ಮಹಾರಾಷ್ಟ್ರದ ಬದ್ಲಾಪುರ್ನಲ್ಲಿ ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿ ಅಕ್ಷಯ್ ಶಿಂಧೆ ಎಂಬಾತ ಪೊಲೀಸರ ಎನ್ಕೌಂಟರ್ನಲ್ಲಿ ಹತ್ಯೆಗೀಡಾಗಿದ್ದಾನೆ. ಆತನ ಎನ್ಕೌಂಟರ್ ಪೊಲೀಸರು ಪೂರ್ವನಿಯೋಜಿತ ಕೃತ್ಯವೆಂದು ಮೃತ ಆರೋಪಿಯ ಕುಟುಂಬಸ್ಥರು ಆರೋಪಿಸಿದ್ದಾರೆ. ಎನ್ಕೌಂಟರ್ ಘಟನೆ ಬಗ್ಗೆ ಮಹಾರಾಷ್ಟ್ರದ ಅಪರಾಧ ತನಿಖಾ ಇಲಾಖೆ (ಸಿಐಡಿ) ತನಿಖೆ ಆರಂಭಿಸಿದೆ.
ಬಂಧನಕ್ಕೊಳಗಾಗಿದ್ದ ಆರೋಪಿ ತಪ್ಪಿಸಿಕೊಳ್ಳಲು ಪೊಲೀಸರ ಮೇಲೆ ಗುಂಡು ಹಾರಿಸಿದ. ಬಳಿಕ, ಆತ್ಮರಕ್ಷಣೆಗಾಗಿ ಪೊಲೀಸರು ಆತನ ಮೇಲೆ ಗುಂಡು ಹಾಕಿಸಿದ್ದು, ಆತ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ಹೇಳಿಕೊಂಡಿದ್ದಾರೆ. ಆದರೆ, ಆತನ ಕುಟುಂಬಸ್ಥರು ಪೊಲೀಸರ ಹೇಳಿಕೆಯನ್ನು ತಳ್ಳಿಹಾಕಿದ್ದಾರೆ. ತಪ್ಪೊಪ್ಪಿಗೆ ನೀಡುವಂತೆ ಆತನಿಗೆ ಪೊಲೀಸರು ಒತ್ತಡ ಹೇರಿದ್ದರು ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಅಕ್ಷಯ್ ಎನ್ಕೌಂಟರ್ ಘಟನೆಯ ಬಗ್ಗೆ ಸಿಐಡಿ ತನಿಖೆ ಆರಂಭಿಸಿದೆ. ಮಂಗಳವಾರ ಸಂಜೆ ವಿಧಿವಿಜ್ಞಾನ ತಜ್ಞರ ತಂಡವು ಪೊಲೀಸ್ ವಾಹನವನ್ನು ಪರೀಕ್ಷಿಸಿದೆ. ಅಲ್ಲದೆ, ಸಿಐಡಿ ಅಧಿಕಾರಿಗಳು ಅಕ್ಷಯ್ ಶಿಂಧೆಯ ಪೋಷಕರ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದಾರೆ.
ಮುಂಬ್ರಾ ಬೈಪಾಸ್ನಲ್ಲಿ ನಡೆದ ಘಟನಾ ಸ್ಥಳಕ್ಕೆ ಸಿಐಡಿ ಅಧಿಕಾರಿಗಳ ತಂಡ ಭೇಟಿ ನೀಡಲಿದ್ದು, ಎನ್ಕೌಂಟರ್ ವೇಳೆ ಪೊಲೀಸ್ ವಾಹನದಲ್ಲಿದ್ದ ಪೊಲೀಸ್ ಸಿಬ್ಬಂದಿಯ ಹೇಳಿಕೆಗಳನ್ನೂ ದಾಖಲಿಸಿಕೊಳ್ಳಲಾಗುವುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಶಿಂಧೆ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಥಾಣೆಯ ಕಲ್ವಾ ನಾಗರಿಕ ಆಸ್ಪತ್ರೆಯಿಂದ ಮುಂಬೈನ ಸರ್ಕಾರಿ ಜೆಜೆ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಪ್ರಕರಣದ ಹಿನ್ನೆಲೆ
ಥಾಣೆ ಜಿಲ್ಲೆಯ ಬದ್ಲಾಪುರ್ ಪಟ್ಟಣದ ಶಾಲೆಯೊಂದರಲ್ಲಿ ಇಬ್ಬರು ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಪ್ರಕರಣದಲ್ಲಿ ಅಕ್ಷಯ್ ಶಿಂಧೆ ಆರೋಪಿಯಾಗಿದ್ದರು. ಶಾಲೆಯ ಶೌಚಾಲಯದಲ್ಲಿ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆಂದು ಆರೋಪಿಸಲಾಗಿತ್ತು. ಆಗಸ್ಟ್ 17ರಂದು ಆತನನ್ನು ಬಂಧಿಸಲಾಗಿತ್ತು.
ಸೋಮವಾರ ಸಂಜೆ ಥಾಣೆಯ ಮುಂಬ್ರಾ ಬೈಪಾಸ್ ಬಳಿ ಅಕ್ಷಯ್ನನ್ನು ಪೊಲೀಸ್ ವಾಹನದಲ್ಲಿ ಕರೆದೊಯ್ಯುತ್ತಿದ್ದಾಗ ಪೊಲೀಸರ ಬಂದೂಕನ್ನು ಕಿತ್ತುಕೊಂಡು ಗುಂಡಿನ ದಾಳಿ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ. ಆತ ದಾಳಿ ಮಾಡಿದ ಬಳಿಕ, ಪೊಲೀಸ್ ಅಧಿಕಾರಿಯೊಬ್ಬರು ಆತನ ಮೇಲೆ ಗುಂಡು ಹಾರಿಸಿದ್ದಾರೆ. ಗುಂಡಿನ ದಾಳಿಯಲ್ಲಿ ಗಾಯಗೊಂಡಿದ್ದ ಅಕ್ಷಯ್ನನ್ನು ಕಲ್ವಾ ನಾಗರಿಕ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯಲ್ಲಿ ಅಕ್ಷಯ್ ಸಾವನ್ನಪ್ಪಿದ್ದಾರೆ.
ಆದರೆ, ಪೊಲೀಸರ ಮೇಲೆ ಅಕ್ಷಯ್ ಗುಂಡು ಹಾರಿಸಿದರು. ಬಳಿಕ, ಪೊಲೀಸರು ಪ್ರತಿದಾಳಿ ನಡೆಸಿ ಆತನನ್ನು ಕೊಂದರು ಎಂಬ ಪೊಲೀಸರ ಹೇಳಿಕೆಯನ್ನು ಆತನ ಕುಟುಂಬಸ್ಥರು ಅಲ್ಲಗಳೆದಿದ್ದಾರೆ. “ಪೊಲೀಸರು ಬಲವಂತವಾಗಿ ಆತನಿಂದ ತಪ್ಪೊಪ್ಪಿಗೆ ಬರೆಸಿಕೊಂಡಿದ್ದಾರೆ. ಪೊಲೀಸರು ಆತನಿಂದ ಏನು ಬರೆಸಿಕೊಂಡರು ಎಂಬುದು ಅವರಿಗೆ ಮಾತ್ರವೇ ತಿಳಿದಿದೆ” ಎಂದು ಅಕ್ಷಯ್ ತಾಯಿ ಮತ್ತು ಆತನ ಚಿಕ್ಕಪ್ಪ ಹೇಳಿದ್ದಾರೆ.
ಈ ವರದಿ ಓದಿದ್ದೀರಾ?: ಉತ್ತರ ಪ್ರದೇಶ | ಅತ್ಯಾಚಾರಕ್ಕೊಳಗಾದ ಬಾಲಕಿಯನ್ನು ತನ್ನ ಮಕ್ಕಳೊಂದಿಗೆ ಸೇರಿ ಕೊಂದ ತಾಯಿ!
“ಅಕ್ಷಯ್ ಹತ್ಯೆ ಬಗ್ಗೆ ತನಿಕೆ ನಡೆಸಬೇಕು. ಅಕ್ಷಯ್ ಹತ್ಯೆ ಪೊಲೀಸರು ಮತ್ತು ಬದ್ಲಾಪುರ ಶಾಲಾ ಆಡಳಿತ ಮಂಡಳಿಯ ಪಿತೂರಿಯಿಂದ ನಡೆದಿದೆ” ಎಂದು ಅಕ್ಷಯ್ ತಂದೆ ಅಣ್ಣಾ ಶಿಂಧೆ ಆರೋಪಿಸಿದ್ದಾರೆ.
“ಕಸ್ಟಡಿಯಲ್ಲಿ ಪೊಲೀಸರು ಥಳಿಸುತ್ತಿದ್ದಾರೆ ಎಂದು ಅಕ್ಷಯ್ ಹೇಳಿಕೊಂಡಿದ್ದರು. ನನ್ನ ಮಗ ಪಟಾಕಿ ಸಿಡಿಸಲು ಮತ್ತು ರಸ್ತೆ ದಾಟಲು ಹೆದರುತ್ತಿದ್ದನು. ಆತ ಪೊಲೀಸರ ಮೇಲೆ ಹೇಗೆ ಗುಂಡು ಹಾರಿಸುತ್ತಾನೆ ಎಂದರೆ ನಂಬಲು ಸಾಧ್ಯವೇ. ಪೊಲೀಸರು ನಮ್ಮ ಮಗನನ್ನು ಕೊಂದಿದ್ದಾರೆ. ಶಾಲೆಯ ಆಡಳಿತವನ್ನು ಸಹ ತನಿಖೆಗೆ ಒಳಪಡಿಸಬೇಕು” ಎಂದು ಅಕ್ಷಯ್ ತಾಯಿ ಒತ್ತಾಯಿಸಿದ್ದಾರೆ.
“ಅಕ್ಷಯ್ ತಪ್ಪು ಮಾಡಿದ್ದರೆ ಆರೋಪಿತ ಪ್ರಕರಣದಲ್ಲಿ ವಿಚಾರಣೆಗಾಗಿ ಆತನನ್ನು ನ್ಯಾಯಾಲಯಕ್ಕೆ ಕರೆದೊಯ್ಯಬೇಕಾಗಿತ್ತು. ಅಕ್ಷಯ್ ವಿರುದ್ಧದ ಆರೋಪಗಳು ಸಾಬೀತಾಗಿಲ್ಲ. ಪೊಲೀಸರು ಅವನನ್ನು ಏಕೆ ಕೊಂದರು” ಎಂದು ಅವರು ಪ್ರಶ್ನಿಸಿದ್ದಾರೆ.