ಲೈಂಗಿಕ ಕಿರುಕುಳವನ್ನು ಪ್ರತಿಭಟಿಸಿದ ದಲಿತ ಯುವತಿಯನ್ನು ಕಾಮುಕರು ಬಿಸಿ ಎಣ್ಣೆಯಿದ್ದ ಕಡಾಯಿ ದೂಡಿ ಕ್ರೌರ್ಯ ಮೆರೆದಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಬಾಗ್‌ಪತ್‌ನಲ್ಲಿ ನಡೆದಿದೆ. ಯುವತಿಗೆ ಗಂಭೀರ ಸುಟ್ಟ ಗಾಯಗಳಾಗಿದ್ದು, ಅಕೆಯನ್ನು ದೆಹಲಿಯ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಗಿರಾಣಿ ಮಾಲೀಕ ಸೇರಿದಂತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಯುವತಿಯ ಸಹೋದರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸಂತ್ರಸ್ತ ಯುವತಿ ಮತ್ತು ಕುಟುಂಬದ ಸದಸ್ಯರು ಧನೂರ ಸಿಲ್ವರ್‌ನಗರ ಗ್ರಾಮದ ಆಯಿಲ್ ಮಿಲ್‌ನಲ್ಲಿ ಕೆಲಸ ಮಾಡುತ್ತಿದ್ದರು. ಆರೋಪಿಗಳಾದ ಗಿರಣಿ ಮಾಲೀಕ ಪ್ರಮೋದ್, ಸಹಚರರಾದ ರಾಜು ಮತ್ತು ಸಂದೀಪ್ ಸಂತ್ರಸ್ತೆಗೆ ಕಿರುಕುಳ ನೀಡಿದ್ದಾರೆ. ಆಕೆ ವಿರೋಧ ವ್ಯಕ್ತಪಡಿಸಿದಾಗ ಆರೋಪಿಗಳು ಜಾತಿ ನಿಂದನೆ ಮಾಡಿ, ಆಕೆಯನ್ನು ಬಿಸಿ ಎಣ್ಣೆಯಿದ್ದ ಕಡಾಯಿಗೆ ತಳ್ಳಿದ್ದಾರೆ ಎಂದು ದೂರಿನಲ್ಲಿ ವಿವರಿಸಿದ್ದಾರೆ.
ದೆಹಲಿಯ ಆಸ್ಪತ್ರೆಯಲ್ಲಿ ಹೇಳಿಕೆ ನೀಡಿರುವ ಸಂತ್ರಸ್ತೆ, “18 ವರ್ಷದ ಆರೋಪಿ ತನ್ನೊಂದಿಗೆ ಅನುಚಿತವಾಗಿ ವರ್ತಿಸಿದ. ಅದನ್ನು ವಿರೋಧಿಸಿದ್ದಕ್ಕೆ ನನ್ನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಕಡಾಯಿಗೆ ತಳ್ಳಿದರು” ಎಂದು ಹೇಳಿದ್ದಾರೆ.
ಯುವತಿಯ ದೇಹದ ಅರ್ಧಕ್ಕಿಂತಲೂ ಹೆಚ್ಚು ಭಾಗದಲ್ಲಿ ಸುಟ್ಟ ಗಾಯಗಳಾಗಿವೆ. ಆಕೆಯ ಕಾಲುಗಳು ಮತ್ತು ಕೈಗಳು ಗಂಭೀರವಾಗಿ ಸುಟ್ಟುಹೋಗಿವೆ ಎಂದು ವೈದ್ಯರು ತಿಳಿಸಿದ್ದಾರೆ.
ಸಂತ್ರಸ್ತೆಯ ಸಹೋದರ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಕೊಲೆ ಯತ್ನ, ಮಹಿಳೆಯ ಮೇಲೆ ಹಲ್ಲೆ ಮತ್ತು ಎಸ್‌ಸಿ/ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ತನಿಕೆ ನಡೆಯುತ್ತಿದೆ ಎಂದು ಬಾಗ್‌ಪತ್ ಸರ್ಕಲ್ ಆಫೀಸರ್ ವಿಜಯ್ ಚೌಧರಿ ತಿಳಿಸಿದ್ದಾರೆ.