ಉತ್ತರಾಖಂಡ ಮೂಲದ ಒಂದೇ ಕುಟುಂಬದ ಏಳು ಮಂದಿಯ ಮೃತದೇಹವು ಹರಿಯಾಣದ ಪಂಚಕುಲದ ಸೆಕ್ಟರ್ 27ರಲ್ಲಿ ನಿಲ್ಲಿಸಿದ್ದ ಕಾರಿನಲ್ಲಿ ಪತ್ತೆಯಾಗಿದೆ. ಸೋಮವಾರ ರಾತ್ರಿ 10 ಗಂಟೆ ಸುಮಾರಿಗೆ ಕಾರಿನಲ್ಲಿ ಮೃತದೇಹಗಳು ಪತ್ತೆಯಾಗಿದ್ದು, ಆತ್ಮಹತ್ಯೆ ಶಂಕೆ ವ್ಯಕ್ತವಾಗಿದೆ.
ಸುಮಾರು 12-13 ವರ್ಷ ವಯಸ್ಸಿನ ಇಬ್ಬರು ಅಪ್ರಾಪ್ತ ಬಾಲಕಿಯರು, ಅವರ 14 ವರ್ಷ ವಯಸ್ಸಿನ ಸಹೋದರ, ಬಾಲಕಿಯರ ಪೋಷಕರು, ಅಜ್ಜ-ಅಜ್ಜಿ ಸೇರಿ ಒಟ್ಟು ಏಳು ಮಂದಿ ಮೃತಪಟ್ಟಿದ್ದಾರೆ.
ಇದನ್ನು ಓದಿದ್ದೀರಾ? ಕಾರಿನಲ್ಲಿ ಐವರ ಮೃತದೇಹ ಪತ್ತೆ; ಸಾಮೂಹಿಕ ಆತ್ಮಹತ್ಯೆ ಶಂಕೆ!
ಈ ಹಿಂದೆ ಕುಟುಂಬವು ಚಂಡೀಗಢದಲ್ಲಿ ವಾಸಿಸುತ್ತಿತ್ತು. ಇದೀಗ ಪಂಚಕುಲದಲ್ಲಿ ಕಾರಿನಲ್ಲಿ ಮೃತದೇಹ ಪತ್ತೆಯಾಗಿದೆ. ಆತ್ಮಹತ್ಯೆ ಶಂಕೆ ವ್ಯಕ್ತವಾಗಿದೆ ಎಂದು ಎಸಿಪಿ (ಪ್ರಧಾನ ಕಚೇರಿ) ವಿಕ್ರಮ್ ನೆಹ್ರಾ ಹೇಳಿದ್ದಾರೆ.
ಕಾರಿನ ‘ವಿಂಡ್ ಷೀಲ್ಡ್’ ಮರೆ ಮಾಚಲಾಗಿತ್ತು. ಇದು ವಿಚಿತ್ರವಾಗಿ ಕಂಡ ಕಾರಣ ವ್ಯಕ್ತಿಯೊಬ್ಬರು ಕಾರನ್ನು ಪರಿಶೀಲಿಸಿದ್ದಾರೆ. ಈ ವೇಳೆ ಕಾರಿನಲ್ಲಿ ಏಳು ಮಂದಿ ಪ್ರಜ್ಞಾಹೀನ ಸ್ಥಿತಿಯಲ್ಲಿರುವುದು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂದು ವರದಿಯಾಗಿದೆ.
ಮಕ್ಕಳ ತಂದೆ ಮಾತ್ರ ಉಸಿರಾಡುತ್ತಿದ್ದರು. ಆದರೆ ಚಿಕಿತ್ಸೆಯ ಸಮಯದಲ್ಲಿ ಅವರೂ ಮೃತಪಟ್ಟಿದ್ದಾರೆ. ಸದ್ಯ ಲುಧಿಯಾನದಲ್ಲಿರುವ ಈ ಕುಟುಂಬದ ಸಂಬಂಧಿಕರಿಗೆ ಮಾಹಿತಿ ನೀಡಲಾಗಿದೆ. ಪ್ರಕರಣವನ್ನು ಎಲ್ಲಾ ದೃಷ್ಟಿಕೋನಗಳಿಂದ ಕೂಲಂಕಷವಾಗಿ ತನಿಖೆ ನಡೆಸಲಾಗುತ್ತಿದೆ ಎಂದು ಚಂಡಿಮಂದಿರ್ ಠಾಣಾ ಅಧಿಕಾರಿ ರಾಮ್‌ಪಾಲ್ ತಿಳಿಸಿದ್ದಾರೆ.
ಈ ಬಗ್ಗೆ ಮಾಧ್ಯಮಕ್ಕೆ ಮಾಹಿತಿ ನೀಡಿರುವ ಕುಟುಂಬಸ್ಥ ರಾಕೇಶ್ ಗುಪ್ತಾ, “ಅವರು ಸಾಲ ಪಡೆದಿರಬಹುದು. ಭಾಗೇಶ್ವರ ಧಾಮಕ್ಕೆ ಭೇಟಿ ನೀಡಲು ಅವರು ಬಂದಿದ್ದರು ಎಂದು ಪೊಲೀಸರು ನಮಗೆ ತಿಳಿಸಿದ್ದಾರೆ. ಕುಟುಂಬದಲ್ಲಿ ಕೊಂಚ ಸಮಸ್ಯೆ ಇತ್ತು. ಆದರೆ ನಾವು ನಮ್ಮಿಂದ ಸಾಧ್ಯವಾದಷ್ಟು ಸಹಾಯ ಮಾಡುತ್ತಿದ್ದೆವು” ಎಂದು ಹೇಳಿದ್ದಾರೆ.
