ಕೂದಲಿಗೆ ಎಣ್ಣೆ ಹೆಚ್ಚಿಲ್ಲವೆಂಬ ಕಾರಣಕ್ಕೆ ಶಿಕ್ಷಕನೊಬ್ಬ ವಿದ್ಯಾರ್ಥಿನಿಯ ಕೂದಲನ್ನು ಕತ್ತರಿಸಿರುವ ಘಟನೆ ಗುಜರಾತ್‌ನಲ್ಲಿ ನಡೆದಿದೆ. ಕೃತ್ಯ ಎಸಗಿದ ಶಿಕ್ಷಕನನ್ನು ಉದ್ಯೋಗದಿಂದ ವಜಾಗೊಳಿಸಲಾಗಿದೆ.
ಗುಜರಾತ್‌ನ ಜಾಮ್‌ನಗರದ ಸ್ವಾಮಿನಾರಾಯಣ ಗುರುಕುಲ ಶಾಲೆಯಲ್ಲಿ ಘಟನೆ ನಡೆದಿದೆ. ವಿದ್ಯಾರ್ಥಿನಿಯ ಕೂದಲನ್ನು ಶಿಕ್ಷಕ ಬ್ಲೇಡ್‌ನಿಂದ ಕತ್ತರಿಸಿ, ದೌರ್ಜನ್ಯ ಎಸಗಿದ್ದಾರೆ. ಘಟನೆ ಬಗ್ಗೆ ವಿದ್ಯಾರ್ಥಿನಿಯ ಪೋಷಕರು ಶಿಕ್ಷಣ ಇಲಾಖೆಗೆ ದೂರು ನೀಡಿದ್ದು, ಶಿಕ್ಷಕನನ್ನು ವಜಾಗೊಳಿಸಿ ಶಾಲೆಯ ನಿರ್ದೇಶಕಿ ಶಶಿಬೆನ್ ದಾಸ್ ಆದೇಶ ಹೊರಡಿಸಿದ್ದಾರೆ.
ಶಾಲೆಯಲ್ಲಿ ಶಿಕ್ಷೆಯ ರೀತಿ ಹೀನವಾಗಿದೆ. ಒಂದು ಪುಸ್ತಕ ಮರೆತು ಹೋದರೂ, ಮಕ್ಕಳಿಗೆ ದಂಡ ಹಾಕಿ, ಶಿಕ್ಷೆ ವಿಧಿಸಲಾಗುತ್ತಿದೆ. ಮಕ್ಕಳು ಶಾಲೆಗೆ ಹೋಗುವುದಕ್ಕೂ ಹೆದರುತ್ತಿದ್ದಾರೆ ಎಂದು ವಿದ್ಯಾರ್ಥಿನಿಯ ತಾಯಿ ಅಂಜಲಿಬೆನ್ ಗಂಧಾ ಹೇಳಿದ್ದಾರೆ.
“ನಮ್ಮ ಶಾಲೆಯ ಮಕ್ಕಳು ಉದ್ದವಾದ ಕೂದಲು ಬೆಳೆಸಲು ಅವಕಾಶ ನೀಡುವುದಿಲ್ಲ. ಕೂದಲು ಉದ್ದವಾಗಿ ಬೆಳೆಯದಂತೆ ನೋಡಿಕೊಳ್ಳಲು ಮಕ್ಕಳ ಪೋಷಕರಿಗೆ ಸೂಚಿಸುತ್ತೇವೆ. ಆದರೆ, ದೈಹಿಕ ಶಿಕ್ಷಕರೇ ವಿದ್ಯಾರ್ಥಿನಿಯ ಕೂದಲು ಕತ್ತರಿಸಿದ್ದಾರೆ. ಇದು ಸರಿಯಾದ ಕ್ರಮವಲ್ಲ. ಆದ್ದರಿಂದ, ನಾವು ಅವರನ್ನು ವಜಾಗೊಳಿಸಿದ್ದೇವೆ” ಎಂದು ಶಾಲೆಯ ಮುಖ್ಯ ಶಿಕ್ಷಕರು ತಿಳಿಸಿದ್ದಾರೆ.
ಈ ಲೇಖನ ಓದಿದ್ದೀರಾ?: ಸೌಜನ್ಯ ಕೊಲೆಯ ಪ್ರಮುಖ ಸಾಕ್ಷಿಯಾಗುವರೇ ಚಿನ್ನಯ್ಯ? ವಿಡಿಯೋದಲ್ಲಿದೆ ಅಚ್ಚರಿಯ ಹೇಳಿಕೆ
“ಶಾಲೆಗಳಲ್ಲಿ ಮಕ್ಕಳ ಮೇಲಿನ ಇಂತಹ ದೌರ್ಜನ್ಯಗಳು ನಡೆಯದಂತೆ, ತಡೆಯಲು ಶಾಲೆಗಳಿಗೆ ನಿರ್ದೇಶನ ನೀಡಲಾಗಿದೆ. ಆರೋಪಿ ಶಿಕ್ಷಕರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ” ಎಂದು ಜಿಲ್ಲಾ ಶಿಕ್ಷಣ ಅಧಿಕಾರಿ ವಿಪುಲ್ ಮೆಹ್ತಾ ಹೇಳಿದ್ದಾರೆ.
ಶಾಲೆಗಳಲ್ಲಿ ಶಿಸ್ತಿನ ಹೆಸರಿನಲ್ಲಿ ವಿದ್ಯಾರ್ಥಿಗಳ ಮೇಲೆ ದೌರ್ಜನ್ಯಗಳು ನಡೆಯುತ್ತಿರುವುದು ಗಂಭೀರ ಸಮಸ್ಯೆ. ಶಿಸ್ತಿನ ಹೆಸರಿನಲ್ಲಿ ವಿದ್ಯಾರ್ಥಿಗಳನ್ನು ಅವಮಾನಿಸುವುದು ಮತ್ತು ಮಾನಸಿಕ ಕಿರುಕುಳ ನೀಡುವುದು ನಡೆಯುತ್ತಲೇ ಇದೆ. ಇಂತಹ ಕ್ರಮಗಳು ವಿದ್ಯಾರ್ಥಿಗಳ ಆತ್ಮಗೌರವಕ್ಕೆ ಧಕ್ಕೆ ತರುವುದಲ್ಲದೆ, ಅವರ ಮಾನಸಿಕ ಆರೋಗ್ಯದ ಮೇಲೆ ದೀರ್ಘಕಾಲೀನ ಪರಿಣಾಮ ಬೀರುತ್ತವೆ. ಶಿಸ್ತು ಕಾಪಾಡುವ ಉದ್ದೇಶದಿಂದ ತೆಗೆದುಕೊಳ್ಳುವ ಕ್ರಮಗಳು ಮಕ್ಕಳಲ್ಲಿ ಭಯ, ಆತಂಕ ಹಾಗೂ ಶಿಕ್ಷಣದಿಂದ ದೂರ ಉಳಿಯುವಂತೆ ಮಾಡುವ ಸಾಧ್ಯತೆಗಳಿವೆ. ಇಂತಹ ದೌರ್ಜನ್ಯಗಳನ್ನು ತಡೆಗಟ್ಟಲು ಶಾಲೆಗಳು ಸಕಾರಾತ್ಮಕ ಶಿಸ್ತಿನ ವಿಧಾನಗಳನ್ನು ಅಳವಡಿಸಿಕೊಳ್ಳಬೇಕು. ಸರ್ಕಾರವು ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ಜಾರಿಗೊಳಿಸಬೇಕು.