ನೀತಿಗಳಿಗೆ ಹಸ್ತಕ್ಷೇಪ ಮಾಡುವಂತಿದ್ದು, 2023ರಲ್ಲಿ ಸರ್ಕಾರವು ಜಾರಿಗೊಳಿಸಿದ ಸುತ್ತೋಲೆಯ ಉಲ್ಲಂಘನೆಯಾಗಿದೆ ಎಂದು ಅವರು ತಿಳಿಸಿದ್ದಾರೆ. ಆಡಳಿತ ಕಾರ್ಯದರ್ಶಿಯು ಎಲ್ಲ ಮುಖ್ಯ ಶಿಕ್ಷಣಾಧಿಕಾರಿಗಳಿಗೆ ಇಂತಹ ಉಲ್ಲಂಘನೆಗಳನ್ನು ಆಡಳಿತದ ಗಮನಕ್ಕೆ ತರಲು ಸೂಚಿಸಿದ್ದಾರೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಗ್ಯಾರಂಟಿ ವಿಚಾರದಲ್ಲಿ ಕರ್ನಾಟಕದಿಂದ ಬಿಹಾರಕ್ಕೆ ಬಿಜೆಪಿಯ ಬದಲಾದ ನಿಲುವು
ಸಾಮಾಜಿಕ ಮಾಧ್ಯಮದ ಪೋಸ್ಟ್‌ಗಳಿಗೆ ಸಂಬಂಧಿಸಿದ ಸುತ್ತೋಲೆಯು ಉಲ್ಲಂಘನೆಗೆ ಶಿಕ್ಷೆಯನ್ನು ಒಳಗೊಂಡಿದ್ದು, ಇದರಲ್ಲಿ ಛೀಮಾರಿ, ಒಂದು ತಿಂಗಳ ವೇತನಕ್ಕಿಂತ ಹೆಚ್ಚಿಲ್ಲದ ದಂಡ, ವೇತನ ವೃದ್ಧಿ ಅಥವಾ ಬಡ್ತಿ ತಡೆಹಿಡಿಯುವಿಕೆ, ದರ್ಜೆ ಕಡಿಮೆಗೊಳಿಸುವಿಕೆ, ಸರ್ಕಾರಕ್ಕೆ ಆರ್ಥಿಕ ನಷ್ಟವಾದಲ್ಲಿ ವೇತನದಿಂದ ವಸೂಲಿ, ಅಕಾಲಿಕ ನಿವೃತ್ತಿ ಮತ್ತು ಸೇವೆಯಿಂದ ತೆಗೆದುಹಾಕುವಿಕೆ ಸೇರಿವೆ.
ಆದಾಗ್ಯೂ, ಈ ಸುತ್ತೋಲೆಯು ಉದ್ಯೋಗಿಗಳು ಸಾಮಾಜಿಕ ಮಾಧ್ಯಮವನ್ನು ಬಳಸದಂತೆ ನಿಷೇಧಿಸಿಲ್ಲ ಮತ್ತು ಇದನ್ನು “ಸಕಾರಾತ್ಮಕ ಮತ್ತು ರಚನಾತ್ಮಕ ಉದ್ದೇಶಗಳಿಗಾಗಿ” ಬಳಸಬಹುದು ಎಂದು ಸ್ಪಷ್ಟಪಡಿಸಿದೆ.
ಪಿಡಿಪಿ ನಾಯಕ ವಾಹೀದ್ ಪಾರಾ ಈ ಆದೇಶವನ್ನು ತಕ್ಷಣವೇ ರದ್ದುಗೊಳಿಸಬೇಕೆಂದು ಒತ್ತಾಯಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರ ಸರ್ಕಾರವು ಹಿಂದೆ ವಿಧಾನಸಭೆಗೆ ತಿಳಿಸಿದಂತೆ, ಸಾಮಾಜಿಕ ಮಾಧ್ಯಮ ಮತ್ತು ಡಿಜಿಟಲ್ ಸುದ್ದಿ ವೇದಿಕೆಗಳನ್ನು ನಿಯಂತ್ರಿಸಲು ಹೊಸ ಮಾಧ್ಯಮ ನೀತಿಯನ್ನು ರೂಪಿಸುತ್ತಿದೆ. ಇದು 2020ರಲ್ಲಿ ಬಿಜೆಪಿಯ ಲೆಫ್ಟಿನೆಂಟ್ ಗವರ್ನರ್ ಆಡಳಿತದಿಂದ ಅನುಮೋದನೆಗೊಂಡ “ನ್ಯೂ ಮೀಡಿಯಾ ಪಾಲಿಸಿ”ಯನ್ನು ಅನುಸರಿಸಿದೆ, ಇದನ್ನು ಅದರ ಸರ್ವಾಧಿಕಾರಿ ಸ್ವರೂಪಕ್ಕಾಗಿ ಪತ್ರಕರ್ತರು, ನಾಗರಿಕ ಸಮಾಜದ ಗುಂಪುಗಳು ಮತ್ತು ರಾಜಕೀಯ ನಾಯಕರು ಖಂಡಿಸಿದ್ದರು ಎಂದು ಪಾರಾ ತಿಳಿಸಿದ್ದಾರೆ. “ಈ ಆದೇಶವನ್ನು ತಕ್ಷಣ ರದ್ದುಗೊಳಿಸಬೇಕು” ಎಂದು ಅವರು ಒತ್ತಾಯಿಸಿದ್ದಾರೆ.