ತೆಲುಗು ಚಿತ್ರರಂಗದ ಖ್ಯಾತ ನೃತ್ಯ ಸಂಯೋಜಕ (ಕೊರಿಯೋಗ್ರಾಫರ್) ಜಾನಿ ಮಾಸ್ಟರ್ ವಿರುದ್ಧ ಅವರ ಮಾಜಿ ಸಹೋದ್ಯೋಗಿಯೊಬ್ಬರು ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದಾರೆ. ತಮಗೆ ಜಾನಿ ಮಾಸ್ಟರ್ ಹಲವಾರು ವರ್ಷಗಳಿಂದ ಲೈಂಗಿಕ ಕಿರುಕುಳ ನೀಡಿದ್ದಾರೆಂದು ಆರೋಪಿಸಿದ್ದಾರೆ. ದೂರಿನ ಆಧಾರದ ಮೇಲೆ ಜಾನಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ತಾನು ಅಪ್ರಾಪ್ತೆಯಾಗಿದ್ದಾಗಲೇ ತನಗೆ ಲೈಂಗಿಕ ಕಿರುಕುಳ ನೀಡಲು ಜಾನಿ ಮಾಸ್ಟರ್ ಆರಂಭಿಸಿದ್ದರು. ಹಲವು ಸಂದರ್ಭಗಳಲ್ಲಿ ನನ್ನ ಮೇಲೆ ದೌರ್ಜನ್ಯ ನಡೆಸಿದ್ದಾರೆ ಎಂದು ದೂರುದಾರ ಮಹಿಳೆ ಆರೋಪಿಸಿದ್ದಾರೆ.
“ನಾನು ಜಾನಿ ಮಾಸ್ಟರ್‌ಗೆ ಸಹಾಯಕಿಯಾಗಿ ಕೆಲಸ ಮಾಡುತ್ತಿದೆ. ಆಗ, ವಿವಿಧ ನಗರಗಳಲ್ಲಿ ತಮ್ಮ ಚಿತ್ರೀಕರಣಕ್ಕೆ ತೆರಳಿದ್ದಾಗ ಅನೇಕ ಬಾರಿ ತನ್ನ ಮೇಲೆ ಜಾನಿ ಮಾಸ್ಟರ್ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಜೀವ ಬೆದರಿಕೆಯನ್ನೂ ಹಾಕಿದ್ದಾರೆ. ಮಾತ್ರವಲ್ಲದೆ, ಬೇರೆಲ್ಲಿಯೂ ಉದ್ಯೋಗಾವಕಾಶ ಸಿಗದಂತೆ ಮಾಡುತ್ತೇನೆಂದು ಬ್ಲಾಕ್‌ಮೇಲ್ ಮಾಡುತ್ತಿದ್ದಾರೆ” ಎಂದೂ ಮಹಿಳೆ ದೂರಿದ್ದಾರೆ.
ಜಾನಿ ಮಾಸ್ಟರ್ ವಿರುದ್ಧ ತೆಲುಗು ಚಲನಚಿತ್ರ ವಾಣಿಜ್ಯ ಮಂಡಳಿಗೆ ಸಂತ್ರಸ್ತೆ ಮೊದಲು ದೂರು ನೀಡಿದ್ದರು. ಮಂಡಳಿಯು ಚಿತ್ರರಂಗದಲ್ಲಿ ನಡೆಯುವ ಲೈಂಗಿಕ ಕಿರುಕುಳ ಪ್ರಕರಣಗಳನ್ನು ತನಿಖೆ ನಡೆಸಲು ಸಮಿತಿಯನ್ನು ರಚನೆ ಮಾಡಿದೆ. ಸಮಿತಿಯ ಅಧ್ಯಕ್ಷೆ, ನಟಿ ಝಾನ್ಸಿ ಅವರು ಮಹಿಳೆಯ ದೂರಿನ ಬಗ್ಗೆ ಪ್ರತಿಕ್ರಿಯಿಸಿದ್ದು, “ದೂರುದಾರೆ ಮೇಲೆ ಲೈಂಗಿಕ ಕಿರುಕುಳ ಎಸಗಲು ಆರಂಭವಾದಾಗ ಆಕೆ ಅಪ್ರಾಪ್ತರಾಗಿದ್ದರು. ಹೀಗಾಗಿ, ಪೋಕ್ಸೋ ಕಾಯ್ದೆಯ ಸೆಕ್ಷನ್‌ಗಳ ಅಡಿಯಲ್ಲೂ ಪ್ರಕರಣ ದಾಖಲಿಸಬೇಕು. ಆದ್ದರಿಂದ, ಮಹಿಳೆಯ ದೂರನ್ನು ಸ್ವೀಕರಿಸಿದ ಸಮಿತಿ, ಆಕೆಗೆ ಪೊಲೀಸರಿಗೆ ದೂರು ನೀಡುವಂತೆ ಸಲಹೆ ನೀಡಲಾಗಿತ್ತು” ಎಂದು ತಿಳಿಸಿದ್ದಾರೆ.
ಈ ವರದಿ ಓದಿದ್ದೀರಾ?: ತಮಿಳು ಚಿತ್ರನಿರ್ದೇಶಕ ನನ್ನ ಜನನಾಂಗಕ್ಕೆ ‘ರಾಡ್’ ತುರುಕಿಸಿದ್ದರು : ನಟಿ ಸೌಮ್ಯ ಗಂಭೀರ ಆರೋಪ
ಜಾನಿ ಮಾಸ್ಟರ್ ಅಧ್ಯಕ್ಷರಾಗಿರುವ ತೆಲುಗು ನೃತ್ಯ ನಿರ್ದೇಶಕರ ಸಂಸ್ಥೆಗೆ ಯಾವುದೇ ಕಾರ್ಯಕ್ರಮವನ್ನು ನಿರ್ವಹಿಸಲು ಅವಕಾಶ ನೀಡದಂತೆ ಚಲನಚಿತ್ರ ಮಂಡಳಿಯನ್ನು ಸಮಿತಿ ಒತ್ತಾಯಿಸಿದೆ ಎಂದೂ ಅವರು ಹೇಳಿದ್ದಾರೆ.
ಸಂತ್ರಸ್ತ ಮಹಿಳೆ ನೀಡಿದ ದೂರಿನ ಮೇರೆಗೆ ಎಫ್‌ಐಆರ್ ದಾಖಲಾಗಿದೆ. ಜಾನಿ ಮಾಸ್ಟರ್ ವಿರುದ್ಧ ಅತ್ಯಾಚಾರ ಮತ್ತು ಕ್ರಿಮಿನಲ್ ಬೆದರಿಕೆಯ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ವರದಿಯಾಗಿದೆ.
ಜಾನಿ ಮಾಸ್ಟರ್ ಅವರು ಪವನ್ ಕಲ್ಯಾಣ್ ನೇತೃತ್ವದ ಜನಸೇನೆ ಪಕ್ಷದ ಸದಸ್ಯರಾಗಿದ್ದಾರೆ. ಜನಸೇನೆ, ಪ್ರಸ್ತುತ ಆಂಧ್ರಪ್ರದೇಶದಲ್ಲಿ ಸರ್ಕಾರ ರಚಿಸಿರುವ ಮೈತ್ರಿಕೂಟದ ಭಾಗವಾಗಿದೆ. ಪಕ್ಷದ ಕಾರ್ಯಕ್ರಮಗಳಿಂದ ದೂರ ಇರುವಂತೆ ಜಾನಿ ಮಾಸ್ಟರ್‌ಗೆ ತಿಳಿಸಲಾಗಿದೆ ಎಂದು ಜನಸೇನೆ ಹೇಳಿಕೊಂಡಿದೆ.