ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್‌ಗೆ ಈಗಾಗಲೇ ನೀಡಲಾಗಿರುವ ಝಡ್ ಶ್ರೇಣಿ ಭದ್ರತೆಯನ್ನು ಹೆಚ್ಚಿಸಿ, ಎಎಸ್‌ಎಲ್(ಸುಧಾರಿತ ಭದ್ರತಾ ಸಂಪರ್ಕ) ಭದ್ರತೆಯನ್ನು ಒದಗಿಸಲಾಗಿದೆ. ಎಎಸ್‌ಎಲ್ ಭದ್ರತೆಯನ್ನು ಈಗಾಗಲೇ ಹೊಂದಿರುವ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವರಾದ ಅಮಿತ್ ಶಾ, ರಾಜನಾಥ್ ಸಿಂಗ್, ವಿಪಕ್ಷ ನಾಯಕ ರಾಹುಲ್ ಗಾಂಧಿ, ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಮತ್ತು ಪ್ರಿಯಾಂಕಾ ವಾದ್ರಾ ಪಟ್ಟಿಗೆ ಭಾಗವತ್ ಸೇರ್ಪಡೆಯಾಗಿದ್ದಾರೆ.
ಝಡ್ ಶ್ರೇಣಿ ಭದ್ರತೆಯನ್ನು ಹೊಂದಿರುವ ಎಲ್ಲರಿಗೂ ಎಎಸ್‌ಎಲ್ ಭದ್ರತೆಯನ್ನು ನೀಡುವುದಿಲ್ಲ. ಈ ಭದ್ರತೆಯನ್ನು ಸುರಕ್ಷತೆ ಪರಿಶೀಲನೆ ಕಾರಣಕ್ಕೆ ನೀಡಲಾಗುತ್ತದೆ. ಇದರ ಪ್ರಕಾರ ನಾಯಕರು ಭೇಟಿ ನೀಡುವ ಸ್ಥಳದ ಪೂರ್ವಭಾವಿ ಪರಿಶೀಲನೆ, ಸ್ಥಳೀಯ ಪೊಲೀಸರ ಜೊತೆ ಸಮಾಲೋಚನೆ, ಸಂಭವನೀಯ ಅಪಾಯು ಎದುರಿಸಲು ಬೇಕಾದ ಕಾರ್ಯತಂತ್ರ ರಚನೆ ಸೇರಿದಂತೆ ಸುರಕ್ಷತೆ ಪರಿಶೀಲನೆಯ ಹಲವು ಕಾರ್ಯಗಳನ್ನು ಒಳಗೊಂಡಿರುತ್ತದೆ.
ಎಎಸ್‌ಎಲ್ ಸುರಕ್ಷತೆ ಎಂದರೇನು?
ಎಎಸ್ಎಲ್ ಅನ್ನು ಉನ್ನತ ಮಟ್ಟದ ಭದ್ರತೆ ಎಂದು ಕರೆಯಬಹುದು. ವಿಐಪಿಗಳಿಗೆ ಎಎಸ್ಎಲ್ ಭದ್ರತೆಯನ್ನು ನೀಡಿದಾಗ, ಅವರು ದೇಶದ ಪ್ರಧಾನ ಮಂತ್ರಿಗೆ ಅನ್ವಯಿಸುವ ಪ್ರೋಟೋಕಾಲ್‌ನ ವ್ಯಾಪ್ತಿಯಲ್ಲಿ ಬರುತ್ತಾರೆ. ಅಂದರೆ ಇನ್ನುಮುಂದೆ ಮೋಹನ್ ಭಾಗವತ್ ಯಾವುದೇ ಸಾಮಾನ್ಯ ಹೆಲಿಕಾಪ್ಟರ್‌ನಲ್ಲಿ ಪ್ರಯಾಣಿಸುವುದಿಲ್ಲ, ಆದರೆ ವಿಶೇಷವಾಗಿ ವಿನ್ಯಾಸಗೊಳಿಸಿದ ಹೆಲಿಕಾಪ್ಟರ್‌ನಲ್ಲಿ ಮಾತ್ರ ಪ್ರಯಾಣಿಸಲಿದ್ದಾರೆ. ಇದಲ್ಲದೇ ಮೋಹನ್ ಭಾಗವತ್ ಅವರು ಎಲ್ಲಿಗೆ ಹೋದರೂ ಅಲ್ಲಿಗೆ ಆಗಮಿಸುವ ಮುನ್ನ ಸ್ಥಳ ಪರಿಶೀಲನೆ ನಡೆಸಿ ಭದ್ರತಾ ಪೂರ್ವಾಭ್ಯಾಸವನ್ನೂ ನಡೆಸಲಾಗುವುದು. ಇದಲ್ಲದೇ ಮೋಹನ್ ಭಾಗವತ್ ಹೋದಲ್ಲೆಲ್ಲಾ ಅವರ ಭದ್ರತೆಗೆ ಜಿಲ್ಲಾಡಳಿತ, ಪೊಲೀಸ್, ಆರೋಗ್ಯ ಇಲಾಖೆ ಸೇರಿದಂತೆ ಸ್ಥಳೀಯ ಸಂಸ್ಥೆಗಳನ್ನು ನಿಯೋಜಿಸಲಾಗುವುದು.
ಈ ಸುದ್ದಿ ಓದಿದ್ದೀರಾ? ಆರ್‌ಎಸ್‌ಎಸ್ – ಬಿಜೆಪಿಯ ಮುಖವಾಡವನ್ನು ಹೊಸ ತಲೆಮಾರಿನ ಓದುಗರಿಗೆ ಪರಿಚಯಿಸಿದ ನೂರಾನಿ
ಎಎಸ್‌ಎಲ್ ಅಡಿಯಲ್ಲಿ, ರಾಜ್ಯ ಪೊಲೀಸರು, ಕೇಂದ್ರ ಭದ್ರತಾ ಪಡೆಗಳು, ಗುಪ್ತಚರ ಸಂಸ್ಥೆಗಳು ಮತ್ತು ಇತರ ಭದ್ರತಾ ಸಂಬಂಧಿತ ಇಲಾಖೆಗಳು ಒಟ್ಟಾಗಿ ಕಾರ್ಯನಿರ್ವಹಿಸುತ್ತಿವೆ. ಎಎಸ್‌ಎಲ್ ಭದ್ರತೆಯು ಆಂತರಿಕ ಮತ್ತು ಬಾಹ್ಯ ಭದ್ರತಾ ಪದರಗಳನ್ನು ಒಳಗೊಂಡಂತೆ ಬಹು ಹಂತದ ಭದ್ರತೆಯನ್ನು ಒಳಗೊಂಡಿರುತ್ತದೆ. ಇದಲ್ಲದೆ, ಆಧುನಿಕ ತಂತ್ರಜ್ಞಾನ ಮತ್ತು ಸಲಕರಣೆಗಳನ್ನು ಎಎಸ್ಎಲ್ ಪ್ರೋಟೋಕಾಲ್ ಅಡಿಯಲ್ಲಿ ಭದ್ರತೆಯಲ್ಲಿ ಬಳಸಲಾಗುತ್ತದೆ. ಉದಾಹರಣೆಗೆ ಸಿಸಿಟಿವಿ ಕ್ಯಾಮೆರಾಗಳು, ಮೆಟಲ್ ಡಿಟೆಕ್ಟರ್‌ಗಳು ಮತ್ತು ಎಕ್ಸ್-ರೇ ಯಂತ್ರಗಳು. ಇದಲ್ಲದೆ, ಎಎಸ್‌ಎಲ್ ಭದ್ರತಾ ಪ್ರೋಟೋಕಾಲ್‌ನಲ್ಲಿ ಕಮಾಂಡೋಗಳ ಸಂಖ್ಯೆಯನ್ನು ಬೆದರಿಕೆಗೆ ಅನುಗುಣವಾಗಿ ಹೆಚ್ಚಿಸಬಹುದು ಅಥವಾ ಕಡಿಮೆ ಮಾಡಬಹುದು. ಸರಳ ಭಾಷೆಯಲ್ಲಿ ಹೇಳುವುದಾದರೆ ಸುಧಾರಿತ ಭದ್ರತಾ ಸಂಪರ್ಕವು ಝೆಡ್ ಪ್ಲಸ್ ಭದ್ರತೆಯ ನವೀಕರಿಸಿದ ಆವೃತ್ತಿಯಾಗಿದೆ.
ಝೆಡ್ ಪ್ಲಸ್ ಮತ್ತು ವೈ ಪ್ಲಸ್ ಕುರಿತು ಹೇಳುವುದಾರೆ, ಝೆಡ್ ಪ್ಲಸ್ ಭದ್ರತೆಯಲ್ಲಿ 55-58 ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತದೆ. ಇದರಲ್ಲಿ 10-12 ಎನ್‌ಎಸ್‌ಜಿ ಕಮಾಂಡೋಗಳೂ ಸೇರಿದ್ದಾರೆ. ಇದಲ್ಲದೆ, ಸ್ಥಳೀಯ ಪೊಲೀಸ್ ಮತ್ತು ಇತರ ಭದ್ರತಾ ಏಜೆನ್ಸಿಗಳ ಸಿಬ್ಬಂದಿ ಕೂಡ ಝಡ್ ಪ್ಲಸ್ ಭದ್ರತೆಗೆ ಸೇರುತ್ತಾರೆ. ಆದರೆ, ನಾವು ವೈ ಪ್ಲಸ್ ಭದ್ರತೆಯ ಬಗ್ಗೆ ಹೇಳುವುದಾದರೆ, ವೈ ಪ್ಲಸ್ ಭದ್ರತೆಯಲ್ಲಿ ಸುಮಾರು 11-12 ಭದ್ರತಾ ಸಿಬ್ಬಂದಿ ಇರುತ್ತಾರೆ. ಇದರಲ್ಲಿ ಎನ್‌ಎಸ್‌ಜಿ ಕಮಾಂಡೋಗಳ ಸಂಖ್ಯೆ 2 ರಿಂದ 4. ಝೆಡ್ ಪ್ಲಸ್ ಭದ್ರತೆಯು ಮೂರು ಹಂತದ ಭದ್ರತೆಯನ್ನು ಹೊಂದಿದೆ.
ಜನಪ್ರತಿನಿಧಿಯಲ್ಲದ ವ್ಯಕ್ತಿಗೆ ಏಕಿಷ್ಟು ಭದ್ರತೆ?
ಮೋಹನ್ ಭಾಗವತ್ ಜನಪ್ರತಿನಿಧಿಯಲ್ಲ. ಒಂದು ಸಂಘಟನೆಯೊಂದರ ಮುಖ್ಯಸ್ಥ. ಆರ್‌ಎಸ್‌ಎಸ್‌ನಷ್ಟೆ ಪ್ರಬಲ ಸಂಘಟನೆಗಳು ದೇಶದಲ್ಲಿ ನೂರಾರಿವೆ. ಆದರೆ ಇವರಿಗೆ ಏಕೆ ಇಷ್ಟೊಂದು ಮಹತ್ವ ನೀಡಲಾಗುತ್ತಿದೆ ಎಂದು ಕೇಳಿದರೆ ಬಿಜೆಪಿಯ ಮಾತೃಸಂಸ್ಥೆ ಆರ್‌ಎಸ್‌ಎಸ್ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಷಯ. ಸರ್ಕಾರವನ್ನು ಪರೋಕ್ಷವಾಗಿ ಆರ್‌ಎಸ್‌ಎಸ್ ನಿಯಂತ್ರಿಸುತ್ತಿದೆ ಎಂಬುದು ಗೊತ್ತಿರದ ವಿಚಾರವೇನಲ್ಲ. ಕೆಲವು ದಿನಗಳ ಹಿಂದೆ ಇಂಟೆಲಿಜೆನ್ಸ್ ಬ್ಯೂರೋಗೆ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಬಗ್ಗೆ ಬೆದರಿಕೆ ಬಂದಿತ್ತು. ಬಿಜೆಪಿಯೇತರ ಪಕ್ಷಗಳ ನೇತೃತ್ವದ ರಾಜ್ಯಗಳಿಗೆ ಭೇಟಿ ನೀಡಿದಾಗ ಅವರ ಭದ್ರತೆಯ ವೈಫಲ್ಯವಾಗಿದೆ ಎಂದು ಅಧಿಕಾರಿಗಳು ಸಮಜಾಯಿಷಿ ನೀಡುತ್ತಾರೆ.
ತೀರ ಬೆದರಿಕೆಯಿದ್ದರೆ ಝೆಡ್ ಪ್ಲಸ್ ಮತ್ತು ವೈ ಪ್ಲಸ್ ನೀಡಬಹುದಾಗಿತ್ತು ಎಂದು ಕೇಳಬಹುದು. ಆದರೆ ಸರ್ಕಾರವನ್ನು ರಾಷ್ಟ್ರೀಯ ಸ್ವಯಂ ಸೇವಕ ಸಂಘ ನಿಯಂತ್ರಿಸುತ್ತಿರುವ ಕಾರಣ ಪ್ರಧಾನಿ ನರೇಂದ್ರ ಮೋದಿಯಷ್ಟೆ ಭದ್ರತೆ ಇವರಿಗೂ ಅಗತ್ಯ ಎನ್ನುವುದು ಸಂಘ ಪರಿವಾರದಲ್ಲಿ ಚರ್ಚೆಯಾಗಿ ಹೆಸರಿಗಷ್ಟೆ ಬೆದರಿಕೆ ಎಂದು ಪ್ರಧಾನಿಗೆ ಸಮನಾದ ಭದ್ರತೆ ನೀಡಲಾಗಿದೆ ಎಂದು ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ.
