ಕ್ಯಾಬ್ ಚಾಲಕರನ್ನು ಗುರಿಯಾಗಿಸಿಕೊಂಡಿದ್ದ ಸರಣಿ ಹಂತಕನೊಬ್ಬ 24 ವರ್ಷಗಳ ನಂತರ ಪೊಲೀಸರು ಬಂಧಿಸಿದ್ದಾರೆ. ಈತ ಕ್ಯಾಬ್ ಚಾಲಕರನ್ನೇ ಗುರಿಯಾಗಿಸಿಕೊಳ್ಳುತ್ತಿದ್ದ, ಅವರನ್ನು ಕೊಂದು ವಾಹನ ಮಾರುತ್ತಿದ್ದ. ನಾಲ್ಕು ಕೊಲೆ, ದರೋಡೆ ಪ್ರಕರಣದ ಆರೋಪಿ ಅಜಯ್ ಲಂಬಾನನ್ನು ದೆಹಲಿ ಪೊಲೀಸ್ ಅಪರಾಧ ವಿಭಾಗ ಬಂಧಿಸಿದೆ.
ಲಂಬಾ ಮತ್ತು ಅವನ ಸಹಚರರು ಟ್ಯಾಕ್ಸಿಗಳನ್ನು ಬಾಡಿಗೆಗೆ ಪಡೆದು ಉತ್ತರಾಖಂಡಕ್ಕೆ ಪ್ರಯಾಣಿಸುತ್ತಿದ್ದರು. ನಂತರ ಅವರು ಚಾಲಕನನ್ನು ಕೊಂದು ಶವವನ್ನು ಬೆಟ್ಟಗಳಲ್ಲಿ ಎಸೆಯುತ್ತಿದ್ದರು. ಕ್ಯಾಬ್ ಅನ್ನು ಕಳ್ಳಸಾಗಣೆ ಮಾಡಿ ನೇಪಾಳದಲ್ಲಿ ಮಾರಾಟ ಮಾಡಲಾಗುತ್ತಿತ್ತು ಎಂದು ಹೇಳಲಾಗಿದೆ.
ಇದನ್ನು ಓದಿದ್ದೀರಾ? ʼದಹಾಡ್ʼ ವೆಬ್ ಸರಣಿಗೆ ಹಂತಕ ಸೈನೇಡ್ ಮೋಹನ್ ಕಥೆ ಸ್ಫೂರ್ತಿಯೇ?
ಈ ಬಗ್ಗೆ ಮಾಧ್ಯಮಕ್ಕೆ ಮಾಹಿತಿ ನೀಡಿರುವ ದೆಹಲಿ ಪೊಲೀಸ್ ಉಪ ಆಯುಕ್ತ ಆದಿತ್ಯ ಗೌತಮ್, “ಕುಖ್ಯಾತ ದರೋಡೆಕೋರ, ಕೊಲೆಗಾರನಾದ ಆರೋಪಿಯು 2001ರಲ್ಲಿ ದೆಹಲಿ, ಉತ್ತರ ಪ್ರದೇಶ ಮತ್ತು ಉತ್ತರಾಖಂಡದಾದ್ಯಂತ ಕ್ಯಾಬ್ ಚಾಲಕರನ್ನು ಗುರಿಯಾಗಿಸಿಕೊಂಡು ನಾಲ್ಕು ಕ್ರೂರ ದರೋಡೆ, ಕೊಲೆ ನಡೆಸಿದ್ದಾನೆ” ಎಂದು ತಿಳಿಸಿದ್ದಾರೆ.
“ತನ್ನ ಸಹಚರರೊಂದಿಗೆ ಟ್ಯಾಕ್ಸಿಗಳನ್ನು ಬಾಡಿಗೆಗೆ ಪಡೆಯುತ್ತಿದ್ದ ಈತ ಚಾಲಕರನ್ನು ಕೊಲೆ ಮಾಡುತ್ತಿದ್ದನು. ಶವ ಯಾರಿಗೂ ಸಿಗಬಾರದೆಂದು ದೂರದ ಪರ್ವತ ಪ್ರದೇಶಗಳಲ್ಲಿ ಶವಗಳನ್ನು ಎಸೆಯುತ್ತಿದ್ದನು. ವಾಹನವನ್ನು ಮಾರುತ್ತಿದ್ಧ” ಎಂದು ವಿವರಿಸಿದ್ದಾರೆ.
ಅಜಯ್ ಲಂಬಾ ಮತ್ತು ಆತನ ಗ್ಯಾಂಗ್ ಸದಸ್ಯರು ಇನ್ನಷ್ಟು ಕೊಲೆಗಳಲ್ಲಿ ಭಾಗಿಯಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಸದ್ಯ ನಾಲ್ವರು ಕ್ಯಾಬ್ ಚಾಲಕರ ಶವ ಮಾತ್ರ ಪತ್ತೆಯಾಗಿದೆ. ಲಂಬಾ ಗ್ಯಾಂಗ್‌ನ ಇಬ್ಬರು ಸದಸ್ಯರನ್ನು ಮೊದಲೇ ಬಂಧಿಸಲಾಗಿತ್ತು. ಪೊಲೀಸರು ಈಗ ಆತನನ್ನು ವಿಚಾರಣೆ ನಡೆಸುತ್ತಿದ್ದಾರೆ.
ಇದನ್ನು ಓದಿದ್ದೀರಾ? 14 ತಿಂಗಳಲ್ಲಿ 9 ಮಹಿಳೆಯರ ಹತ್ಯೆ; ಸರಣಿ ಕೊಲೆ ಶಂಕೆ
48 ವರ್ಷದ ಲಂಬಾ ದೆಹಲಿಯವನಾಗಿದ್ದು, 6ನೇ ತರಗತಿಯಲ್ಲೇ ಶಾಲೆ ತೊರೆದಿದ್ದಾನೆ. ಅದಾದ ಬಳಿಕ ಉತ್ತರ ಪ್ರದೇಶದ ಬರೇಲಿಗೆ ತೆರಳಿ ಕ್ಯಾಬ್ ಚಾಲಕರ ಭೀಕರ ಕೊಲೆಗಳಲ್ಲಿ ಭಾಗಿಯಾಗಿದ್ದಾನೆ. ಧೀರೇಂದ್ರ ಮತ್ತು ದಿಲೀಪ್ ನೇಗಿ ಜೊತೆ ಸೇರಿ ಈ ಕೃತ್ಯ ಎಸಗಿದ್ದಾನೆ ಎಂದು ಹೇಳಲಾಗಿದೆ. ಕಳ್ಳತನದಿಂದ ಹಿಡಿದು ಅಕ್ರಮ ಶಸ್ತ್ರಾಸ್ತ್ರಗಳನ್ನು ಹೊಂದಿರುವವರೆಗೆ ಲಂಬಾ ವಿರುದ್ಧ ಹಲವು ಇತರ ಪ್ರಕರಣಗಳಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಲಂಬಾ 2008ರಿಂದ 2018ರವರೆಗೆ ನೇಪಾಳದಲ್ಲಿ ವಾಸಿಸುತ್ತಿದ್ದ. ಬಳಿಕ ಕುಟುಂಬದೊಂದಿಗೆ ಡೆಹ್ರಾಡೂನ್‌ಗೆ ಸ್ಥಳಾಂತರಗೊಂಡಿದ್ದ. ಈತ ಇನ್ನಷ್ಟೂ ಕೊಲೆ ನಡೆಸಿರುವ ಸಾಧ್ಯತೆಯಿದೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಈತ 2020ರಲ್ಲಿ ಒಡಿಶಾದಿಂದ ದೆಹಲಿ ಸೇರಿದಂತೆ ಭಾರತದ ಇತರ ಭಾಗಗಳಿಗೆ ಗಾಂಜಾ ಪೂರೈಕೆ ಕೃತ್ಯದಲ್ಲಿ ಭಾಗಿಯಾಗಿದ್ದ ಎಂಬ ಆರೋಪವಿದೆ. ಇತ್ತೀಚೆಗೆ 2021ರಲ್ಲಿ ದೆಹಲಿಯ ಪಿಎಸ್ ಸಾಗರ್‌ಪುರದಲ್ಲಿ ಎನ್‌ಡಿಪಿಎಸ್ ಕಾಯ್ದೆಯಡಿಯಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ಮತ್ತು 2024ರಲ್ಲಿ ಒಡಿಶಾದ ಬೆಹ್ರಾಂಪುರದಲ್ಲಿ ನಡೆದ ಆಭರಣ ಅಂಗಡಿ ದರೋಡೆ ಪ್ರಕರಣದಲ್ಲಿಯೂ ಈತನನ್ನು ಬಂಧಿಸಲಾಗಿತ್ತು. ಜಾಮೀನಿನ ಮೇಲೆ ಹೊರಗಿದ್ದನು. ಆದರೆ ಈತನೇ 2001ರ ಸರಣಿ ಹತ್ಯೆ ಪ್ರಕರಣದ ಆರೋಪಿ ಎಂದು ಎಲ್ಲಿಯೂ ಬಹಿರಂಗವಾಗದಂತೆ ನೋಡಿಕೊಂಡಿದ್ದ ಎಂದು ಪೊಲೀಸ್ ಹೇಳಿಕೆಯಲ್ಲಿ ತಿಳಿಸಿದೆ.
