ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ತಮಿಳುನಾಡಿನ ವಾಲ್ಪಾರೈ ಸರ್ಕಾರಿ ವೈದ್ಯಕೀಯ ಕಾಲೇಜಿನ ಪ್ರಾಧ್ಯಾಪಕ, ಇಬ್ಬರು ಹಂಗಾಮಿ ಪ್ರಾಧ್ಯಾಪಕರು ಮತ್ತು ಓರ್ವ ಪ್ರಯೋಗಾಲಯ ತಂತ್ರಜ್ಞರನ್ನು ಪೊಲೀಸರು ಬಂಧಿಸಿದ್ದಾರೆ. ಆ ನಾಲ್ವರನ್ನೂ ಸೇವೆಯಿಂದ ಅಮಾನತುಗೊಳಿಸಿ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.
ಕಳೆದ ತಿಂಗಳು (ಆಗಸ್ಟ್) 30ರಂದು ಕಾಲೇಜಿನಲ್ಲಿ ರಾಷ್ಟ್ರೀಯ ಮಹಿಳಾ ಆಯೋಗವು ಜಾಗೃತಿ ಕಾರ್ಯಕ್ರಮ ಆಯೋಜಿಸಿತ್ತು. ಈ ವೇಳೆ, ವಿದ್ಯಾರ್ಥಿನಿಯರು ತಮಗೆ ಲೈಂಗಿಕ ಕಿರುಕುಳ ನೀಡಲಾಗುತ್ತಿದೆ ಎಂದು ಹೇಳಿಕೊಂಡಿದ್ದರು. ಪ್ರಾಧ್ಯಾಪಕರು ಮತ್ತು ಲ್ಯಾಬ್ ತಂತ್ರಜ್ಞರ ವಿರುದ್ಧ ಏಳು ಮಂದಿ ವಿದ್ಯಾರ್ಥಿನಿಯರು ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದರು. ಅವರ ಆರೋಪದ ಆಧಾರದ ಮೇಲೆ ಆಯೋಗದ ಸಂಯೋಜಕಿ ಕೃಷ್ಣವೇಣಿ ಪೊಲ್ಲಾಚಿ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಪ್ರಕರಣದ ದಾಖಲಿಸಿಕೊಂಡಿರುವ ಪೊಲೀಸರು ಕಾಲೇಜಿನ ಪ್ರಾಧ್ಯಾಪಕ ರಾಜಪಾಂಡಿ, ಹಂಗಾಮಿ ಪ್ರಾಧ್ಯಾಪಕರಾದ ಮುರಳಿರಾಜ್ ಮತ್ತು ಸತೀಶ್‌ಕುಮಾರ್, ಪ್ರಯೋಗಾಲಯ ಸಹಾಯಕ ಅನ್ಬರಸು ಎಂಬ ಆರೋಪಿಗಳನ್ನು ಬಂಧಿಸಿದ್ದಾರೆ. ಪ್ರಕರಣದ ಸಂಪೂರ್ಣ ತನಿಖೆ ನಡೆಸಿ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಕೊಯಮತ್ತೂರು ಜಿಲ್ಲಾಧಿಕಾರಿ ಕ್ರಾಂತಿಕುಮಾರ್ ಹೇಳಿದ್ದಾರೆ.
ಈ ವರದಿ ಓದಿದ್ದೀರಾ?: ‘ಅಪರಾಧಿಯ ಆಸ್ತಿಯನ್ನು ಹೇಗೆ ಕೆಡವುತ್ತೀರಿ’; ಸರ್ಕಾರಗಳ ಬುಲ್ಡೋಜರ್ ನ್ಯಾಯದ ವಿರುದ್ಧ ಸುಪ್ರೀಂ ಕಿಡಿ
“ಪ್ರಾಧ್ಯಾಪಕರು ಮತ್ತು ಪ್ರಯೋಗಾಲಯ ತಂತ್ರಜ್ಷರು ವಾಟ್ಸಾಪ್‌ನಲ್ಲಿ ತಮಗೆ ಅಶ್ಲೀಲ ಸಂದೇಶ ಕಳಿಸುತ್ತಿದ್ದಾರೆ. ಅಸಭ್ಯವಾಗಿ ವರ್ತಿಸುತ್ತಿದ್ದಾರೆ. ನಮಗೆ ಕಾಲೇಜಿನ ವ್ಯಾಸಂಗ ಮಾಡುವುದೇ ಕಷ್ಟವಾಗುತ್ತಿದೆ” ಎಂದು ವಿದ್ಯಾರ್ಥಿನಿಯರು ಆಯೋಗದ ಮುಖಂಡರ ಎದುರು ತಮ್ಮ ಅಳಲು ತೋಡಿಕೊಂಡಿದ್ದರು ಎಂದು ವರದಿಯಾಗಿದೆ.
“ತರಗತಿಗಳು ಮುಗಿದ ಬಳಿಕವೂ ತಮ್ಮನ್ನು ಲ್ಯಾಬ್‌ನಲ್ಲಿ ಇರುವಂತೆ ಆರೋಪಿಗಳು ಹೇಳುತ್ತಾರೆ. ಅನುಚಿತವಾಗಿ ವರ್ತಿಸುವ ಮೂಲಕ ದೈಹಿಕ ಹಿಂಸೆ ನೀಡುತ್ತಾರೆ. ತಮ್ಮನ್ನು ಅಸಭ್ಯವಾಗಿ ಸ್ಪರ್ಶಿಸುತ್ತಾರೆ” ಎಂದು ವಿದ್ಯಾರ್ಥಿನಿಯರು ಆರೋಪಿಸಿದ್ದರು.