ಮುಂಬೈ ನ ವರ್ಲಿಯಲ್ಲಿ ನಿನ್ನೆ(ಜುಲೈ 7) ಬೆಳಗ್ಗೆ ಬಿಎಂಡಬ್ಲ್ಯು ಕಾರು ಸ್ಕೂಟರ್‌ಗೆ ಡಿಕ್ಕಿ ಹೊಡೆದು ಮಹಿಳೆಯೊಬ್ಬರ ಸಾವಿಗೆ ಕಾರಣವಾಗಿದ್ದ ಪ್ರಕರಣದ ಮೇಲೆ ಆರೋಪಿ 24 ವರ್ಷದ ಮಿಹಿರ್ ಷಾ ಅವರ ತಂದೆ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಯ ಹಿರಿಯ ನಾಯಕ ರಾಜೇಶ್ ಶಾ ಮತ್ತು ಅವರ ಚಾಲಕ ರಾಜೇಂದ್ರ ಸಿಂಗ್ ಬಿಜಾವತ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಘಟನೆ ವೇಳೆ ಮಿಹಿರ್ ಶಾ ಪಾನಮತ್ತನಾಗಿ ಕಾರು ಚಲಾಯಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.ಆರೋಪಿಯ ರಕ್ತ ಪರೀಕ್ಷೆಯ ವರದಿಗಾಗಿ ಕಾಯಲಾಗುತ್ತಿದೆ. ಇಂದು ರಾಜೇಶ್ ಶಾ ಮತ್ತು ಅವರ ಚಾಲಕ ರಾಜೇಂದ್ರ ಸಿಂಗ್ ಬಿಜಾವತ್ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ನೂತನ ಅಪರಾಧ ಸಂಹಿತೆ ಭಾರತೀಯ ನ್ಯಾಯ ಸಂಹಿತಾ ಅಡಿಯಲ್ಲಿ ಕೊಲೆಗೆ ಸಮನಾದ ಅಪರಾಧಿ ನರಹತ್ಯೆಗೆ ಸಂಬಂಧಿಸಿದ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ. ದುಡುಕಿನ ಚಾಲನೆ ಮತ್ತು ಸಾಕ್ಷ್ಯ ನಾಶಪಡಿಸುವಿಕೆ ಹಾಗೂ ಮೋಟಾರು ವಾಹನ ಕಾಯ್ದೆಯ ನಿಬಂಧನೆಗಳನ್ನು ಸಹ ಪ್ರಕರಣದಲ್ಲಿ ಅನ್ವಯಿಸಲಾಗಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಸರಣಿ ಅವಘಡಗಳಿಂದ ಬಯಲಾದ ಮೋದಿಯವರ ‘ಅಭಿವೃದ್ಧಿ ಮತ್ತು ಆಡಳಿತ’
ಪೊಲೀಸ್ ಮೂಲಗಳ ಪ್ರಕಾರ, ಅಪಘಾತದ ಸಮಯದಲ್ಲಿ, ಶಿವಸೇನಾ ನಾಯಕನ ಪುತ್ರ ಮತ್ತು ಅವರ ಚಾಲಕ ಐಷಾರಾಮಿ ಕಾರಿನಲ್ಲಿದ್ದರು. ಮಿಹಿರ್ ಶಾ ನಿನ್ನೆ ರಾತ್ರಿ ಜುಹುವಿನ ಬಾರ್‌ನಲ್ಲಿ ಮದ್ಯ ಸೇವಿಸಿದ್ದಾರೆ. ಮನೆಗೆ ಹೋಗುವಾಗ, ಆತ ತಾನು ಕಾರು ಚಲಾಯಿಸುವುದಾಗಿ ಚಾಲಕನಿಗೆ ಹೇಳಿದ್ದು, ವರ್ಲಿಯಲ್ಲಿ ಹೋಗುತ್ತಿದ್ದಾಗ ಅದೇ ಮಾರ್ಗದಲ್ಲಿ ಸ್ಕೂಟರ್‌ನಲ್ಲಿ ತೆರಳುತ್ತಿದ್ದ ವರ್ಲಿಯ ಕೋಳಿವಾಡ ಪ್ರದೇಶದ ನಿವಾಸಿಗಳಾದ ಕಾವೇರಿ ನಕ್ವಾ ಮತ್ತು ಅವರ ಪತಿ ಪ್ರದಿಕ್ ನಕ್ವಾ ಅವರಿಗೆ ಕಾರು ಡಿಕ್ಕಿ ಹೊಡೆದಿದ್ದಾನೆ. ಘಟನೆಯಲ್ಲಿ ಕಾವೇರಿ ನಕ್ವಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ನಮಗೆ ನ್ಯಾಯ ಸಿಗುವುದಿಲ್ಲ ಎಂದ ಸಂತ್ರಸ್ತೆಯ ಪತಿ
ಅಪಘಾತದ ನಂತರ ಮಾಧ್ಯಮಗಳ ಜೊತೆ ನೋವಿನಿಂದ ಮಾತನಾಡಿರುವ ಸಂತ್ರಸ್ತೆ ಕಾವೇರಿ ನಕ್ವಾ ಅವರ ಪತಿ ಪ್ರದಿಕ್ ನಕ್ವಾ, ರಸ್ತೆ ಅಪಘಾತದಲ್ಲಿ ನನ್ನ ಪತ್ನಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಅವರು ದೊಡ್ಡವರು. ಅವರನ್ನು ಏನು ಮಾಡುವುದಕ್ಕೆ ಆಗುವುದಿಲ್ಲ. ನಮಗೆ ನ್ಯಾಯ ಸಿಗುವುದಿಲ್ಲ. ನಾವು ಮಾತ್ರ ತೊಂದರೆ ಅನುಭವಿಸಬೇಕು. ನನಗೆ ಇಬ್ಬರು ಮಕ್ಕಳಿದ್ದಾರೆ, ನಾನು ಈಗ ಏನು ಮಾಡಬೇಕು ಎಂದು ಹೇಳಿದ್ದಾರೆ.
