ಸಂಸತ್ ಭವನದಲ್ಲಿ ಭದ್ರತಾ ವೈಫಲ್ಯ ಕಾಣಿಸಿಕೊಂಡಿದ್ದು ವ್ಯಕ್ತಿಯೋರ್ವ ಶುಕ್ರವಾರ ಬೆಳಿಗ್ಗೆ ಮರವನ್ನು ಹತ್ತಿ 20 ಮೀಟರ್ ಎತ್ತರದ ಗೋಡೆಯನ್ನು ಹತ್ತಿ ಸಂಸತ್ತಿನೊಳಗೆ ಪ್ರವೇಶಿಸಿದ ಘಟನೆ ನಡೆದಿದೆ. ಬೆಳಿಗ್ಗೆ ಸುಮಾರು 6:30ರ ಆಸುಪಾಸಿನಲ್ಲಿ ಈ ಘಟನೆ ನಡೆದಿದೆ.
ಗೋಡೆ ಹತ್ತಿ ಆವರಣ ಪ್ರವೇಶಿಸಿದ ವ್ಯಕ್ತಿಯನ್ನು ರಾಮ (20) ಎಂದು ಗುರುತಿಸಲಾಗಿದೆ. ಈತ ರೈಲು ಭವನದ ಕಡೆಯಿಂದ ಗೋಡೆ ಹಾರಿ ಹೊಸ ಸಂಸತ್ತಿನ ಕಟ್ಟಡದ ಗರುಡ ಗೇಟ್ ತಲುಪಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗರುಡ ಗೇಟ್ ಗೋಡೆಯಿಂದ ಸುಮಾರು 15 ಮೀಟರ್ ದೂರದಲ್ಲಿದೆ.
ಇದನ್ನು ಓದಿದ್ದೀರಾ? ಹೊಸ ಸಂಸತ್ ಭವನ ಉದ್ಘಾಟನೆ | ಅರ್ಜಿ ವಜಾಗೊಳಿಸಿದ ‘ಸುಪ್ರೀಂ’
ಇನ್ನು ಒಳನುಗ್ಗಿದ ಯುವಕನನ್ನು ಭದ್ರತಾ ಸಿಬ್ಬಂದಿ ಹಿಡಿದಿದ್ದು, ಅವರ ವಿಚಾರಣೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಯುವಕ ಮಾನಸಿಕ ಅಸ್ವಸ್ಥ ಎಂದು ದೆಹಲಿ ಪೊಲೀಸರು ಹೇಳಿದ್ದಾರೆ.
“ಇಂದು ಸಿಐಎಸ್ಎಫ್ ಮತ್ತು ದೆಹಲಿ ಪೊಲೀಸ್ ಸಿಬ್ಬಂದಿ ಸಂಸತ್ತಿನ ಗಡಿ ಗೋಡೆಯ ಬಳಿ ಒಬ್ಬ ವ್ಯಕ್ತಿಯನ್ನು ಬಂಧಿಸಿದ್ದಾರೆ. ಆತ ಒಳ ಹೋಗಲು ಪ್ರಯತ್ನಿಸುತ್ತಿದ್ದ. ಯುವಕ ಉತ್ತರ ಪ್ರದೇಶ ರಾಮ ಎಂದು ಗುರುತಿಸಲಾಗಿದೆ” ಎಂದು ಪೊಲೀಸರು ತಿಳಿಸಿದ್ದಾರೆ.
ಕಳೆದ ವರ್ಷ 20ರ ಯುವಕನೋರ್ವ ಸಂಸತ್ತಿನ ಗೋಡೆಯನ್ನು ಹತ್ತಿ ಅನೆಕ್ಸ್ ಕಟ್ಟಡದ ಆವರಣದೊಳಗೆ ಹಾರಿದ್ದ. ಘಟನೆಯ ವಿಡಿಯೋ ಕೂಡಾ ಕಾಣಿಸಿಕೊಂಡಿತ್ತು. ಶೋಧದ ಸಮಯದಲ್ಲಿ ಆ ವ್ಯಕ್ತಿ ಯಾವುದೇ ಅಪರಾಧ ಹಿನ್ನೆಲೆ ಹೊಂದಿರುವುದು ಕಂಡುಬಂದಿರಲಿಲ್ಲ.
ಇನ್ನು 2023ರಲ್ಲಿ 2001ರ ಸಂಸತ್ತಿನ ಭಯೋತ್ಪಾದಕ ದಾಳಿಯ ದಿನದಂದೇ ಸಾಗರ್ ಶರ್ಮಾ ಮತ್ತು ಮನೋರಂಜನ್ ಡಿ ಎಂದು ಗುರುತಿಸಲಾದ ಇಬ್ಬರು ವ್ಯಕ್ತಿಗಳು ಶೂನ್ಯ ವೇಳೆಯಲ್ಲಿ ಸಾರ್ವಜನಿಕ ಗ್ಯಾಲರಿಯಿಂದ ಲೋಕಸಭಾ ಸ್ಥಳಕ್ಕೆ ಹಾರಿದ್ದರು. ಹಳದಿ ಹೊಗೆ ಸೂಸುತ್ತಿದ್ದ ಡಬ್ಬಿ ಹಿಡಿದು ಕೆಲವು ಸಂಸದರು ಅವರನ್ನು ಹತ್ತಿಕ್ಕುವ ಮೊದಲು ಘೋಷಣೆಗಳನ್ನು ಕೂಗಿದ್ದರು.
ಅದೇ ಸಮಯದಲ್ಲಿ, ಇತರ ಇಬ್ಬರು ಆರೋಪಿಗಳಾದ ಅಮೋಲ್ ಶಿಂಧೆ ಮತ್ತು ನೀಲಮ್ ಆಜಾದ್ ಸಂಸತ್ತಿನ ಆವರಣದ ಹೊರಗೆ ಸರ್ವಾಧಿಕಾರದ ವಿರುದ್ಧ ಧಿಕ್ಕಾರ ಕೂಗಿ ಡಬ್ಬಿಯಿಂದ ಹಳದಿ ಹೊಗೆ ಹೊರಬಿಟ್ಟಿದ್ದರು. ನಾಲ್ವರು ಆರೋಪಿಗಳನ್ನು ಬಂಧಿಸಲಾಗಿತ್ತು. ಘಟನೆಗೆ ಸಂಬಂಧಿಸಿ ಮಹೇಶ್ ಕುಮಾವತ್ ಮತ್ತು ಲಲಿತ್ ಝಾ ಎಂಬ ಇನ್ನಿಬ್ಬರನ್ನೂ ಬಂಧಿಸಲಾಗಿತ್ತು.
