ಭಾರಿ ಮಳೆಯಿಂದಾಗಿ ಉತ್ತರ ಭಾರತ ನಲುಗಿದೆ. ದೆಹಲಿ, ಹರಿಯಾಣ, ಹಿಮಾಚಲ ಪ್ರದೇಶ, ಉತ್ತರಾಖಂಡ, ರಾಜಸ್ಥಾನ, ಪಂಜಾಬ್ ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ಈಗಾಗಲೇ ಮಳೆ ಸುರಿಯುತ್ತಿದ್ದು, ಮುಂದಿನ ಕೆಲವು ದಿನಗಳಲ್ಲಿ ಇನ್ನಷ್ಟು ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ.
ದೆಹಲಿ ಯಲ್ಲಿ 40 ವರ್ಷದಲ್ಲೇ ದಾಖಲೆ ಮಳೆ ಸುರಿದಿದೆ. ಕಳೆದ 24 ಗಂಟೆಗಳ ಅವಧಿಯಲ್ಲಿ 153 ಮೀ .ಮೀ . ದಾಖಲೆ ಮಳೆ ಸುರಿದ ಪರಿಣಾಮ ರಾಷ್ಟ್ರ ರಾಜಧಾನಿ ಅಕ್ಷರಶಃ ನಲುಗಿದೆ.
1982ರ ನಂತರ ದೆಹಲಿ ಕಂಡ ಅತ್ಯಂತ ದೊಡ್ಡ ಮಳೆ ಇದಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. 1982ರಲ್ಲಿ 16.9 ಸೆಂ .ಮೀ . ಮಳೆಯಾಗಿತ್ತು. 2003ರ ಜುಲೈ 10ರಂದು 13.34 ಸೆಂ .ಮೀ . ಮಳೆಯಾಗಿತ್ತು. 1958ರ ಜುಲೈ 21ರಂದು 26.6 ಸೆಂ .ಮೀ .ನಷ್ಟು ಮಳೆಯಾದ ಕುರಿತು ಐಎಂಡಿ ಮಾಹಿತಿ ನೀ ಡಿದೆ.
ಇಂದು(ಜುಲೈ 09) ಕೂಡ ದೆಹಲಿ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾರೀ ಮಳೆ ಮುಂದುವರೆದಿದೆ. ಗುರುಗ್ರಾಮ್‌ನ ಹಲವಾರು ಭಾಗಗಳು ಜಲಾವೃತವಾಗಿ ಹಲವು ಕಡೆ ವಿದ್ಯುತ್ ಕಡಿತಗೊಳಿಸಲಾಗಿದೆ. ದೆಹಲಿ ಯಲ್ಲಿ 58 ವರ್ಷದ ಮಹಿಳೆಯೊಬ್ಬರು ಫ್ಲಾಟ್‌ನ ಮೇಲ್ಛಾವಣಿ ಕುಸಿದುಬಿದ್ದು ಸಾವನ್ನಪ್ಪಿದ್ದಾರೆ.
ಈ ಸುದ್ದಿ ಓದಿದ್ದೀರಾ? ಥ್ರೆಡ್ಸ್: ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಕೋಟಿ ಮಂದಿ ಇನ್‌ಸ್ಟಾಲ್; ಆ್ಯಪ್‌ನಲ್ಲಿರುವ ವಿಶೇಷತೆಗಳೇನು?
ದೆಹಲಿ ಮಾತ್ರವಲ್ಲದೆ ರಾಜಸ್ಥಾನದಲ್ಲಿ 24 ಗಂಟೆಗಳ ಅವಧಿಯಲ್ಲಿ ಮಳೆ ಸಂಬಂಧಿತ ಘಟನೆಗಳಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ. ರಾಜ್‌ಸಮಂದ್, ಜಲೋರ್, ಪಾಲಿ, ಅಜ್ಮೀರ್, ಅಲ್ವಾರ್, ಬನ್ಸ್ವಾರಾ, ಭರತ್‌ಪುರ್, ಭಿಲ್ವಾರಾ, ಬುಂದಿ, ಚಿತ್ತೋರ್‌ಗಢ, ದೌಸಾ, ಧೌಲ್‌ಪುರ್, ಜೈಪುರ ಮತ್ತು ಕೋಟಾ ಸೇರಿದಂತೆ ರಾಜಸ್ಥಾನದ ಒಂಬತ್ತಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಐಎಂಡಿ ಮುನ್ಸೂಚನೆ ನೀಡಿದೆ.
ಅಮರನಾಥ ಯಾತ್ರೆ ಸ್ಥಗಿತ
ನಿರಂತರ ಮಳೆ ಮತ್ತು ಭೂಕುಸಿತದ ಹಿನ್ನೆಲೆಯಲ್ಲಿ ವಾರ್ಷಿಕ ಅಮರನಾಥ ಯಾತ್ರೆಯನ್ನು ಸತತ ಮೂರನೇ ದಿನವಾದ ಇಂದು ಸ್ಥಗಿತಗೊಳಿಸಲಾಗಿದೆ. ಶ್ರೀನಗರ-ಜಮ್ಮು ಹೆದ್ದಾರಿಯಲ್ಲಿ ಸುಮಾರು 3,000 ವಾಹನಗಳು ಸಿಲುಕಿಕೊಂಡಿವೆ, ಅಲ್ಲಿ ನಿನ್ನೆ ರಸ್ತೆಯ ಒಂದು ಭಾಗ ಕುಸಿದಿದೆ.
ಹಿಮಾಚಲ ಪ್ರದೇಶದ ಶಿಮ್ಲಾ, ಸಿರ್ಮೌರ್, ಲಾಹೌಲ್ ಮತ್ತು ಸ್ಪಿತಿ, ಚಂಬಾ ಮತ್ತು ಸೋಲನ್‌ನಲ್ಲಿ ಭೂಕುಸಿತಗಳು ಮತ್ತು ಹಠಾತ್ ಪ್ರವಾಹಗಳಿಂದ ಹಲವಾರು ರಸ್ತೆಗಳನ್ನು ನಿರ್ಬಂಧಿಸಲಾಗಿದೆ. ಹಿಮಾಚಲ ಪ್ರದೇಶದ ಏಳು ಜಿಲ್ಲೆಗಳಿಗೆ “ರೆಡ್ ಅಲರ್ಟ್” ಘೋಷಿಸಲಾಗಿದೆ.ಬಿಯಾಸ್ ನದಿಯು ಅಪಾಯದ ಗಡಿಯನ್ನು ದಾಡಿದ್ದು, ಕುಲು ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಯ ಒಂದು ಭಾಗ ಕೊಚ್ಚಿಹೋಗಿದೆ.
ಹರ್ಯಾಣ ಮತ್ತು ಪಂಜಾಬ್‌ನ ಹಲವು ಭಾಗಗಳಲ್ಲಿ ಭಾರೀ ಮಳೆ ಸುರಿದಿದೆ ಎಂದು ಹವಾಮಾನ ಕಚೇರಿ ತಿಳಿಸಿದೆ. ಎರಡು ರಾಜ್ಯಗಳ ಸಾಮಾನ್ಯ ರಾಜಧಾನಿಯಾದ ಚಂಡೀಗಢದಲ್ಲಿ ನಿನ್ನೆ ದಿನವಿಡೀ ಮಳೆ ಸುರಿಯಿತು.
ಕೇರಳ ಮತ್ತು ಕರ್ನಾಟಕದ ಹಲವು ಪ್ರದೇಶಗಳಲ್ಲಿ ನಿರಂತರ ಮಳೆ ಸುರಿದಿದೆ. ಕೇರಳದ ನಾಲ್ಕು ಜಿಲ್ಲೆಗಳಾದ ಕಲ್ಲಿಕೋಟೆ, ವಯನಾಡ್, ಕಣ್ಣೂರು ಮತ್ತು ಕಾಸರಗೋಡುಗಳಲ್ಲಿ ಐಎಂಡಿ ಯಲ್ಲೋ ಅಲರ್ಟ್ ಘೋಷಿಸಿದೆ.